ಚಾಮರಾಜನಗರ: ಕಾಡಬೇಗೂರು ಜಮೀನಿನಲ್ಲಿ ಕೆಲಸ ಮಾಡುವಾಗ ಹುಲಿ ದಾಳಿ, ರೈತ ಬಲಿ
ಚಾಮರಾಜನಗರ ಜಿಲ್ಲೆಯ ಸರಗೂರು ತಾಲೂಕಿನ ಕಾಡಬೇಗೂರು ಲಂಬಾಣಿ ಕಾಲೋನಿಯ ನಿವಾಸಿ ಲಕ್ಷ್ಮನಾಯ್ಕ್ ಹಾಗೂ ಜ್ಯೋತಿಬಾಯಿ ದಂಪತಿ ಪುತ್ರ, ಗ್ರಾಪಂ ಮಾಜಿ ಸದಸ್ಯ ಬಾಲಾಜಿ ನಾಯ್ಕ್ ಎಂಬವರೇ ಹುಲಿ ದಾಳಿಗೆ ಬಲಿಯಾದ ರೈತ.
ಸರಗೂರು(ನ.07): ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ತಾಲೂಕಿನ ಕಾಡಬೇಗೂರಿನಲ್ಲಿ ಸೋಮವಾರ ಮಧ್ಯಾಹ್ನ ಜರುಗಿದೆ. ತಾಲೂಕಿನ ಕಾಡಬೇಗೂರು ಲಂಬಾಣಿ ಕಾಲೋನಿಯ ನಿವಾಸಿ ಲಕ್ಷ್ಮನಾಯ್ಕ್ ಹಾಗೂ ಜ್ಯೋತಿಬಾಯಿ ದಂಪತಿ ಪುತ್ರ, ಗ್ರಾಪಂ ಮಾಜಿ ಸದಸ್ಯ ಬಾಲಾಜಿ ನಾಯ್ಕ್(40) ಎಂಬವರೇ ಹುಲಿ ದಾಳಿಗೆ ಬಲಿಯಾದ ರೈತ.
ಮೊಳೆಯೂರು ವಲಯ ಅರಣ್ಯದಂಚಿನಲ್ಲಿರುವ ಹೊಸಕೋಟೆ ಸಂಪರ್ಕ ರಸ್ತೆಯ ಪಕ್ಕದ ತಮ್ಮ ಜಮೀನಿನಲ್ಲಿ ಎಂದಿನಂತೆ ಶುಂಠಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಮಧ್ಯಾಹ ಸುಮಾರು 1.30ರ ಸಮಯದಲ್ಲಿ ಕಾಡಿನಿಂದ ಬಂದ ಹುಲಿ ಬಾಲಾಜಿ ನಾಯ್ಕ್ ಮೇಲರಗಿ ಪಕ್ಕದಲ್ಲೇ ಇದ್ದ ಟ್ರಂಚ್ ಒಳಗೆ ಎಳೆದು ತಿಂದು ಅಲ್ಲಿಂದ ಕಾಲ್ಕಿತ್ತದೆ.
ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ
ಮೃತ ಬಾಲಾಜಿ ನಾಯ್ಕ್ ಲಂಬಾಣಿ ಜನಾಂಗದವರಾಗಿದ್ದು, ಬಡವರಾಗಿದ್ದು, ಇವರಿಗೆ ಐಶ್ವರ್ಯ ಮತ್ತು ಸೌಂದರ್ಯ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಮೃತ ರೈತನ ಶವದ ಮುಂದೆ ಬಂದು ಬಳಗದವರ ಆಕ್ರಂದನ ಮುಗಿಲು ಮುಟ್ಟಿತು.
ಮೃತ ಬಾಲಾಜಿ ನಾಯಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಸ್ಥಳಕ್ಕೆ ಆಗಮಸಿದ್ದರು, ಪೊಲೀಸ್ ಇಲಾಖೆ ಬಿಟ್ಟರೆ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸಂಜೆ 7 ಗಂಟೆಯಾದರು ಸ್ಥಳಕ್ಕೆ ಭೇಟಿ ನೀಡದ ಕಾರಣ ಗ್ರಾಮಸ್ಥರಲ್ಲಿ ಹಾಗೂ ರೈತರಲ್ಲಿ ಇನ್ನಷ್ಟು ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಮಳೆಯಲ್ಲಿಯೇ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ರಾತ್ರಿ ಎನ್ನದೆ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ,
ಕಾಡು ಪ್ರಾಣಿಗಳ ಹಾವಳಿಯಿಂದ ರೈತ ಕುಟುಂಬದ ಸದಸ್ಯರ ಸಾವು ನೋವುಗಳಿಗೆ ಮುಕ್ತಿ ಎಂದು ಅರಣ್ಯ ಇಲಾಖೆ ವಿರುದ್ಧ ರೈತರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಹುಲಿ ದಾಳಿ, ಗರ್ಭ ಧರಿಸಿದ್ದ ಹಸು ಸಾವು
ಕೆಳದಿನಗಳ ಹಿಂದೆ ಕಾಡಾನೆ ದಾಳಿಯಿಂದ ರೈತನೋರ್ವ ಮೃತಪಟ್ಟಿದ್ದರು, ಈ ಘಟನೆ ಮಾಸುವ ಮುನ್ನವೆ ಮತ್ತೆ ಇದೀಗ ಹುಲಿ ದಾಳಿ ನಡೆಸಿ ರೈತನ ಬಲಿ ಪಡೆದಿದ್ದು, ಇದರಿಂದ ಗ್ರಾಮಗಳಲ್ಲಿ ಕೃಷಿ ಮಾಡುವುದಿರಲಿ, ಹೊರಗಡೆ ಪ್ರಾಣ ಭಯದಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಪರಶಿವಮೂರ್ತಿ, ಪಿಎಸ್ಐ ನಂದೀಶ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ಗ್ರಾಪಂ ಅಧ್ಯಕ್ಷ ಅಜಿತ್ ಕುಮಾರ್, ಸದಸ್ಯರಾದ ದೇವದಾಸ್, ಕುರ್ಣೇಗಾಲ ಬೆಟ್ಟಸ್ವಾಮಿ, ಕೃಷ್ಣ, ಗ್ರಾಮಸ್ಥರು ಇದ್ದರು.