ಚಿಕ್ಕಬಳ್ಳಾಪುರ: 8 ಎಕರೆಯಲ್ಲಿ ಟೊಮೆಟೋ ಬೆಳೆದು ಕೋಟಿ ಗಳಿಸಿದ ರೈತ..!
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಪುಲಗಲ್ ಗ್ರಾಮ ಪಂಚಾಯತಿಯ ಎ.ಬೆಲ್ಲಾಲಂಪಲ್ಲಿ ಗ್ರಾಮದ ರೈತ ಪ್ರಗತಿಪರ ರೈತ ಬಿ.ನರಸಿಂಹಪ್ಪ ಎಂಬುವವರು ತಮ್ಮ 8 ಎಕರೆ ಜಮೀನಿನಲ್ಲಿ ಯಥೇಚ್ಛ ಟೊಮೆಟೋ ಬೆಳೆದು 1 ಕೋಟಿ ರು.ಗಳಿಗೂ ಅಧಿಕ ಆದಾಯ ಕಂಡಿದ್ದಾರೆ.
ಚಿಕ್ಕಬಳ್ಳಾಪುರ(ಜು.19): ಅದೃಷ್ಟವೆಂದರೆ ಹಾಗೆ ಯಾರಿಗೆ ಯಾವ ರೂಪದಲ್ಲಿ ಬರುತ್ತದೋ ತಿಳಿಯದು. ಇಲ್ಲೊಬ್ಬ ಕೃಷಿಕ ತನ್ನ 8 ಎಕರೆ ಹೊಲದಲ್ಲಿ ಟೊಮೆಟೋ ಬೆಳೆದು 1 ಕೋಟಿಗೂ ಅಧಿಕ ಆದಾಯ ಗಳಿಸಿ ಬೀಗಿದ್ದು, ತನ್ನ ಸಾಲದ ಮುಗ್ಗಟ್ಟಿನಿಂದ ಹೊರ ಬಂದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಪುಲಗಲ್ ಗ್ರಾಮ ಪಂಚಾಯತಿಯ ಎ.ಬೆಲ್ಲಾಲಂಪಲ್ಲಿ ಗ್ರಾಮದ ರೈತ ಪ್ರಗತಿಪರ ರೈತ ಬಿ.ನರಸಿಂಹಪ್ಪ ಎಂಬುವವರು ತಮ್ಮ 8 ಎಕರೆ ಜಮೀನಿನಲ್ಲಿ ಯಥೇಚ್ಛ ಟೊಮೆಟೋ ಬೆಳೆದು 1 ಕೋಟಿ ರು.ಗಳಿಗೂ ಅಧಿಕ ಆದಾಯ ಕಂಡಿದ್ದಾರೆ.
3ನೇ ವಾರವೂ ಟೊಮೆಟೋ ದರ ₹100: ಇದೇ ಮೊದಲು!
ತರಕಾರಿ ಬೆಳೆದು ನಷ್ಟ: ನರಸಿಂಹಪ್ಪ ಒಂದಿಷ್ಟು ಜಮೀನನ್ನು ಉಳುಮೆ ಮಾಡಿ ಈ ಹಿಂದೆ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಹಿಂದೆಯೂ ಕೂಡ ಬೀನ್ಸ್, ಬದನೆಕಾಯಿ, ಮೆಣಸಿಕಾಯಿ, ಕೋಸು ಇತರೆ ತರಕಾರಿಗಳನ್ನು ಬೆಳೆದು ಸ್ವಲ್ಪಮಟ್ಟಿಗೆ ನಷ್ಟವನ್ನೂ ಅನುಭವಿಸಿದ್ದರು. ಆದರೆ ಇದೀಗ ಅವರ ಪಾಲಿಗೆ ಅದೃಷ್ಟದ ಬೆಳೆಯಾಗಿ ಟೊಮೆಟೋ ಬೆಳೆ ದಕ್ಕಿದೆ. ತಮ್ಮ 8 ಎಕರೆ ಜಮೀನಿನಲ್ಲೂ ಟೊಮೆಟೋ ಬೆಳೆದಿರುವ ಅವರು ಈಗಾಗಲೇ ಮೂರು ಬಾರಿ ಕೊಯ್ಲು ಮಾಡಿದ್ದಾರೆ. ‘ಈವರೆಗೂ ಕೊಯ್ದ ಟೊಮೆಟೋವನ್ನು ಕೋಲಾರ ಹಾಗೂ ಚಿಂತಾಮಣಿ ಮಾರುಕಟ್ಟೆಗಳಿಗೆ ಹೋಗಿ ಮಾರಾಟಗಾರರಿಗೆ ನೇರ ಮಾರಾಟ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳಿಗೆ ಕೊಡಬೇಕಾದ ಹಣವೂ ಉಳಿದಿದೆ’ ಎಂದು ರೈತ ಬಿ.ನರಸಿಂಹಪ್ಪ ತಿಳಿಸಿದರು.
10 ಲಕ್ಷ ವೆಚ್ಚ :
ತನ್ನ ಎಂಟು ಎಕರೆ ಜಮೀನನ್ನು 4 ತಿಂಗಳ ಹಿಂದೆ ಹಸನು ಮಾಡಿ ಟೊಮೆಟೋ ಬೆಳೆಯಲು ಅಣಿ ಮಾಡಿ, ಸಸಿಗಳ ನಾಟಿ ಮಾಡುವ ಪ್ರಾರಂಭದಿಂದ ಹಿಡಿದು ಮೊದಲ ಕೊಯ್ಲು ಕೊಯ್ಯುವ ತನಕ ಇವರೆಗೆ 10 ಲಕ್ಷ ರು. ಖರ್ಚು ಮಾಡಲಾಗಿದೆ. ಈ ಹಿಂದೆ ಅನೇಕ ಬೆಳೆಗಳಿಗೆ ಬೆಲೆ ಸಿಗದೇ ಸಾಲಗಾರನಾಗಿದ್ದೆ. ಇದೀಗ ಎಲ್ಲರ ಸಾಲ ತೀರಿಸಿ ನೆಮ್ಮದಿಯಾಗಿದ್ದೇನೆ ಎನ್ನುತ್ತಾರೆ ನರಸಿಂಹಪ್ಪ.