ಈಗೇನಿದ್ದರೂ ಬರೀ ಈರುಳ್ಳಿ ಕಳ್ಳರ ಹಾವಳಿ: ಬೇಸತ್ತ ರೈತ ಮಾಡಿದ್ದೇನು?
ಈರುಳ್ಳಿ ಕಳ್ಳತನ ತಡೆಗೆ ಸಂತೆ ವ್ಯಾಪಾರಿಯಿಂದ ಪ್ರಯೋಗ| ಖರೀದಿಸುವ ನೆಪದಲ್ಲಿ ಚೀಲಕ್ಕೆ ಹಾಕಿಕೊಳ್ಳುತ್ತಾರೆ ಈರುಳ್ಳಿ|ಸಂತೆಯಲ್ಲಿನ ಈರುಳ್ಳಿ ರಾಶಿಗೆ ಸಿಸಿ ಕ್ಯಾಮೆರಾ|
ಅಕ್ಕಿಆಲೂರು[ಡಿ.19]: ಈರುಳ್ಳಿ ಬೆಲೆ ಗಗನಕ್ಕೇರಿರುವ ಸುದ್ದಿ ಜನಸಾಮಾನ್ಯರನ್ನು ತಲ್ಲಣಗೊಳಿಸಿದೆ. ಒಂದೊಂದು ಈರುಳ್ಳಿಯನ್ನು ಸಹ ವ್ಯಾಪಾರಿಗಳು ಬಂಗಾರದಂತೆ ರಕ್ಷಣೆ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಪಟ್ಟಣದಲ್ಲಿ ಮಂಗಳವಾರ ನಡೆದ ಸಾಲು ಸಂತೆಯಲ್ಲಿ ವ್ಯಾಪಾರಿಯೊಬ್ಬ ಈರುಳ್ಳಿ ರಾಶಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಗಮನ ಸೆಳೆದರು.
ಈ ಸಂತೆಗೆ ಹಾನಗಲ್ಲ ಸೇರಿ ಹಾವೇರಿ ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು 10 ಸಾವಿಕ್ಕೂ ಅಧಿಕ ಸಾರ್ವಜನಿಕರು ಆಗಮಿಸುತ್ತಾರೆ. 500ಕ್ಕು ಹೆಚ್ಚು ವಿವಿಧ ಬಗೆಯ ಅಂಗಡಿಗಳಲ್ಲಿ ಸಾಕಷ್ಟು ಜನದಟ್ಟನೆ ಇರುತ್ತದೆ. ಸದ್ಯ ಒಂದು ಕಿಲೋಗೆ 100-150 ವರೆಗೂ ಈರುಳ್ಳಿ ಬೆಲೆ ಇರುವುದರಿಂದ ಸಂತೆಯಲ್ಲಿ ಸಾಮಗ್ರಿ ಖರೀದಿಸಲು ಬಂದ ಗ್ರಾಹಕರಿಂದ ಈರುಳ್ಳಿ ಕಳ್ಳತನವಾಗದಂತೆ ನೋಡಿಕೊಳ್ಳಲು ಸಿ.ಎಂ. ಉದಾಸಿ ಮುಖ್ಯ ರಸ್ತೆಯಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದ ಹಫೀಜ್ ಪಠಾಣ ಎಂಬ ವ್ಯಾಪಾರಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈರುಳ್ಳಿ ರಾಶಿಯ ಎದುರು ಖಾಲಿ ರಟ್ಟಿನ ಬಾಕ್ಸ್ ಮಧ್ಯ ಕೋಲನ್ನು ಇಟ್ಟು, ಕೋಲಿನ ತುದಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಪೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರ್ಧ ಕಿಲೋ ಈರುಳ್ಳಿ ತೆಗೆದುಕೊಳ್ಳುವ ನೆಪದಲ್ಲಿ ಕೈಗೆ ಬಂದಷ್ಟು ಈರುಳ್ಳಿಯನ್ನು ತಮ್ಮ ಸಂತೆ ಚೀಲದಲ್ಲಿ ಹಾಕಿಕೊಳ್ಳುತ್ತಾರೆ. ಅದಕ್ಕಾಗಿಯೇ ರಾಶಿಗಳ ಎದುರೆ ಎಲ್ಲರಿಗೂ ಕಾಣುವಂತೆ ಸಿಸಿ ಕ್ಯಾಮೆರಾ ಇರಿಸಿದ್ದೇನೆ. ಈ ಕ್ಯಾಮೆರಾದಲ್ಲಿ ಕೇವಲ ರೆಕಾರ್ಡ್ ಮಾತ್ರ ಆಗುತ್ತಿದೆ. ಅದನ್ನು ನೋಡಲು ಮಾನಿಟರ್ ವ್ಯವಸ್ಥೆ ಇರಲಿಲ್ಲ. ಕ್ಯಾಮೆರಾ ಹಾಕಿದ್ದರಿಂದ ಹೆದರಿ ಜನರು ಕಳ್ಳತನಕ್ಕೆ ಮುಂದಾಗುವುದಿಲ್ಲ. ಇದು ಕೇವಲ ಹೆದರಿಸುವ ತಂತ್ರ. ಆದಾಗ್ಯೂ ಮೆಮೊರಿ ಕಾರ್ಡ್ ಇದ್ದು ಅದನ್ನು ಮನೆಯಲ್ಲಿ ಪರಿಶೀಲಿಸಬಹುದಾಗಿದೆ. ಈರುಳ್ಳಿ ಕದಿಯುವ ಮುಂಚೆಯೆ ಎಚ್ಚರಿಕೆಯಿಂದ ಇರಬೇಕೆಂದು ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಹಫೀಜ್.