ಉಡುಪಿ: ಕಾರಂತ ಸ್ಮೃತಿ ಭವನದ ಸೂಕ್ತ ನಿರ್ವಹಣೆಗೆ ಅಭಿಮಾನಿಗಳ ಒತ್ತಾಯ
ಕೋಟ ಶಿವರಾಮ ಕಾರಂತರೆಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಈ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಾಸಿಸುತ್ತಿದ್ದ ಮನೆ ಸದ್ಯ ಸ್ಮೃತಿಭವನವಾಗಿ ಗುರುತಿಸಿಕೊಂಡಿದೆ. ಆದರೆ ಸ್ಮೃತಿ ಭವನ ಸದ್ಯ ಒಂದು ರೀತಿ ಸ್ತಬ್ಧವಾಗಿದೆ.
ಉಡುಪಿ (ಅ.17): ಕೋಟ ಶಿವರಾಮ ಕಾರಂತರೆಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಈ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ವಾಸಿಸುತ್ತಿದ್ದ ಮನೆ ಸದ್ಯ ಸ್ಮೃತಿಭವನವಾಗಿ ಗುರುತಿಸಿಕೊಂಡಿದೆ. ಹಲವು ವರ್ಷಗಳಿಂದ ಸಾಹಿತ್ಯಾಸಕ್ತರಿಗೆ ಕಾರಂತರ ಅಭಿಮಾನಿಗಳಿಗೆ ಒಂದಿಷ್ಟು ಪೂರಕ ವಾತಾವರಣವನ್ನ ಸೃಷ್ಟಿಸಿದ್ದ ಕಾರಂತ ಸ್ಮೃತಿ ಭವನ ಸದ್ಯ ಒಂದು ರೀತಿ ಸ್ತಬ್ಧವಾಗಿದೆ. ಕೋಟ ಶಿವರಾಮ ಕಾರಂತರು ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ಹುಟ್ಟೂರಿನ ಸಮೀಪದ ಸಾಲಿಗ್ರಾಮ ಪರಿಸರದಲ್ಲಿ. ಸಾಲಿಗ್ರಾಮದ ಶಿವರಾಮ ಕಾರಂತ ಬೀದಿಯ ಎಡ ಮಗ್ಗಲಿನಲ್ಲಿರುವ ಕಾರಂತರ ವಾಸದ ಮನೆ ಈಗ ಮ್ಯೂಸಿಯಂ ರೀತಿಯಲ್ಲಿ ಸಿದ್ಧವಾಗಿದೆ. ಶಿವರಾಮ ಕಾರಂತರ ಸಹಾಯಕಿ ಮಾಲಿನಿ ಮಲ್ಯ ಕಾರಂತರ ನಿಧನ ಬಳಿಕ ಅವರ ಮನೆಯನ್ನ ಕಾರಂತರನ್ನ ಮತ್ತೆ ನೆನಪಿಸುವ ರೀತಿಯಲ್ಲಿ ಸಿದ್ಧಪಡಿಸಿದ್ದರು. ಕಾರಂತರು ಇಷ್ಟ ಪಡುತ್ತದ್ದ ಮಕ್ಕಳಿಗೆಂದು ಇದೇ ಮನೆಯ ಹಿಂಭಾಗದಲ್ಲಿ ಅಂಗನವಾಡಿ ಮತ್ತು ಕರಾಟೆ ತರಗತಿಗಳಿಗೂ ಅವಕಾಶ ಕಲ್ಪಿಸಿದ್ದರು. ಮಕ್ಕಳ ಆಟೋಟಕ್ಕಾಗಿ ವಿಶೇಷ ಆಟಿಕೆಗಳನ್ನು ಸಿದ್ಧಪಡಿಸಿರುವುದು ಅಲ್ಲದೆ, ನಿರಂತರ ಕಾರ್ಯಕ್ರಮಗಳನ್ನು ಮಾಲಿನಿ ಮಲ್ಯ ಆಯೋಜಿಸುತ್ತಿದ್ದರು. ಸದ್ಯ ಅವರು ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸೆಂಟ್ರಲ್ ನರ್ವ್ ಡಿಸೋರ್ಡರ್ ಕಾಯಿಲೆಯಿಂದ ಬಳಲುತ್ತಿರುವ ಕಾರಂತರ ಸಹಾಯಕಿ ಮಾಲಿನಿ ಮಲ್ಯ ಕಾರಂತರ ಅಭಿರುಚಿಗೆ ತಕ್ಕಂತೆ ಸ್ಮೃತಿ ಭವನ ಕಾರ್ಯ ನಿರ್ವಹಿಸುವಂತೆ ನೋಡಿ ಕೊಂಡಿದ್ದರು. ಆದರೆ ಇತ್ತೀಚೆಗೆ ಕೆಲವು ತಿಂಗಳುಗಳ ಹಿಂದೆ ವಯೋ ಸಹಜ ಸಮಸ್ಯೆಯಿಂದಾಗಿ ಬೆಂಗಳೂರಿಗೆ ಮಾಲಿನಿ ಮಲ್ಯ ತೆರಳಿದ್ದಾರೆ.
ಕಾರಂತ ಸ್ಮೃತಿ ಭವನವನ್ನು ನೋಡಿಕೊಳ್ಳುತ್ತಿದ್ದ ಮಾಲಿನಿ ಮಲ್ಯ ಚಿಕಿತ್ಸೆಗೆ ತೆರಳಿದ ಬೆನ್ನಲ್ಲೇ ಸ್ಮೃತಿ ಭವನದ ಬಾಗಿಲು ಮುಚ್ಚಿದೆ. ಯಾರು ಸರಿಯಾಗಿ ನೋಡಿಕೊಳ್ಳುವವರು ಇಲ್ಲದ ಹಿನ್ನಲೆಯಲ್ಲಿ ಕಾರಂತ ನೆನಪಿನ ಭವನ ಸಂಪೂರ್ಣ ಕಸಕಡ್ಡಿ ಜೇಡರ ಬಲೆಯ ತಾಣವಾಗಿ ಮಾರ್ಪಟ್ಟಿದೆ. ತಿಂಗಳುಗಳ ಕಾಲ ವಿದ್ಯುತ್ ಬಿಲ್ ಪಾವತಿಸದೆ ಕರೆಂಟ್ ಕನೆಕ್ಷನ್ ಕೂಡ ಕಟ್ ಆಗಿದೆ.
ಚಿತ್ರ ವಿಮರ್ಶೆ : ಮೂಕಜ್ಜಿಯ ಕನಸುಗಳು
ಕಾರಂತರು ಬಳಸುತ್ತಿದ್ದ ಸಾಮಾಗ್ರಿಗಳ ರಕ್ಷಣೆಗಾಗಿ ಸ್ಮೃತಿ ಭವನದ ಸುತ್ತಲೂ ಸಿಸಿ ಕ್ಯಾಮೆರಾ ಹಾಕಿದ್ದರು ಕೂಡ ವಿದ್ಯುತ್ ಇಲ್ಲದ ಕಾರಣ ಬಂದ್ ಆಗಿದೆ. ನಿನ್ನೆ ಕಾರಂತರ ಜನ್ಮ ದಿನದ ಹಿನ್ನಲೆಯಲ್ಲಿ ಕಾರಂತ ಟ್ರಸ್ಟ್ ಇದೇ ಸ್ಮತಿ ಭವನದಲ್ಲಿ ಕಾರ್ಯಕ್ರಮ ಆಯೋಜನೆಗಾಗಿ ಒಂದಿಷ್ಟು ಸ್ವಚ್ಚತೆ ಮಾಡಿದೆ. ಮಾಲಿನಿ ಮಲ್ಯ ಅವರು ಕೂಡು ಅನಾರೋಗ್ಯದ ನಡುವೆಯೇ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರು ತೆರಳಿದ ನಂತರ ನಿರ್ವಹಣೆ ಹೇಗೆ? ಎನ್ನುವುದು ಕಾರಂತಾಭಿಮಾನಿಗಳ ಪ್ರಶ್ನೆ.
ಉಡುಪಿ: ನಟ ರಮೇಶ್ ಅರವಿಂದ್‌ಗೆ ಕಾರಂತ ಹುಟ್ಟೂರ ಪ್ರಶಸ್ತಿ
ಒಟ್ಟಾರೆಯಾಗಿ ರಾಜ್ಯದ ಶ್ರೇಷ್ಠ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತರ ಅಳಿದುಳಿದ ನೆನಪುಗಳ ರಕ್ಷಣೆಯಾಗಬೇಕಿದೆ. ಸರಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡು ಕಾರಂತರ ಸ್ಮೃತಿ- ಸ್ವತ್ತುಗಳು ಕಂಡವರ ಪಾಲಾಗದಂತೆ ನೋಡಿಕೊಳ್ಳುವುದರ ಜೊತೆ ರಾಜ್ಯದ ಮುಂದಿನ ಪೀಳಿಗೆಯ ವಿಕ್ಷಣೆಗೆ ಲಭ್ಯವಾಗುವಂತೆ ಮಾಡಬೇಕು ಎನ್ನುವುದು ಕಾರಂತಾಭಿಮಾನಿಗಳ ಒತ್ತಾಯ.