- ಕೆಂಡಪ್ರದಿ

ರಚನೆಯಾಗಿ ಐವತ್ತು ವರ್ಷ ತುಂಬಿದರೂ ಒಂದೊಂದು ಓದಿಗೂ ಒಂದೊಂದು ಒಳಾರ್ಥವನ್ನು ಬಿಟ್ಟುಕೊಡುವ ಶಕ್ತಿ ಇರುವ ಕಾದಂಬರಿ ಕೆ. ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’. ಸಾಮಾನ್ಯವಾಗಿ ಮೊದಲ ಓದಿಗೆ ಯಾರಿಗೂ ಪೂರ್ಣವಾಗಿ ಎಟುಕದೇ ಮತ್ತೆ ಮತ್ತೆ ಮರು ಓದು ಬಯಸುವ, ಚಿಂತನೆಗೆ ಹಚ್ಚುವ ಈ ಕಾದಂಬರಿಯನ್ನು ನಿರ್ದೇಶಕ ಪಿ. ಶೇಷಾದ್ರಿ ಅವರು ಸಿನಿಮಾ ಮಾಡಿ ಪ್ರೇಕ್ಷಕನ ಮುಂದೆ ತಂದಿದ್ದಾರೆ.

ಕಾದಂಬರಿ ಮೂಲಕ ಕಾಣದ ಒಳಹನ್ನು ಖಂಡಿತವಾಗಿಯೂ ಸಿನಿಮಾ ಮೂಲಕ ದಕ್ಕಿಸಿಕೊಳ್ಳಬಹುದು. ಆ ಶಕ್ತಿ ಸಿನಿಮಾಗೆ ಶೇಷಾದ್ರಿ ಅವರ ಸಮರ್ಥ ನಿರ್ದೇಶನ ಮತ್ತು ಮೂಕಜ್ಜಿಯಾಗಿರುವ ಬಿ. ಜಯಶ್ರೀ ಅವರ ನಟನೆಯಿಂದ ಲಭ್ಯ.

ಒಂದಿಡೀ ಬದುಕನ್ನು ಮನೆಯ ಕತ್ತಲ ಕೋಣೆಗಳಲ್ಲಿಯೇ ಕಳೆದರೂ ಅದನ್ನೇ ತಪಸ್ಸನ್ನಾಗಿ ಬದಲಾಯಿಸಿಕೊಂಡು ಹಿಂದೆ ಆಗಿದ್ದು, ಮುಂದೆ ಆಗುವುದನ್ನು ತನ್ನ ಅನುಭವದಿಂದಲೇ ಅಂದಾಜಿಸಿಕೊಳ್ಳುವ ಶಕ್ತಿ ಇಲ್ಲಿ ಬರುವ ಮೂಕಜ್ಜಿಗೆ ಇದೆ. ದೇವರು, ನಂಬಿಕೆ, ಶ್ರದ್ಧೆ, ಆಚರಣೆ, ಹುಟ್ಟು, ಸಾವು, ಭೂತ, ಭವಿಷ್ಯ, ಕಾಮ ಮತ್ತು ಅದರಾಚೆಗಿನ ಪ್ರೇಮ ಹೀಗೆ ಹೇಳುತ್ತಾ ಹೋದರೆ ಬದುಕಿನ ಎಲ್ಲಾ ಸ್ಥರಗಳ ಪರಾಮರ್ಶೆಯೂ ಇಲ್ಲಿ ಅಜ್ಜಿಯ ಮೂಲಕ ಆಗುತ್ತದೆ.

'ಶೃಂಗಾರದ ಹೊಂಗೇ ಮರ'ದ ಹುಡುಗಿ ತುಂಡು ಬಟ್ಟೆ ಗಿಟ್ಟಿಸಿತು ನೆಟ್ಟಿಗರ ಗಮನ!

‘ದೇವರು ನಮಗೆ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲವನ್ನೂ ಕೊಟ್ಟು ಕಳಿಸಿದ್ದಾನೆ. ಅವನ ಹತ್ತಿರ ಕೇಳುವುದಕ್ಕೆ ಇನ್ನೇನು ಉಳಿದಿದೆ ನಮಗೆ?’ ಎಂದು ಪ್ರಶ್ನೆ ಮಾಡುವ ಅಜ್ಜಿ ದೇವರು ಮತ್ತು ಮನುಷ್ಯನ ನಡುವೆ ಇರುವ ಕೊಡು-ಕೊಳುವಿಕೆಯ ನಂಬಿಕೆಯನ್ನೇ ಅಲುಗಾಡಿಸಿಬಿಡುತ್ತಾಳೆ. ‘ಬದುಕು ಎಂದರೆ ಆಸೆಗಳನ್ನ ಗೆಲ್ಲೋದಾ? ಗೆಲ್ಲೋಕೆ ಅದೇನು ಪಂದ್ಯವಾ? ಎಂದು ಪ್ರಶ್ನೆ ಮಾಡುತ್ತಾ ಬದುಕಿನ ವ್ಯಾಖ್ಯಾನವನ್ನೇ ಬದಲಾಗುವಂತೆ ಮಾಡಿಬಿಡುತ್ತಾಳೆ.

ಇಲ್ಲಿ ಬರುವ ನಾಗಿ ವ್ಯವಸ್ಥೆ ಕಟ್ಟಿದ ಬೇಲಿಯನ್ನು ದಾಟಿ ತನ್ನ ಆಸೆಗಳನ್ನು ಪೂರೈಸಿಕೊಂಡರೂ ಅಜ್ಜಿಯ ದೃಷ್ಟಿಯಲ್ಲಿ ದಿಟ್ಟೆಯಾಗುತ್ತಾಳೆ. ಹೊರಗೊಂದು ಹೇಳಿಕೊಂಡು ಒಳಗೊಂದು ಮಾಡಿಕೊಂಡು ಇರುವ ವ್ಯಕ್ತಿಗೆ ಮಾತಿನಿಂದಲೇ ಚಾಟಿ ಬೀಸಿ ನೀನು ಇರುವಂತೆ ನಡೆದುಕೊಂಡಾಗ ಮಾತ್ರ ನಿನಗೆ ಬೆಲೆ, ನೆಲೆ ಎಂದು ಮೂಕಜ್ಜಿ ಹೇಳುತ್ತಾಳೆ. ಹೀಗೆ ಮನುಷ್ಯದ ಮೂಲ ವರ್ತನೆಗಳನ್ನೇ ಪರಾಮರ್ಶೆಗೆ ಒಳಪಡಿಸುವ ಚಿತ್ರ ಕಾಲಾತೀತವಾಗಿ ನಿಲ್ಲುತ್ತದೆ.

ಕಾರಂತರು ಕಾದಂಬರಿಯ ಮುನ್ನುಡಿಯಲ್ಲಿಯೇ ಹೇಳಿಕೊಂಡಿದ್ದ ಹಾಗೆ ಅಜ್ಜಿಯ ಮೂಲಕ ನಮ್ಮ ಶ್ರದ್ಧೆ, ನಂಬಿಕೆ, ಪ್ರಾಗೈತಿಹಾಸಿಕ ಜೀವನ ಕ್ರಮಗಳನ್ನು ಅಜ್ಜಿಯ ಮೂಲಕ ಹೇಳಿಸಲು ಹೊರಟಿದ್ದರು. ಅದಕ್ಕಾಗಿಯೇ ಅಜ್ಜಿಗೆ ವಿಶಿಷ್ಟವಾದ ಶಕ್ತಿಯೊಂದನ್ನು ನೀಡಿ ಯಾವುದೇ ವಸ್ತುವನ್ನು ಸ್ಪರ್ಶ ಮಾತ್ರದಿಂದ ಗುರುತಿಸಿ ಅದರ ಹಿನ್ನೆಲೆ, ಮುನ್ನೆಲೆಗಳನ್ನು ಹೇಳುವಂತೆ ಮಾಡಿದ್ದರು. ಈ ಎಲ್ಲಾ ಸೂಕ್ಷ್ಮತೆಗಳನ್ನೂ ಶೇಷಾದ್ರಿ ಅವರು ಸಮರ್ಥವಾಗಿ ದೃಶ್ಯ ರೂಪಕ್ಕೆ ಇಳಿಸಿದ್ದಾರೆ.

ಎಲ್ಲಿಯೂ ಎಳ್ಳಷ್ಟೂಗೊಂದಲವಾಗದ ಹಾಗೆ ಕಾರಂತರ ಜೀವನ ದೃಷ್ಟಿಯನ್ನು ಮೂಕಜ್ಜಿಯ ಮೂಲಕ ನೋಡುಗನ ಎದೆಗಿಳಿಸಿದ್ದಾರೆ. ತನ್ಮೂಲಕ ಚಿತ್ರ ನಮ್ಮ ಸದ್ಯದ ಬದುಕಿಕೂ ಅದರ ಕ್ರಮಕ್ಕೂ ಪ್ರಶ್ನೆಗಳನ್ನು ಎಸೆದು ಕಾಡುವಂತೆ ಜೀವಂತವಾಗಿ ಮನದೊಳಗೆ ಉಳಿದುಬಿಡುತ್ತದೆ. ಹಾಗಾಗಿ ಈ ಚಿತ್ರವನ್ನು ದೇಶ, ಭಾಷೆಗಳ ಗಡಿದಾಟಿ ಎಲ್ಲರೂ ಮಿಸ್‌ ಮಾಡದೇ ನೋಡಲೇಬೇಕಾದ ಚಿತ್ರ ಎನ್ನುವ ಪಟ್ಟಿಗೆ ತುಂಬು ಹೆಮ್ಮೆಯಿಂದಲೇ ಸೇರಿಸಬಹುದು.

ಬಳ್ಳಾರಿ ಖಡಕ್ ಮಿರ್ಚಿ 'ಸೀತಾವಲ್ಲಭ' ಕಾವ್ಯಾ; ಪೋಟೋ ನೋಡಿದ್ರೆ ಬಿದ್ದೇ ಹೋಗ್ತೀರಿ!

ಮೂಕಜ್ಜಿ ಎನ್ನುವುದು ಒಂದು ಪಾತ್ರವಲ್ಲ, ಬದಲಾಗಿ ತಾನೇ ಮೂಕಜ್ಜಿ ಎನ್ನುವಂತೆ ಬಿ. ಜಯಶ್ರೀ ಅಭಿನಯವಿದೆ. ಇದಕ್ಕೆ ಅರವಿಂದ್‌ ಕುಪ್ಲಿಕರ್‌, ನಂದಿನಿ ವಿಠ್ಠಲ, ರಾಮೇಶ್ವರಿ ವರ್ಮ, ಪ್ರಗತಿ ಪ್ರಭು, ಕಾವ್ಯ ಶಾ, ಪ್ರಭುದೇವ ಮುಂತಾದವರು ಕೊಟ್ಟಿರುವ ಸಾಥ್‌ ದೊಡ್ಡದು. ಪ್ರವೀಣ್‌ ಗೋಡ್ಕಿಂಡಿ ಸಂಗೀತ, ಜಿ.ಎಸ್‌.ಭಾಸ್ಕರ್‌ ಛಾಯಾಗ್ರಹಣ ಹಾಗೂ ಬಿ.ಎಸ್‌.ಕೆಂಪರಾಜು ಅವರ ಸಂಕಲನ ಶೇಷಾದ್ರಿ ಅವರ ನಿಖರತೆ ಮತ್ತು ಆಲೋಚನೆಗೆ ಪೂಕರವಾಗಿಯೇ ಕೆಲಸ ಮಾಡಿವೆ.

- ತಾರಾಗಣ: ಬಿ. ಜಯಶ್ರೀ, ಅರವಿಂದ್‌ ಕುಪ್ಲಿಕರ್‌, ನಂದಿನಿ ವಿಠ್ಠಲ, ರಾಮೇಶ್ವರಿ ವರ್ಮ, ಪ್ರಗತಿ ಪ್ರಭು, ಕಾವ್ಯ ಶಾ, ಪ್ರಭುದೇವ

ನಿರ್ದೇಶನ: ಪಿ. ಶೇಷಾದ್ರಿ

ರೇಟಿಂಗ್‌: ****