ದೇವೇಗೌಡರ ಪ್ರತಿಮೆ ಸ್ಥಾಪನೆಗಾಗಿ ಹಲಗೂರು-ಮದ್ದೂರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ಸಾವಂದಿಪುರ ಗ್ರಾಮದ ಹೆಬ್ಬಾಗಿಲಿನಲ್ಲಿ 2 ಗುಂಟೆ ಜಾಗವನ್ನು ಗೌಡರ ಅಭಿಮಾನಿ ಬಳಗ ಖರೀದಿಸಿದೆ. 20 ಲಕ್ಷ ರು. ವೆಚ್ಚದಲ್ಲಿ ಪೀಠ ಮತ್ತು ಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 13.50 ಲಕ್ಷ ರು. ವೆಚ್ಚದಲ್ಲಿ ಸುಮಾರು 475 ಕೆ.ಜಿ ತೂಕದ ಲೋಹವನ್ನು ಬಳಸಿ 6.9 ಅಡಿ ಎತ್ತರದ ದೇವೇಗೌಡರ ಕಂಚಿನ ಪ್ರತಿಮೆಯನ್ನು ಬಿಡದಿಯಲ್ಲಿ ತಯಾರಿಸಲಾಗಿದೆ.

ರಾಮನಗರ[ನ.11]: ಇಗ್ಗಲೂರು ಜಲಾಶಯ (ಎಚ್‌.ಡಿ.ದೇವೇಗೌಡ ಬ್ಯಾರೇಜ್‌) ಸ್ಥಾಪನೆಗೆ ಕಾರಣಕರ್ತರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕಂಚಿನ ಪ್ರತಿಮೆ ಸ್ಥಾಪಿಸಲು ಚನ್ನಪಟ್ಟಣದ ತಾಲೂಕಿನ ಗೌಡರ ಅಭಿಮಾನಿ ಬಳಗ ತೀರ್ಮಾನಿಸಿದ್ದು, ಇದಕ್ಕಾಗಿ ದೇವೇಗೌಡರ 6.9 ಅಡಿ ಎತ್ತರದ ಕಂಚಿನ ಪ್ರತಿಮೆ ಸಿದ್ಧಗೊಳಿಸಿದೆ. ನ.24ರಂದು ಪ್ರತಿಮೆ ಅನಾವರಣಗೊಳ್ಳಲಿದೆ.

ಪ್ರತಿಮೆ ಸ್ಥಾಪನೆಗಾಗಿ ಹಲಗೂರು-ಮದ್ದೂರು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ಸಾವಂದಿಪುರ ಗ್ರಾಮದ ಹೆಬ್ಬಾಗಿಲಿನಲ್ಲಿ 2 ಗುಂಟೆ ಜಾಗವನ್ನು ಗೌಡರ ಅಭಿಮಾನಿ ಬಳಗ ಖರೀದಿಸಿದೆ. 20 ಲಕ್ಷ ರು. ವೆಚ್ಚದಲ್ಲಿ ಪೀಠ ಮತ್ತು ಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 13.50 ಲಕ್ಷ ರು. ವೆಚ್ಚದಲ್ಲಿ ಸುಮಾರು 475 ಕೆ.ಜಿ ತೂಕದ ಲೋಹವನ್ನು ಬಳಸಿ 6.9 ಅಡಿ ಎತ್ತರದ ದೇವೇಗೌಡರ ಕಂಚಿನ ಪ್ರತಿಮೆಯನ್ನು ಬಿಡದಿಯಲ್ಲಿ ತಯಾರಿಸಲಾಗಿದೆ.

1985ರಲ್ಲಿ ರಾಮಕಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾಗಿದ್ದ ಎಚ್‌.ಡಿ.ದೇವೇಗೌಡರು ಇಗ್ಗಲೂರಿನ ಬಳಿ ಬ್ರಿಡ್ಜ್‌ ಕಂ ಬ್ಯಾರೆ​ಜ್‌ ಯೋಜನೆ ರೂಪಿಸಿ 1986ರ ಡಿ.23ರಂದು 10.75 ಕೋಟಿ ರು. ಅನುದಾನ ನೀಡಿದ್ದರು. ಅಂದಿನ ಚನ್ನಪಟ್ಟಣದ ಶಾಸಕರಾಗಿದ್ದ ವರದೇಗೌಡರು ಇಗ್ಗಲೂರು ಏತ ನೀರಾವರಿ ಯೋಜನೆ ಕಾಮಗಾರಿಗೆ ದೇವೇಗೌಡ ಅವರನ್ನು ಕರೆತಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಯೋಜನೆಯಿಂದ ಈ ಭಾಗದ ನೀರಿನ ಕೊರತೆ ನೀಗಿತ್ತು.

ದೇವೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಯಾವಾಗ?

ನ.24ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವರಾದ ಡಿ.ಕೆ.ಶಿವಕುಮಾರ್‌, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಪುಟ್ಟರಾಜು, ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಶಾಸಕರಾದ ಡಾ.ಕೆ.ಅನ್ನದಾನಿ, ಗೋಪಾಲಯ್ಯ, ಎ.ಮಂಜುನಾಥ್‌, ಸುರೇಶ್‌ ಗೌಡ, ಗೋಪಾಲಯ್ಯ ಪಾಲ್ಗೊಳ್ಳಲಿದ್ದಾರೆ.