ಸಾವಿರಾರು ಕೋಟಿ ರು. ಅಭಿವೃದ್ಧಿ ಕಾಮಗಾರಿಗೆ ಉದ್ಘಾಟನೆ, ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದ ವೇಳೆ ವೇದಿಕೆಯಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನ್‌ಕುಮಾರ್‌ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭಾವಚಿತ್ರ ಹಾಕದಿರುವುದರಿಂದ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.

ಚಾಮರಾಜನಗರ (ಡಿ.14): ಸಾವಿರಾರು ಕೋಟಿ ರು. ಅಭಿವೃದ್ಧಿ ಕಾಮಗಾರಿಗೆ ಉದ್ಘಾಟನೆ, ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದ ವೇಳೆ ವೇದಿಕೆಯಲ್ಲಿ ಗುಂಡ್ಲುಪೇಟೆ ಶಾಸಕ ನಿರಂಜನ್‌ಕುಮಾರ್‌ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾವಚಿತ್ರ ಹಾಕದಿರುವುದರಿಂದ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು. ವೇದಿಕೆಯಲ್ಲಿ ಅಳವಡಿಸಿದ್ದ ಎಲ್‌ಸಿಡಿ ಪರದೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಫೋಟೋ ಇಲ್ಲದ್ದಕ್ಕೆ ಕುಪಿತಗೊಂಡ ಅಭಿಮಾನಿಗಳು ಯಡಿಯೂರಪ್ಪಗೆ ಜೈಕಾರ ಹಾಕಿ ಫೋಟೋ ಹಾಕುವಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಒತ್ತಾಯಿಸಿದರು. 

ಕೆಲಹೊತ್ತು ಇದು ಗೊಂದಲಕ್ಕೂ ಕಾರಣವಾಯಿತು. ಬಳಿಕ, ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ವೇದಿಕೆ ಏರಿ ’ಇದು ಸರ್ಕಾರದ ಕಾರ್ಯಕ್ರಮವಾದ್ದರಿಂದ ಯಡಿಯೂರಪ್ಪ ಅವರ ಫೋಟೋ ಹಾಕಲಾಗಿಲ್ಲ, ಅವರ ಬಗ್ಗೆ ಅಪಾರ ಗೌರವ-ಪ್ರೀತಿ ಇದೆ. ಅಭಿಮಾನಿಗಳು ಅಸಮಾಧಾನಗೊಳ್ಳಬಾರದು ಎಂದು ಮನವಿ ಮಾಡಿಕೊಂಡರು. ಇದಾದ ನಂತರ ನಿರಂಜನ್‌ ಅಭಿಮಾನಿಗಳು ಶಾಂತವಾದರು. 

ವಿಜಯೇಂದ್ರನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ: ಬಿ.ಎಸ್‌.ಯಡಿಯೂರಪ್ಪ

ಸಂಸದ ವಿ. ಶ್ರೀನಿವಾಸಪ್ರಸಾದ್‌ ಮಾತನಾಡುವಾಗಲೂ ಘೋಷಣೆಗಳು ಕೇಳಿ ಬಂದಾಗ ಸಂಸದರು ಜನರತ್ತ ಹರಿಹಾಯ್ದರು, ಗಂಭೀರವಾಗಿ ಕುಳಿತುಕೊಳ್ಳುವಂತೆ ತಾಕೀತು ಮಾಡಿದರು. ಈ ವೇಳೆ ಸ್ವತ: ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರೇ ಮೈಕ್‌ ಹಿಡಿದು ನಾಡಿನ ದೊರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಜಿಲ್ಲೆಗೆ ಬಂದಿದ್ದಾರೆ. ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್‌ ಮಾತನಾಡುತ್ತಿದ್ದಾರೆ. ಅವರ ಮಾತನ್ನು ಕೇಳಿಸಿಕೊಳ್ಳಿ, ಜಿಲ್ಲೆಯ ಅಭಿವೃದ್ಧಿಗೆ ಅವರ ಅನುಭವದ ಸಲಹೆಗಳು ಬೇಕು ಎಂದು ಬುದ್ಧಿಮಾತು ಹೇಳಿದರು. ಆಗ ಸಿಳ್ಳೆ ಹಾಕುತ್ತಿದ್ದವರು ಸುಮ್ಮನಾದರು.

ಸಂಸದ ಪ್ರಸಾದ್‌ ಕ್ಲಾಸ್‌: ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಬೆಂಬಲಿಗರಿಗೆ ಸಂಸದ ವಿ. ಶ್ರೀನಿವಾಸಪ್ರಸಾದ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆಯಿತು.ಕಾರ್ಯಕ್ರಮದಲ್ಲಿ ವಿ. ಶ್ರೀನಿವಾಸಪ್ರಸಾದ್‌ ಭಾಷಣ ಮಾಡುತ್ತಿದ್ದರೆ ಪದೇಪದೇ ನಿರಂಜನಕುಮಾರ್‌ ಬೆಂಬಲಿಗರು, ಶಿಳ್ಳೆ, ಕೇಕೆ, ಜೈಕಾರ ಹಾಕುವುದನ್ನು ಮಾಡುತ್ತಿದ್ದರು. ಇದನ್ನು ಗಮನಿಸಿ ಆರಂಭದಲ್ಲಿ ಮಾತನಾಡುವಾಗ ಗಲಾಟೆ ಮಾಡಬಾರದೆಂದು ಶ್ರೀನಿವಾಸಪ್ರಸಾದ್‌ ಮನವಿ ಮಾಡಿದರೂ ಕೇಳದೆ, ನಿರಂಜನಕುಮಾರ್‌ ಬೆಂಬಲಿಗರು ಮತ್ತಷ್ಟು ಜೋರು ಮಾಡಿದರು. 

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತಾಗುತ್ತಾರೆ: ಬಿಎಸ್‌ವೈ

ಇದರಿಂದ ಸಹನೆ ಕಳೆದುಕೊಂಡ ಶ್ರೀನಿವಾಸಪ್ರಸಾದ್‌, ಪಕ್ಕದಲ್ಲೇ ಕುಳಿತಿದ್ದ ನಿರಂಜನಕುಮಾರ್‌ ಕಡೆಗೆ ತಿರುಗಿ, ಯಾಕ್ರೀ ಇಂತವ್ರನ್ನೆಲ್ಲ ಕರ್ಕೊಂಡ್‌ ಬರ್ತಿರಾ? ಎಂದು ಸಿಟ್ಟಾದರು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಕ್‌ ಮುಂದೆ ನಿಂತು, ನಿರಂಜನಕುಮಾರ್‌ ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು. ಇದು ಪಕ್ಷದ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ. ವಿ.ಶ್ರೀನಿವಾಸಪ್ರಸಾದ್‌ ಈ ರಾಜ್ಯದ ಹಿರಿಯ ನಾಯಕರು. ಅವರಿಗೆ ಗೌರವ ಕೊಡಬೇಕು. ಮಧ್ಯದಲ್ಲಿ ಯಾರೂ ಸಹ ಜೈಕಾರ, ಶಿಳ್ಳೆ ಹಾಕುವುದನ್ನು ಮಾಡಬಾರದೆಂದು ಮನವಿ ಮಾಡಿದ ನಂತರ ಕಾರ್ಯಕರ್ತರ ಗದ್ದಲ ಕಡಿಮೆಯಾಯಿತು. ಶ್ರೀನಿವಾಸಪ್ರಸಾದ್‌ ಮಾತು ಮುಂದುವರಿಸಿದರು.