ಶ್ರೀಶೈಲ ಮಠದ

ಬೆಳಗಾವಿ[ಆ.13]: ಮಹಾಪ್ರವಾಹಕ್ಕೆ ಮಗಳ ವಿವಾಹ ತಯಾರಿಯಲ್ಲಿದ್ದ ಬಡ ಕುಟುಂಬವೊಂದರ ಸಂಭ್ರಮವೇ ಕೊಚ್ಚಿಕೊಂಡು ಹೋಗಿದೆ. ಭಯಂಕರ ಮಳೆಯಿಂದ ಮನೆ ಕುಸಿದು ಬಿದ್ದಿದೆ. ಜತೆಗೆ ಮದುವೆ ಸಲುವಾಗಿ ಕಷ್ಟಪಟ್ಟು ಜೋಡಿಸಿಟ್ಟಿದ್ದ ಚಿನ್ನ, ಬಟ್ಟೆ, ಪಾತ್ರೆಗಳೆಲ್ಲವೂ ನೀರು ಪಾಲಾಗಿವೆ. ಮಗಳ ಮದುವೆ ಮಾಡುವ ಕನಸು ಕಂಡಿದ್ದ ಕುಂದಾನಗರಿ ಬೆಳಗಾವಿಯ ಪಾಟೀಲ್‌ ಮಾಳಾ ನಿವಾಸಿ ಮೌಲಾಸಾಬ ನದಾಫ್‌ ಅವರ ಕುಟುಂಬದ ಆಸೆ ಈಗ ನುಚ್ಚುನೂರಾಗಿದೆ.

ಆಗಸ್ಟ್‌ 25ರಂದು ಮಗಳ ಮದುವೆ ಹುಬ್ಬಳ್ಳಿಯ ವರನೊಂದಿಗೆ ನಿಶ್ಚಯ ಮಾಡಲಾಗಿತ್ತು. ಈಗಾಗಲೇ ವರನ ಕುಟುಂಬದವರು ಲಗ್ನ ಪತ್ರಿಕೆಗಳನ್ನೂ ಹಂಚಿಯೂ ಆಗಿದೆ. ಆದರೆ ಇದೀಗ ಪ್ರವಾಹದ ನಂತರ ಮನೆ ಕುಸಿದು ಬಿದ್ದು ಸರ್ವಸ್ವವೂ ನೀರುಪಾಲಾದ ಬಳಿಕ ಮಗಳ ಮದುವೆ ಹೇಗೆ ಎಂಬ ಚಿಂತೆ ಕುಟುಂಬವನ್ನು ಕಾಡತೊಡಗಿದೆ. ಮನೆಯನ್ನೂ ಕಳೆದುಕೊಂಡಿರುವ ಈ ಬಡ ಕುಟುಂಬ ಅಕ್ಷರಶಃ ಬೀದಿ ಪಾಲಾಗಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಮೌಲಾಸಾಬ ಅವರಿಗೆ ಈ ಮನೆ ಬಿಟ್ಟರೆ ಬೇರೆ ಮನೆ ಇಲ್ಲ. ಪಾಟೀಲ ಮಾಳಾದ ನಿವಾಸಿಗಳೆಲ್ಲರೂ ಸೇರಿ ಹಣ ಸಂಗ್ರಹಿಸಿ, ನದಾಫ್‌ ಕುಟುಂಬಕ್ಕೆ ಬಾಡಿಗೆ ಮನೆಯೊಂದನ್ನು ಹಿಡಿದುಕೊಟ್ಟಿದ್ದಾರೆ. ಇನ್ನು 13 ದಿನ ಕಳೆದರೆ ಮಗಳ ಮದುವೆ. ಆದರೆ, ಮಳೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿರುವ ಈ ಇಡೀ ಕುಟುಂಬ ಕಣ್ಣೀರು ಸುರಿಸುತ್ತಿದೆ.

ಪಾಟೀಲ ಮಾಳಾದ ಪ್ರದೇಶದಲ್ಲಿ ಸುಮಾರು 20 ಮನೆಗಳು ಕುಸಿದು ಸಂಪೂರ್ಣ ಬಿದ್ದಿದ್ದು, ಬಿದ್ದ ಮನೆಯನ್ನು ತೆರವುಗೊಳಿಸಬೇಕೆಂದರೇ ಕನಿಷ್ಠ .30 ಸಾವಿರ ಬೇಕಾಗುತ್ತದೆ. ಒಂದೆಡೆ ಮಗಳ ಮದುವೆ, ಇನ್ನೊಂದೆಡೆ ಬಿದ್ದ ಮನೆಯನ್ನು ನೆನೆದುಕೊಂಡು ಕುಟುಂಬ ಸದಸ್ಯರು ಈಗಲೂ ಕಣ್ಣೀರು ಹಾಕುತ್ತಿದ್ದಾರೆ.