ಲಾಕ್‌ಡೌನ್: ಗ್ರೀನ್ ಝೋನ್‌ನಲ್ಲಿದ್ರೂ ಹಾವೇರಿಯಲ್ಲಿ ಆರ್ಥಿಕ ಚಟುವಟಿಕೆಗೆ ಸಿಗದ ಅವಕಾಶ
ಗ್ರೀನ್ ಝೋನ್‌ನಲ್ಲಿದ್ದರೂ ತೆರೆದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು|ಗೊಂದಲದ ಹಿನ್ನೆಲೆ ಲಾಕ್‌ಡೌನ್ ಸಡಿಲಗೊಂಡರೂ ಆರಂಭವಾಗದ ಆರ್ಥಿಕ ಚಟುವಟಿಕೆ| ಜಿಲ್ಲೆ ಹಸಿರು ವಲಯದಲ್ಲಿರುವುದರಿಂದ ಎಲ್ಲ ರೀತಿಯ ಕೈಗಾರಿಕೆ, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ| ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಯಾವ ಅಂಗಡಿಗೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ: ಡಿಸಿ ಬಾಜಪೇಯಿ|
ನಾರಾಯಣ ಹೆಗಡೆ
ಹಾವೇರಿ(ಏ.30): ಕೊರೋನಾ ಪಾಸಿಟಿವ್ ಕೇಸ್ ಇಲ್ಲದ್ದರಿಂದ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಪರಿಗಣಿಸಿ ಲಾಕ್‌ಡೌನ್ ನಿಯಮ ಸಡಿಲಿಕೆಗೆ ಸರ್ಕಾರ ಆದೇಶಿಸಿದ್ದರೂ ಜಿಲ್ಲೆಯಲ್ಲಿ ಗೊಂದಲ ಮುಂದುವರಿದಿದೆ. ಸರ್ಕಾರದ ಆದೇಶ ನೋಡಿ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.
ಗ್ರೀನ್ ಝೋನ್‌ನಲ್ಲಿರುವ ಜಿಲ್ಲೆಗಳಲ್ಲಿ ಕೆಲ ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸಿ ಸರ್ಕಾರ ಮಾರ್ಗಸೂಚಿಯನ್ನು ನೀಡಿದೆ. ಅದೇ ರೀತಿ ಜಿಲ್ಲಾಧಿಕಾರಿಗಳೂ ಜಿಲ್ಲೆಯಲ್ಲಿ ಎಲ್ಲ ಆರ್ಥಿಕ ಚಟುವಟಿಕೆ, ಸೇವಾ ಚಟುವಟಿಕೆ, ಉತ್ಪಾದನೆ, ಕೈಗಾರಿಕೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನು ನೋಡಿ ವ್ಯಾಪಾರಸ್ಥರು ಬುಧವಾರ ಬೆಳಗ್ಗೆ ಅಂಗಡಿ ಮುಂಗಟ್ಟು ಒಪನ್ ಮಾಡಿದ್ದರು. ಆದರೆ, 12 ಗಂಟೆ ಸುಮಾರಿಗೆ ಪೊಲೀಸರು ತೆರಳಿ ಅಂಗಡಿ ಬಂದ್ ಮಾಡಿಸಿದ್ದಾರೆ.
'ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ'
ಬಟ್ಟೆ ಅಂಗಡಿ, ಜ್ಯುವೆಲರಿ ಶಾಪ್‌ಗಳನ್ನು ಆರಂಭಿಸುವ ಬಗ್ಗೆ ಇನ್ನೂ ಯಾವ ಸೂಚನೆ ಬಂದಿಲ್ಲ. ಆದ್ದರಿಂದ ಇವುಗಳನ್ನು ತೆರೆಯಬಾರದು ಎಂದು ಪೊಲೀಸರು ಒತ್ತಾಯದಿಂದ ಬಂದ್ ಮಾಡಿಸಿದ್ದಾರೆ. ಆದೇಶದ ಸ್ಪಷ್ಟತೆ ಇಲ್ಲದ ಕೆಲ ಪೊಲೀಸರು ಎಲ್ಲ ಅಂಗಡಿಗಳನ್ನೂ ಬಂದ್ ಮಾಡಿಸಿದ್ದಾರೆ. ಹಲವು ದಿನಗಳ ಬಳಿಕ ಅಂಗಡಿ ಬಾಗಿಲು ತೆರೆದಿದ್ದ ವ್ಯಾಪಾರಿಗಳು ಕೆಲವೇ ಗಂಟೆಗಳಲ್ಲಿ ಬಾಗಿಲು ಹಾಕುವಂತಾಯಿತು. ಸರ್ಕಾರ ಸ್ಪಷ್ಟನಿರ್ದೇಶನ ನೀಡಿದರೂ ಅಧಿಕಾರಿಗಳಲ್ಲಿರುವ ಗೊಂದಲದಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಆರಂಭಕ್ಕೆ ಅವಕಾಶ ಸಿಗಲಿಲ್ಲ.
ಆರಂಭವಾಗಿದ್ದ ಅಂಗಡಿ:
ಸರ್ಕಾರದ ನೂತನ ಮಾರ್ಗಸೂಚಿಯಂತೆ ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಸ್ಥಗಿತಗೊಳಿಸಲಾದ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಮರು ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅಲ್ಲದೇ ಈ ಚಟುವಟಿಕೆಗಳ ಆರಂಭಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ. ಉತ್ಪಾದನಾ ಚಟುವಟಿಕೆಗೆ ಯಾವುದೇ ಸಮಯ ನಿಗದಿ ಮಾಡುವುದಿಲ್ಲ. ಪಾಸ್‌ಗಳ ಅವಶ್ಯಕತೆ ಇಲ್ಲ ಎಂದೂ ತಿಳಿಸಿದ್ದರು. ಅದರಂತೆ ಬುಧವಾರ ಬೆಳಗ್ಗೆ ಹಲವು ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿದ್ದವು. ವ್ಯಾಪಾರ ವಹಿವಾಟು ಇಲ್ಲದಿದ್ದರೂ ಅಂಗಡಿ ಆರಂಭವಾಗಿದ್ದಕ್ಕೆ ಮಾಲೀಕರು ನಿರಾಳರಾಗಿದ್ದರು. ಆದರೆ, 12 ಗಂಟೆ ವೇಳೆಗೆ ಹಾವೇರಿ ನಗರ, ರಾಣಿಬೆನ್ನೂರು ಸೇರಿದಂತೆ ಜಿಲ್ಲಾದ್ಯಂತ ಪೊಲೀಸರು ತೆರೆದ ಅಂಗಡಿ ಮುಚ್ಚುವ ಕಾರ್ಯಾಚಾರಣೆ ಶುರು ಮಾಡಿದರು. ಬಹುಸಂಖ್ಯೆಯಲ್ಲಿರುವ ಬಟ್ಟೆಹಾಗೂ ಜ್ಯುವೆಲರಿ ಶಾಪ್‌ಗಳನ್ನು ಮುಚ್ಚಿಸಿದರು. ಪೊಲೀಸರ ಕ್ರಮಕ್ಕೆ ಅನೇಕ ಅಂಗಡಿಕಾರರು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರ ಅವಕಾಶ ನೀಡಿದರೂ ಪೊಲೀಸರು ಒತ್ತಾಯಪೂರ್ವಕವಾಗಿ ಅಂಗಡಿ ಮುಚ್ಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬೈಕ್‌ನಲ್ಲಿ ಒಬ್ಬರೇ ಬರಬೇಕಂತೆ:
ಬೈಕ್‌ನಲ್ಲಿ ಇಬ್ಬರು ಸಂಚರಿಸದಂತೆ ಪೊಲೀಸರು ತಡೆಯುತ್ತಿದ್ದಾರೆ. ಲಾಕ್‌ಡೌನ್ ನಿಯಮ ಸಡಿಲಗೊಳಿಸಿದ್ದರಿಂದ ವಿವಿಧ ಚಟುವಟಿಕೆಗಳಿಗೆ ತೆರಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಕೃಷಿ ಇನ್ನಿತರ ಕಾರ್ಯಕ್ಕೆ ರೈತರು ಬೈಕ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಪೊಲೀಸರು ಅಂಥವರನ್ನೆಲ್ಲ ತಡೆದು ಬೈಕ್‌ನಲ್ಲಿ ಒಬ್ಬರು ಮಾತ್ರ ಹೋಗಬೇಕು ಎಂದು ಹೇಳುತ್ತಿದ್ದಾರೆ. ಇದರಿಂದ ಮಹಿಳೆಯರು, ವೃದ್ಧರನ್ನು ಆಸ್ಪತ್ರೆಗೆ ಕರೆತರುವವರು ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಇಷ್ಟು ದಿನ ಇಲ್ಲದ ಈ ನಿಯಮ ಈಗ ಶುರು ಮಾಡಿರುವುದಕ್ಕೂ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆ ಹಸಿರು ವಲಯದಲ್ಲಿರುವುದರಿಂದ ಎಲ್ಲ ರೀತಿಯ ಕೈಗಾರಿಕೆ, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಯಾವ ಅಂಗಡಿಗೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಅಂಗಡಿ ಮುಚ್ಚಿಸಿರುವ ಬಗ್ಗೆ ಮಾತನಾಡಿ ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದ್ದಾರೆ.
ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಗಿದ್ದರೂ ಬಟ್ಟೆ ಮತ್ತು ಜ್ಯುವೆಲರಿ ಶಾಪ್ ಆರಂಭದ ಬಗ್ಗೆ ಏನೂ ತಿಳಿಸಿಲ್ಲ. ಆದ್ದರಿಂದ ಅವುಗಳನ್ನು ಬಂದ್ ಮಾಡಿಸಲಾಗಿತ್ತು. ಬೈಕ್‌ನಲ್ಲಿ ಒಬ್ಬರು ಮಾತ್ರ ಬರಬೇಕು ಎಂಬ ನಿಯಮ ಮಾಡಲಾಗಿದ್ದು, ಇದರಿಂದ ಆಸ್ಪತ್ರೆಗೆ ಬರುವವರಿಗೆ ತೊಂದರೆಯಾಗುತ್ತಿದೆ. ಈ ಗೊಂದಲದ ಬಗ್ಗೆ ಸ್ಪಷ್ಟತೆ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.