Uttarakannada: ದೇವಸ್ಥಾನಕ್ಕೆ ಕೃಷಿ ಜಾಗ ದಾನ ಮಾಡಲು ಒತ್ತಾಯ, ನಿರಾಕರಿಸಿದ ರೈತ ಕುಟುಂಬಕ್ಕೆ ಬಹಿಷ್ಕಾರ!
ದುಡಿಯುವ ಭೂಮಿಯನ್ನು ದೇವಸ್ಥಾನವೊಂದಕ್ಕೆ ದಾನ ನೀಡಿಲ್ಲ ಎಂಬ ಕಾರಣಕ್ಕೆ ಕುಟುಂಬಕ್ಕೆ ಹಲವು ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ. ಅಲ್ಲದೇ, ಕುಟುಂಬದ ಜತೆ ಮಾತನಾಡಿದ ಅಣ್ಣ ತಮ್ಮಂದಿರ ಕುಟುಂಬಗಳಿಗೂ ಬಹಿಷ್ಕಾರ ಹಾಕಲಾಗಿದ್ದು, ನೆರೆ ಮನೆಯವರಿಗೆ ಹಣದ ರೂಪದಲ್ಲಿ ದಂಡ ಹಾಕಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರಕನ್ನಡ (ಜ.7): ಆ ಕುಟುಂಬ ಹಲವು ವರ್ಷಗಳಿಂದ ಆ ಊರಿನ ಜನರಲ್ಲೊಂದಾಗಿತ್ತು. ಆದರೆ, ತಾವು ದುಡಿಯುವ ಭೂಮಿಯನ್ನು ದೇವಸ್ಥಾನವೊಂದಕ್ಕೆ ದಾನ ನೀಡಿಲ್ಲ ಎಂಬ ಕಾರಣಕ್ಕೆ ಆ ಕುಟುಂಬಕ್ಕೆ ಹಲವು ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ. ಅಲ್ಲದೇ, ಇವರ ಜತೆ ಮಾತನಾಡಿದ ಅಣ್ಣ ತಮ್ಮಂದಿರ ಕುಟುಂಬಗಳಿಗೂ ಬಹಿಷ್ಕಾರ ಹಾಕಲಾಗಿದ್ದು, ನೆರೆ ಮನೆಯವರಿಗೆ ಹಣದ ರೂಪದಲ್ಲಿ ದಂಡ ಹಾಕಲಾಗಿದೆ. ದೇವಸ್ಥಾನವೊಂದಕ್ಕೆ ತಾವು ದುಡಿಯುವ ಜಮೀನು ದಾನವಾಗಿ ನೀಡಿಲ್ಲವೆಂದು 2017ರಿಂದ ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಯಡೋಗಾ ನೀರಲಗ ನಿವಾಸಿ ಯಲ್ಲಾರಿ ಮಸನು ಕದಮ್ ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. 1988ರಲ್ಲಿ ಯಲ್ಲಾರಿ ಮಸನು ಕದಮ್ ಅವರು ನೀರಲಗದಲ್ಲಿ ಒಂದು ಎಕರೆ ಜಮೀನು ಖರೀದಿಸಿ ಅದರಲ್ಲೇ ಕಬ್ಬು ಹಾಗೂ ಮಾವಿನ ಮರಗಳನ್ನು ಬೆಳೆಯುತ್ತಿದ್ದರು. 2017ರಲ್ಲಿ ಇವರ ಊರಿನ ದೇವಿ ದೇವಸ್ಥಾನದ ಜಾತ್ರೆಯ ಹಿನ್ನೆಲೆ ಊರಿನ ಪಂಚರು ಬಂದು ನಿಮ್ಮ ಜಾಗದಲ್ಲಿ ದೇವರನ್ನು ಕೂರಿಸುತ್ತೇವೆ ಅಂದಿದ್ರು. ಆಯ್ತು ಕೂರಿಸಿ ಎಂದು ಹೇಳಿದ್ದೆ. ಆದರೆ, ಪಂಚರೆಲ್ಲಾ ಸೇರಿಕೊಂಡು ಆ ಜಾಗವನ್ನು ದೇವಸ್ಥಾನಕ್ಕೆ ದಾನವಾಗಿ ನೀಡಲು ಒತ್ತಾಯ ಮಾಡಿದ್ದರು.
ಯಾವಾಗ ಯಲ್ಲಾರಿ ಮಸನು ಕದಮ್ ತಾವು ದುಡಿಯುವ ಜಮೀನು ದಾನವಾಗಿ ನೀಡಲು ನಿರಾಕರಿಸಿದರೋ ಊರಿನ ಪಂಚರು ಸೇರಿ ಇವರ ಮೇಲೆ 10,000ರೂ. ದಂಡ ಹಾಕಿದ್ದಲ್ಲದೇ, ಈ ಕುಟುಂಬದ ಜತೆ ಯಾರೂ ಮಾತನಾಡಬಾರದು ಎಂದು ಊರಿನ ಪಂಚಾಯತ್‌ನಲ್ಲಿ ಇವರ ಕುಟುಂಬದ ಮೇಲೆ ಬಹಿಷ್ಕಾರ ಹಾಕಲಾಗಿದೆ.
ಇವರ ಜಾಗದಲ್ಲಿದ್ದ ಮಾವಿನ ಮರಗಳನ್ನು ಕೂಡಾ ಕಡಿದು ಹಾಕಲಾಗಿತ್ತು. ಪಂಚರು ಹೊರಡಿಸಿದ ಆದೇಶದ ವಿರುದ್ಧ ಹೋಗಿ ಈ ಕುಟುಂಬದ ಜತೆ ಮಾತನಾಡಿದ ಸಂಬಂಧಿಕರಾದ ರಾಮದಾಸ್ ಶಾಂತರಾಮ ಕದಮ್, ವಿಠಲ ಗಂಗಾರಾಮ್ ಕದಮ್, ತುಕಾರಾಮ ಜೈವಂತ ಕದಮ್, ಗೋವಿಂದ ಜೈವಂತ ಕದಮ್, ಶಿವಾಜಿ ಜೈವಂತ ಕದಮ್, ಮಾವ್ಲು ಜಾಯಪ್ಪ ಕದಮ್ ಅವರ ಕುಟುಂಬಗಳಿಗೂ 1,000ರೂ. ದಂಡದೊಂದಿಗೆ ಬಹಿಷ್ಕಾರ ಹಾಕಲಾಗಿದೆ. ಅಲ್ಲದೇ, ಕುಟುಂಬದ ಸದಸ್ಯರ ಜತೆ ಮಾತನಾಡಿದ ಊರಿನ 20 ಜನರಿಗೆ ತಲಾ 500ರೂ. ದಂಡ ಹಾಕಲಾಗಿದೆ. ಇದರಿಂದ ಯಲ್ಲಾರಿ ಮಸನು ಕದಮ್ ಕುಟುಂಬ ಹಾಗೂ ಇತರ ಕುಟುಂಬಗಳು ನೋವಿನಲ್ಲೇ ದಿನದೂಡುತ್ತಾ ಕಣ್ಣೀರು ಹಾಕುತ್ತಿವೆ.
ಅಂದಹಾಗೆ, 2017ರಲ್ಲಿ ಊರಿನ ಪಂಚರಾಗಿದ್ದ ಸಂಜಯ್ ಪಾಟೀಲ್, ಮಂಜುನಾಥ್ ಪಾಟೀಲ್, ಮೋಹನ್ ಗಾಧಿ, ನಾಗೇಂದ್ರ ಭುಜಿ, ಲಕ್ಷ್ಮಣ್ ಕೋಲೇಕರ್, ರಾಮದಾಸ್ ಬೆಳಗಾವ್‌ಕರ್, ದೇವೇಂದ್ರ ಕೋಲೇಕರ್, ಸುಭಾಷ್ ಭುಜಿ ಅವರು ಯಲ್ಲಾರಿ ಮಸನು ಕದಮ್ ಕುಟುಂಬಕ್ಕೆ ಅಂದು ಹಾಕಿದ್ದ ಬಹಿಷ್ಕಾರ ಇಂದಿಗೂ ಹೊಸ ಪಂಚರುಗಳ ಜತೆ ಮುಂದುವರಿಯುತ್ತಿದೆ. ಇವರ ಕುಟುಂಬ ಸದಸ್ಯರಾದ ರಾಮದಾಸ್ ಎಂಬವರ ಅವರ ತಂದೆ ತೀರಿಕೊಂಡಾಗ ಅವರ ಮನೆಗೆ ಯಾರಾದ್ರೂ ಹೋದಲ್ಲಿ 10,000ರೂ.ದಂಡ ಹಾಕಲಾಗುವುದು ಎಂದು ಕೂಡಾ ಘೋಷಣೆ ಮಾಡಲಾಗಿತ್ತು.
ಇದರಿಂದಾಗಿ ಕುಟುಂಬಕ್ಕೆ ಸಹಾಯ ಮಾಡಲು ಅಥವಾ ನೋವಿನ ಸಂದರ್ಭ ಹೆಗಲು ನೀಡಲು ಊರಿನ ಯಾವ ಸದಸ್ಯನೂ ಹೋಗಿಲ್ಲ. ಇವರ ಕುಟುಂಬ ಸದಸ್ಯರೇ ಸುಮಾರು 10 ಜನರು ಮೃತದೇಹಕ್ಕೆ ಹೆಗಲು ನೀಡಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಇನ್ನು ಪಂಚರ ಹೆದರಿಕೆಯಿಂದ ಯಲ್ಲಾರಿ ಕದಮ್ ಅವರ ಹೊಲದಲ್ಲಿ ಬೆಳೆದ ಕಬ್ಬು ಕಟಾವು ಮಾಡಲು ಕೂಡಾ ಊರಿನ ಯಾರೂ ಕೆಲಸಕ್ಕೆ ಬರುವುದಿಲ್ಲ. ಈ ಕುಟುಂಬ ಹೊರಗಿನಿಂದ ಕೆಲಸಕ್ಕೆ ಜನರನ್ನು ಕರೆ ತಂದರೂ ಅವರನ್ನು ಕೂಡಾ ಹೆದರಿಸಿ ಓಡಿಸಲಾಗುತ್ತಿದೆ. ಬಹಿಷ್ಕರಿಸಲ್ಪಟ್ಟ ಕದಮ್ ಕುಟುಂಬ ಹಾಗೂ ಅವರ ಸಂಬಂಧಿಕರ ಜತೆ ಊರಿನ ಜನರು ಯಾವುದೇ ಸಂಪರ್ಕ ಮಾತ್ರವಲ್ಲದೇ, ಅಂಗಡಿಗಳಲ್ಲಿ ರೇಷನ್ ಕೂಡಾ ನೀಡುವುದಿಲ್ಲ.
ಸಮ್ಮೇದ್ ಶಿಖರ್ಜಿ ಜೈನ ತೀರ್ಥಕ್ಷೇತ್ರ ಪ್ರವಾಸಿ ಕ್ಷೇತ್ರ ಬೇಡ, ದಾಂಡೇಲಿ ಜೈನ ಸಮಾಜ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಇದರಿಂದ ರೇಷನ್ ಖರೀದಿಸಲು ಕದಮ್ ಕುಟುಂಬ ಹಾಗೂ ಸಂಬಂಧಿಕರು ಹಳಿಯಾಳ ನಗರಕ್ಕೆ ಹೋಗಿ ಬರಬೇಕಿದೆ. ಅಲ್ಲದೇ, ಊರಿನ ಜಾತ್ರೆಗೆ ಹಾಗೂ ಯಾವುದೇ ಕಾರ್ಯಕ್ರಮಕ್ಕೆ ಇವರಿಗೆ ಅಹ್ವಾನವಿಲ್ಲ. ಇವರು ದೇವಸ್ಥಾನಕ್ಕೆ ಪ್ರವೇಶ ಮಾಡಬೇಕಂದಾಗಲೂ ದೇವಳಕ್ಕೆ ಬಾಗಿಲು ಹಾಕಲಾಗುತ್ತದೆ. ದಂಡದ ಭೀತಿಯಿಂದ ಈ ಕುಟುಂಬದ ಜತೆ ಯಾರೂ ಮಾತನಾಡದ ಕಾರಣ ಕುಟುಂಬದ ಸದಸ್ಯರು ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾರೆ.
Uttara Kannada: ದೇವರೇ ಏನಿದು ಶಿಕ್ಷೆ?: ದೇವಸ್ಥಾನಕ್ಕೆ ಜಮೀನು ನೀಡದ ಕುಟುಂಬಕ್ಕೆ ಬಹಿಷ್ಕಾರ
ಪ್ರಕರಣ ಸಂಬಂಧಿಸಿ ಪೊಲೀಸರು, ತಹಶೀಲ್ದಾರ್ ಹಾಗೂ ಜನಪ್ರತಿನಿಧಿಗಳಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕಾರಣದಿಂದ ಕುಟುಂಬದ ಮೇಲಾಗ್ತಿರುವ ದೌರ್ಜನ್ಯದ ವಿರುದ್ಧ ಯಲ್ಲಾರಿ ಕದಮ್ ಕುಟುಂಬ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಕಾಯುತ್ತಿದೆ. ಒಟ್ಟಿನಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಬಾಳುತ್ತಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಇಂತದ್ದೊಂದು ಅಮಾನವೀಯ ಪ್ರಕರಣ ನಡೆದಿರೋದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡು ಕೂಡಲೇ ನ್ಯಾಯ ಒದಗಿಸಬೇಕಿದೆ.