ಬೆಳ್ತಂಗಡಿ (ಫೆ.17): ಯಾವ ವ್ಯಕ್ತಿಯ ವೈಕುಂಠ ಸಮಾರಾಧನೆ ಆಗುತ್ತಿತ್ತೋ ಅಂದೇ ಆ ವ್ಯಕ್ತಿ ಕಾಣಿಸಿಕೊಂಡು ಅಚ್ಚರಿ ಹುಟ್ಟಿಸಿದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀನಿವಾಸ ಯಾನೆ ಶೀನ ಮೊಯ್ಲಿ ಎಂಬವರು ಮೃತಪಟ್ಟಿರುವುದೆಂದು ತಿಳಿದು ಕುಟುಂಬದವರು ಆತನ ವೈಕುಂಠ ಸಮಾರಾಧನೆಯನ್ನು ಸೋಮವಾರ ಮಾಡುತ್ತಿದ್ದರು. ಇದೇ ಸಂದರ್ಭ ಆತ ಪ್ರತ್ಯಕ್ಷರಾಗಿದ್ದಾರೆ.

ಆಗಿದ್ದು ಏನು?: ಗರ್ಡಾಡಿ ಗ್ರಾಮದ ಶ್ರೀನಿವಾಸ ಜ.26ರಂದು ನಾಪತ್ತೆಯಾಗಿದ್ದರು. ಫೆ.3ರಂದು ಓಡಿಲ್ನಾಳ ಗ್ರಾಮದ ಕುಲ್ಲುಂಜಕೆರೆಯಲ್ಲಿ ಅನಾಥ ಶವವೊಂದು ಪತ್ತೆಯಾಗಿ ಅದು ಪೂರ್ತಿ ಕೊಳೆತ ಸ್ಥಿತಿಯಲ್ಲಿತ್ತು. 

ಅದು ಶ್ರೀನಿವಾಸ ಅವರದ್ದೇ ಶರೀರ ಎಂದು ಅಂತ್ಯಸಂಸ್ಕಾರ ಮಾಡಿದ್ದರು. ಇತ್ತ ಕುಟುಂಬದವರು ಜ್ಯೋತಿಷರೊಬ್ಬರಲ್ಲಿ ಪ್ರಶ್ನೆ ಕೇಳಿದಾಗ ಆತ ಸತ್ತಿಲ್ಲ, ಬಂದೇ ಬರುತ್ತಾನೆ ಎಂದು ತಿಳಿಸಿದ್ದರು. ಆದರೆ, ಜ್ಯೋತಿಷಿ ಹೇಳಿ ಹತ್ತು ದಿನ ಕಳೆದರೂ ಬಾರದೆ ಇದ್ದದುದರಿಂದ ವೈಕುಂಠ ಸಮಾರಾಧನೆ ಆಯೋಜಿಸಿದ್ದರು.