ಹಾವೇರಿ(ಏ.30):  ಕೃಷಿ ವಿಜ್ಞಾನ ಕೇಂದ್ರ ಮಾರ್ಗದರ್ಶನದಿಂದ ಸುರಕ್ಷಿತ ಕ್ರಮ ಅನುಸರಿಸಿ ಲಾಕ್‌ಡೌನ್‌ ಮಧ್ಯೆಯೂ ಸ್ಥಳೀಯವಾಗಿಯೇ ತರಕಾರಿಗಳ ಮಾರಾಟಕ್ಕೆ ಮಾರುಕಟ್ಟೆ ಕಂಡುಕೊಂಡ ರೈತನೋರ್ವ ಇತರ ರೈತರಿಗೆ ಮಾದರಿಯಾಗಿದ್ದಾರೆ.

ಹೌದು, ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದ ಈರಪ್ಪ ಶಿವಪ್ಪ ಕಲ್ಲಪ್ಪನವರ ಇವರೇ ಲಾಕ್‌ಡೌನ್‌ ನಡುವೆಯೂ ದೃತಿಗೆಡದೆ ತಾವು ಬೆಳೆದ ತರಕಾರಿಗಳನ್ನು ಹಳ್ಳಿ ಹಳ್ಳಿಗಳಲ್ಲಿ ಮಾರಾಟ ಮಾಡಿ ಲಾಭಗಳಿಸಿದ ರೈತ.

ಇವರು ಕಳೆದ ವರ್ಷಗಳಿಂದ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಿಂದ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿದ್ಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತಮ್ಮ 3 ಎಕೆರೆ ಪ್ರದೇಶದಲ್ಲಿ ಹೈನುಗಾರಿಕೆ, ತೋಟಗಾರಿಕೆ ಬೆಳೆಗಳಾದ ಸೌತೆಕಾಯಿ, ಟೋಮ್ಯಾಟೊ, ಬದನೆಕಾಯಿ, ಬೀನ್ಸ್‌ ಸೇರಿದಂತೆ ಇತರೆ ತರಕಾರಿಗಳನ್ನು ಶ್ರಮವಹಿಸಿ ಬೆಳೆಯುತ್ತಿದ್ದಾರೆ.

ಲಾಕ್‌ಡೌನ್‌: ಗ್ರೀನ್‌ ಝೋನ್‌ನಲ್ಲಿದ್ರೂ ಹಾವೇರಿಯಲ್ಲಿ ಆರ್ಥಿಕ ಚಟುವಟಿಕೆಗೆ ಸಿಗದ ಅವಕಾಶ

ಲಾಕ್‌ಡೌನ್‌ ಅವಧಿಯಲ್ಲಿ ತಾನು ಬೆಳೆದ ತರಕಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕೈಕಟ್ಟಿ ಕುಳಿತುಕೊಳ್ಳದೇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಅಶೋಕ ಪಿ., ಹಿರಿಯ ವಿಜ್ಞಾನಿ ಡಾ. ರಾಜಕುಮಾರ ಜಿ.ಆರ್‌. ಇವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಲಹೆ ಪಡೆದು ತರಕಾರಿಗಳನ್ನು ಕೊಯ್ಲು ಮಾಡಿದ್ದಾರೆ. ತಾವು ತರಕಾರಿಗಳನ್ನು ಸಾಗಿಸುವ ವಾಹನಕ್ಕೆ ಸೋಂಕು ನಿವಾರಕ ರಾಸಾಯನಿಕಗಳಿಂದ ಶುದ್ಧಗೊಳಿಸಿಕೊಂಡು ತರಕಾರಿಗಳನ್ನು ಸಂಗ್ರಹಣೆ ಮಾಡಿಕೊಂಡಿದ್ದಾರೆ. ನಗರ ಪ್ರದೇಶಗಳಿಗೆ ತರಕಾರಿ ಸಾಗಿಸಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಪಾಸ್‌ ಪಡೆದು ತಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಗೆ ಖುದ್ದಾಗಿ ತೆರಳಿ ತರಕಾರಿ ಮಾರಾಟ ಮಾಡುವ ಮೂಲಕ ತಾವು ಬೆಳೆದ ಬೆಳೆಗಳಿಗೆ ಉತ್ತಮ ಲಾಭ ಕಂಡು ಕೊಂಡಿದ್ದಾರೆ.

ಪ್ರತಿ ದಿನ ಜಮೀನಿಗೆ ತೆರಳಿ ಮೆಣಸಿನಕಾಯಿ, ಚೌಳಿಕಾಯಿ, ಬದನೆಕಾಯಿ, ಟೊಮೊಟೊ, ಹಿರಿಕಾಯಿ, ಈರುಳ್ಳಿ, ಕ್ಯಾರೆಟ್‌, ಬಿಟರೋಟ್‌ ಕೋಯ್ಲು ಮಾಡಿಕೊಂಡು ಬಂದು ಅದನ್ನು ಮಾರಾಟ ಮಾಡುವ ಮೂಲಕ ಲಾಕ್‌ಡೌನ್‌ ಮಧ್ಯೆಯೂ ಒಟ್ಟು 46,500 ಲಾಭ ಗಳಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದಿಂದ ಪಡೆದ ಸಲಹೆ ಯುವ ರೈತ ಈರಪ್ಪ ಕಲ್ಲಪ್ಪನವರ ಮುಖದಲ್ಲಿ ಮಂದಹಾಸ ಬೀರುವ ಹಾಗೆ ಮಾಡಿದೆ.

ಲಾಕ್‌ಡೌನ್‌ ಮಧ್ಯೆಯೂ ಹನುಮನಮಟ್ಟಿಕೃಷಿ ವಿಜ್ಞಾನ ಕೇಂದ್ರದೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿ ಮಾರಾಟಕ್ಕೆ ಸೂಕ್ತ ಸಲಹೆ ಪಡೆದಿದ್ದರಿಂದ ತರಕಾರಿಗಳು ಹೊಲದಲ್ಲೇ ಕೊಳೆತು ಹೋಗುವುದು ತಪ್ಪಿದೆ. ಈಗ ತಾನು ಹಾಕಿದ ಬಂಡವಾಳವು ಕೈ ಸೇರಿದೆ. ನಾನು ಹೊಲಕ್ಕೆ ಹಾಕಿದ ಪರಿಶ್ರಮಕ್ಕೆ ಫಲಸಿಕ್ಕಿದೆ ಎಂದು ರೈತ ಈರಪ್ಪ ಕಲ್ಲಪ್ಪನವರ ಅವರು ಹೇಳಿದ್ದಾರೆ.