ಮಾರ್ಚ್ 26 ರಂದು  ದೇಶದಲ್ಲಿ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದು ಬಂದ್‌ಗೆ ಬೆಂಬಲ ನೀಡಬೇಕೆಂದು ಮೈಸೂರಿನಲ್ಲಿ ವಿವಿಧ ಸಂಘಟನೆಗಳು ಮನವಿ ಮಾಡಿವೆ. 

ಮೈಸೂರು (ಮಾ.25): ಮಾ.26ರ ಭಾರತ್‌ ಬಂದ್‌ಗೆ ನಗರದ ಸಾರ್ವಜನಿಕರು, ವ್ಯಾಪಾರಿಗಳು, ಶ್ರೀಸಾಮಾನ್ಯರು ಬೆಂಬಲ ನೀಡಬೇಕು ಎಂದು ವಿವಿಧ ಕಾರ್ಮಿಕ, ರೈತ, ದಲಿತಪರ ಸಂಘಟನೆಗಳು ಮನವಿ ಮಾಡಿವೆ.

ರೈತ ವಿರೋಧಿ ಕಾನೂನುಗಳೊಡನೆ ಕಾರ್ಮಿಕ ಕಾಯಿದೆಯನ್ನು ನಾಲ್ಕು ಸಂಹಿತೆ ಮಾಡಲಾಗಿದೆ. ಇದರಿಂದಾಗಿ ಕಾರ್ಮಿಕರು ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇದರೊಡನೆ ದೇಶದಲ್ಲಿ ಬೆಲೆ ಏರಿಕೆಯಿಂದಾಗಿ ಜನಸಾವಾನ್ಯರ ಬದುಕು ದುಸ್ತರವಾಗುತ್ತದೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸುವ ಮೂಲಕ ಬಂಡವಾಳಶಾಹಿಗಳ ಕೈಗೆ ರಾಷ್ಟ್ರವನ್ನು ನೀಡಲಾಗುತ್ತಿದೆ ಎಂದು ಎಐಟಿಯುಸಿ ಮುಖಂಡ ದೇವದಾಸ್‌ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಮಾ. 26ಕ್ಕೆ ಭಾರತ ಬಂದ್‌ಗೆ ಕರೆ! ...

ಹೊಸದಿಲ್ಲಿಯ ರೈತರ ಹೋರಾಟ 117ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರೈತ ವಿರೋಧಿ ಮೂರು ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ರೈತರೊಡನೆ 12 ಸುತ್ತಿನ ಮಾತುಕತೆ ನಡೆಸಿದರೂ ಕೇಂದ್ರ ಸರ್ಕಾರ ಹಠವಾರಿ ಧೋರಣೆ ತಾಳಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಐಟಿಯ ಮುಖಂಡ ಜಿ. ಜುಂರಾಮ್‌ ಮಾತನಾಡಿ, ಮಾ. 26ರಂದು ಭಾರತ್‌ ಬಂದ್‌ನಲ್ಲಿ ಲಕ್ಷಗಟ್ಟಲೆ ಕಾರ್ಮಿಕರು ಪಾಲ್ಗೊಳ್ಳಲಿದ್ದು, ನಗರದ ವ್ಯಾಪಾರಿಗಳು, ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಕೋರಿದರು.