ಚನ್ನಪಟ್ಟಣ [ಮಾ.07]:  ಪ್ರತಿನಿತ್ಯ ಭೂತಾಯಿಯೊಂದಿಗೆ ಒಡನಾಟ ಹೊಂದಿರುವ, ಅನ್ಯರಿಗೆ ಅನ್ನವಿಕ್ಕಲು ಶ್ರಮಿಸುವ ರೈತರನಷ್ಟುಶ್ರೀಮಂತ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ. ಶ್ರೀಮಂತಿಕೆ ಎಂಬುದು ಅಂಕೆ ಸಂಖ್ಯೆಗಳ ಲೆಕ್ಕಾಚಾರವಲ್ಲ, ರೈತರು ಯಾವುದೇ ಕಾರಣಕ್ಕೂ ಹಿಂಜರಿಯಬೇಕಿಲ್ಲ ಎಂದು ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರಹೆಗಡೆ ರೈತರಿಗೆ ಸ್ಥೈರ್ಯ ತುಂಬಿದರು.

ತಾಲೂಕಿನ ದೊಡ್ಡಮಳೂರಿನಲ್ಲಿ ಗುರುವಾರ ನಡೆದ ಬಮೂಲ್‌ ಉತ್ಸವದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರ ಆಧುನಿಕತೆಯನ್ನು ಮೈಗೂಡಿಸಿಕೊಂಡು ವಿಕಸನ ಹೊಂದುತ್ತಿದೆ. ರೈತರು ಹೆಚ್ಚು ಸಂಪಾದನೆ ಮಾಡಲು ಸಾಧ್ಯ ಎಂಬ ವಾತಾವರಣ ನಿರ್ಮಾಣಗೊಂಡಿದೆ. ಮಾಹಿತಿ ತಂತ್ರಜ್ಞಾನ ಹೊಸ ಹೊಸ ಆವಿಷ್ಕಾರ ಮತ್ತು ವಿಚಾರಗಳನ್ನು ಕಲಿಸುತ್ತಿದೆ. ಇದೆಲ್ಲವನ್ನು ಸದ್ಬಳಕೆ ಮಾಡಿಕೊಳ್ಳಲು ರೈತರು ಮುಂದಾಗಬೇಕು ಎಂದರು.

ಇಂದು ರೈತರ ಮನೆಬಾಗಿಲಿಗೆ ಕಾರು ಕಂಪನಿಗಳು ಬರುತ್ತಿವೆ. ಕೃಷಿ ಕ್ಷೇತ್ರದಲ್ಲಿ ಸುಧಾರಿತ ವಿಧಾನಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ರೈತರು ಮತ್ತಷ್ಟುಆರ್ಥಿಕ ಪ್ರಗತಿಯನ್ನು ಸಾಧಿಸಬಹುದು. ನೀವು ದುಡಿದು ಗಳಿಸುವ ಒಂದೊಂದು ರೂಪಾಯಿಗೂ ಅಪಾರ ಮೌಲ್ಯವಿದೆ ಎಂದರು.

ನಾಟಿ ಹಸುವಿನ ಡೇರಿಗೆ ನೆರವು:

ತಾಲೂಕಿನಲ್ಲಿ ನಾಟಿ ಹಸುವಿನ ಡೇರಿಯನ್ನು ಪ್ರಾರಂಭಿಸಲು ನೆರವು ನೀಡುವಂತೆ ಕೋರಿದ ಬಮೂಲ್‌ ನಿರ್ದೇಶಕ ಜಯಮುತ್ತು ಮನವಿಗೆ ಸ್ಪಂದಿಸಿದ ವೀರೇಂದ್ರ ಹೆಗಡೆ, ನಾಟಿ ಹಸುಗಳ ಸಂರಕ್ಷಣೆ ಅತ್ಯವಶ್ಯಕವಾಗಿದೆ. ಈನಿಟ್ಟಿನಲ್ಲಿ ಬಮೂಲ್‌ ನಾಟಿಹಸುವಿನ ಹಾಲಿಗೆ ಹೆಚ್ಚಿನ ಹಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಾಟಿಹಸುವಿನ ಡೇರಿ ಸ್ಥಾಪನೆಗೆ ನಮ್ಮ ಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯಾದ್ಯಂತ ವಿವಿಧ ಹಾಲು ಉತ್ಪಾದಕರ ಒಕ್ಕೂಟಗಳಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ 48 ಕೋಟಿ ರು. ಗಳಷ್ಟುನೆರವು ನೀಡಲಾಗಿದೆ. ಬೆಂಗಳೂರು ಹಾಲು ಒಕ್ಕೂಟಕ್ಕೆ 3.72 ಕೋಟಿ ರು. ಸಹಾಯಧನ ನೀಡಿದ್ದು, ಮುಂದೆಯೂ ರೈತಪರ ಕೆಲಸಕ್ಕೆ ಹೆಚ್ಚಿನ ನೆರವನ್ನು ನೀಡಲಾಗುವುದು ಎಂದು ತಿಳಿಸಿದರು.

ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರಲಿ:

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ಫಟಿಕಪುರಿ ಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ರೈತರ ಸಾಲ ಮನ್ನಾದಂತಹ ಮಹತ್ತರ ಕಾರ್ಯಕ್ರಮಗಳನ್ನು ಕೈಗೊಂಡ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಇಂತಹ ಪ್ರಗತಿಪರ ಆಡಳಿತಗಾರನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಮುಂದೆ ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದ ಅವರು, ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಉತ್ತಮ ಕೆಲಸ ಮಾಡಲಿ. ಯಾವುದೇಕಾರಣಕ್ಕೂ ಕುಮಾರಸ್ವಾಮಿ ಅವರ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಾಲು ಹಾಕುತ್ತಿದ್ದವನು ನಿರ್ದೇಶಕನಾಗಿದ್ದೇನೆ:

ಚಿಕ್ಕವನಾಗಿದ್ದಾಗ ನಾನು 2 ಕಿ.ಮೀ ದೂರ ಇದ್ದ ಹಾಲಿನ ಡೇರಿಗೆ ಹೋಗಿ ಒಂದು ಲೀಟರ್‌ ಹಾಲು ಹಾಕಿಬರುತ್ತಿದ್ದೆ. ಅಂದಿನಿಂದ ನನಗೆ ಹಾಲು ಉತ್ಪಾದಕರ ಕಷ್ಟನೋವು ನಲಿವುಗಳು ಚೆನ್ನಾಗಿ ಗೊತ್ತಿದೆ. ಇದೀಗ ಒಕ್ಕೂಟದ ನಿರ್ದೇಶಕನಾಗಿ ನಿಮ್ಮ ಸೇವೆ ಮಾಡುವ ಭಾಗ್ಯ ದೊರೆತಿದ್ದು, ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘ ಇರಬೇಕು ಎಂಬುದು ನನ್ನ ಉದ್ದೇಶವಾಗಿದೆ. ತಾಲೂಕಿನಲ್ಲಿ 200ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇನೆ. ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಾಲೂಕಿನಲ್ಲಿ ಹಾಲುಉತ್ಪಾದಕರ ಕಲ್ಯಾಣ ಮಂಟಪ ಸ್ಥಾಪಿಸಲು ಪ್ರಯತ್ನಿಸುತ್ತೇನೆ ಎಂದು ತಮ್ಮ ಯೋಜನೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠಾಧೀಶ ಅನ್ನದಾನೇಶ್ವರ್‌ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಬಮೂಲ್‌ ಅಧ್ಯಕ್ಷ ನರಸಿಂಹ ಮೂರ್ತಿ, ತಾಲೂಕು ಬಮೂಲ್‌ ನಿರ್ದೇಶಕ ಎಚ್‌.ಸಿ.ಜಯಮುತ್ತು. ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್‌ ಮುಖಂಡರಾದ ಕುಕ್ಕೂರುದೊಡ್ಡಿ ಜಯರಾಂ, ಹಾಪ್‌ಕಾಮ್ಸ್‌ ದೇವರಾಜು, ಬಮೂಲ್‌ ನಿರ್ದೇಶಕರುಗಳು, ಹಿರಿಯ ಅಧಿಕಾರಿಗಳು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.