ಗಂಗಾವತಿ(ಜೂ.21): ಎರಡು ದಿನಗಳ ಹಿಂದೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಹುಮತ ಹೊಂದಿದ್ದ ಕಾಂಗ್ರೆಸ್‌ನ ಮಹ್ಮದ್‌ ರಫಿ ಜಯ ಗಳಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದ ಫಕೀರಪ್ಪ 6 ಮತಗಳನ್ನು ಪಡೆದು ಸೋಲನುಭವಿಸಿದ ಬೆನ್ನಲ್ಲೇ ವಾಪಸ್‌ ಕಾಂಗ್ರೆಸ್‌ಗೆ ಬಂದು ಅಚ್ಚರಿ ಮೂಡಿಸಿದ್ದಾರೆ.

ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, ಕೇವಲ ನಾಲ್ಕು ಸ್ಥಾನಗಳು ಹೊಂದಿದ್ದ ಬಿಜೆಪಿ ಸದಸ್ಯರು ಕಾಂಗ್ರೆಸ್‌ನ ಫಕೀರಪ್ಪ ಅವರನ್ನು ಸೆಳೆದು ಅಧ್ಯಕ್ಷರನ್ನಾಗಿ ಮಾಡಲು ಹೊರಟಿತ್ತು. 7 ಕಾಂಗ್ರೆಸ್‌ ಸದಸ್ಯರಲ್ಲಿ ಮೂವರನ್ನು ಬಿಜೆಪಿ ಸೆಳೆದಿತ್ತು. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ತನ್ನ ನಾಲ್ಕು ಸದಸ್ಯರ ಜೊತೆಗೆ ಇಬ್ಬರು ಪಕ್ಷೇತರ ಸದಸ್ಯರು, ಓರ್ವ ಬಿಜೆಪಿ ಸದಸ್ಯೆಯನ್ನು ಸೆಳೆದುಕೊಳ್ಳುವ ಮೂಲಕ 7 ಸದಸ್ಯರ ಬಲದೊಂದಿಗೆ ಅಧ್ಯಕ್ಷ ಗಾದಿ ತನ್ನದಾಗಿಸಿಕೊಂಡಿತು.

ಕೊರೋನಾ ಕಾಟ: ಕೊಪ್ಪ​ಳದ ಖುಷಿ ಆಸ್ಪತ್ರೆ ಸೀಲ್‌ಡೌನ್‌

ತನಗೆ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕೆ ಜಂಗಮರ ಕಲ್ಗುಡಿ ಕ್ಷೇತ್ರದ ಸದಸ್ಯ ಫಕೀರಪ್ಪ ಕಾಂಗ್ರೆಸ್‌ ತೊರೆದು ಗಂಗಾವತಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಾಲು ಹಾಕಿಕೊಂಡು ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡರು. ಸೋತ ಎರಡೇ ದಿನದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಸಮ್ಮುಖದಲ್ಲಿ ಮತ್ತೆ ಕಾಂಗ್ರೆಸ್‌ ಸೇರಿ ಅಚ್ಚರಿ ಮೂಡಿಸಿ​ದ್ದಾ​ರೆ.