ಬೆಳಗಾವಿ(ಜ.04): ಎರಡು ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರೂ ರೈತರ ಪರ ಚಕಾರ ಎತ್ತುತ್ತಿಲ್ಲ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುದಾನ ಕೇಳಿದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಹೀಗಾಗಿ ರಾಜ್ಯದ 25 ಬಿಜೆಪಿ ಸಂಸದರು ರಾಜೀನಾಮೆ ಕೊಟ್ಟು ಹೊರಬರಲಿ ಎಂದು ರೈತ ಮಹಿಳೆ ಜಯಶ್ರೀ ಗುರನ್ನವರ್ ಒತ್ತಾಯಿಸಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶುಕ್ರವಾರ ತುಮಕೂರಿನಲ್ಲಿ ಪ್ರಧಾನಿ ಮೋದಿ ರೈತ ಸಮಾವೇಶದಲ್ಲಿ ಭಾಗವಹಿಸಿದ್ದರು. ಆದರೆ, ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕದ ರೈತರು ತತ್ತರಿಸಿ ಹೋಗಿದ್ದಾರೆ. ಹೀಗಿದ್ದಾಗಲೂ ಪ್ರಧಾನಿ ಮೋದಿ ಮಾತ್ರ ಈ ಬಗ್ಗೆ ಮಾತನಾಡುತ್ತಿಲ್ಲ, ಸಿಎಂ ಬಿಎಸ್‌ವೈ 50 ಸಾವಿರ ಕೋಟಿ ರೂಪಾಯಿ ಅನುದಾನ ಕೇಳಿದ್ದರು. ಕೊಟ್ಟಿದ್ದು ಮಾತ್ರ 1200 ಕೋಟಿ ರು. ಮಾತ್ರ. ಯಡಿಯೂರಪ್ಪ ಅಂಗಲಾಚಿ ಬೇಡಿದರೂ ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ. ರಾಜ್ಯದಿಂದ 25 ಬಿಜೆಪಿ ಸಂಸದರನ್ನು‌ ಕೊಡುಗೆಯಾಗಿ ಕೊಟ್ಟಿದ್ದೇವೆ. ಇವರೇನು ಮಾಡುತ್ತಿದ್ದಾರೆ. ಮೊದಲು ರಾಜೀನಾಮೆ ನೀಡಿ ಹೊರಬರಲಿ ಎಂದು ಆಗ್ರಹಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈತರ ಪರ ನಿಲ್ಲದಿರುವ ಸರ್ಕಾರ ಇರಲು ಯಾವುದೇ ಅರ್ಹತೆ ಇಲ್ಲ. ಕೇಂದ್ರ ಸರ್ಕಾರ ಬಳಿ ನಮ್ಮ ಪಾಲು ಕೇಳುತ್ತಿದ್ದೇವೆ ನಾವೇನೂ ಭಿಕ್ಷೆ ಕೇಳುತ್ತಿಲ್ಲ, ನಾವು ಕೊಟ್ಟಿರುವ ತೆರಿಗೆ ಹಣದಲ್ಲಿ ನಮಗೆ ಕೊಡಿ ಅಂತ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ. 

ರಾಜ್ಯದ ರೈತರ ಹಲವು ಸಮಸ್ಯೆಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಹೋರಾಟ ಮಾಡಿಯೇ ಪರಿಹಾರ ಪಡೆಯುವ ಅನಿವಾರ್ಯತೆ ನಮಗೆ ಬಂದಿದೆ. ನಮ್ಮ ಜನಪ್ರತಿನಿಧಿಗಳು ತಮ್ಮ ಬದ್ಧತೆ, ಮೌಲ್ಯಗಳನ್ನು ಕಳೆದುಕೊಂಡಿದ್ದಾರೆ ರೈತ ಮಹಿಳೆ ಜಯಶ್ರೀ ಗುರನ್ನವರ್ ಹೇಳಿದ್ದಾರೆ.