ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ(ಫೆ.29): ಲಕ್ಕಿ ಡ್ರಾದಲ್ಲಿ ನಿಮಗೆ ದ್ವಿಚಕ್ರ ವಾಹನ ಸೇರಿದಂತೆ 42 ಬಂಪರ್‌ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಕೇವಲ 800 ರು. ತುಂಬಿದರೆ ಆಯಿತು. ಫೆ.28 ರಂದು ಶಿರಹಟ್ಟಿಯ ಫಕ್ಕೀರೇಶ್ವರ ಮಠದಲ್ಲಿ ಲಕ್ಕಿ ಡ್ರಾ ತೆಗೆಯಲಾಗತ್ತದೆ ಎಂದು ನಂಬಿಸಿ ತಾಲೂಕಿನ ಹಲವಾರು ಹಳ್ಳಿಗಳ ಸುಮಾರು 3500 ಮಹಿಳೆಯರಿಂದ 800 ವಸೂಲಿ ಮಾಡಿದ ತಂಡವೊಂದು ಕೈಕೊಟ್ಟು ಪರಾರಿಯಾಗಿದ್ದು, ಹಣ ನೀಡಿದವರು ಶುಕ್ರವಾರ ಶಿರಹಟ್ಟಿಗೆ ಆಗಮಿಸಿ ಮೋಸ ಹೋಗಿದ್ದಕ್ಕೆ ಅಳಲು ತೋಡಿಕೊಂಡಿದ್ದಾರೆ.

ತಾಲೂಕಿನ ಮಾಚೇನಹಳ್ಳಿ, ನಾದಿಗಟ್ಟಿ, ಬೆಳಗಟ್ಟಿ, ಬನ್ನಿಕೊಪ್ಪ, ಹಡಗಲಿ, ಬಾವನೂರ, ಗುಡ್ಡದಪುರ, ತಾರಿಕೊಪ್ಪ, ಕೆರಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಮಹಿಳೆ ಸೇರಿದಂತೆ 3 ಜನರ ತಂಡ ಮನೆಯಲ್ಲಿ ಪುರುಷರಿಲ್ಲದ್ದನ್ನು ಗಮನಿಸಿ ಮಹಿಳೆಯರ ಮನವೊಲಿಸಿ ಅವರಿಂದ ತಲಾ 800 ರು. ದಂತೆ ಒಟ್ಟು 24 ಲಕ್ಷ ರು. ಸಂಗ್ರಹಿಸಿ ಪರಾರಿಯಾಗಿದ್ದಾರೆ. ಅವರಿಗೆ ನಂಬಿಕೆ ಬರಲಿ ಎಂದು ಸದಸ್ಯತ್ವದ ಕಾರ್ಡ್‌ ಮತ್ತು ಗುರುತಿನ ಚೀಟಿ ಸಹ ನೀಡಿದ್ದು, ಅದರಲ್ಲಿ ದೂರವಾಣಿ ಸಂಖ್ಯೆ ಸಹ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದ್ವಿಚಕ್ರ ವಾಹನವೊಂದರಲ್ಲಿ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿದ ತಂಡ ಮುಗ್ದ ಜನರನ್ನು ನಂಬಿಸಿ, ನಾವು ಶಿರಹಟ್ಟಿಯವರೇ, ಬಸವೇಶ್ವರ ವೃತ್ತದ ಬಳಿ ಶ್ರೀಸಾಯಿ ಎಂಟರ್‌ಪ್ರೈಸಿಸ್‌ ಎಂಬ ದ್ವಿಚಕ್ರ ವಾಹನದ ಶೋರೂಮ್‌ ಇದೆ. ಫೆ.10 ರೊಳಗೆ ಹಣ ತುಂಬಿ 28 ರಂದು ಫಕ್ಕೀರೇಶ್ವರ ಮಠದಲ್ಲಿ ಲಕ್ಕಿ ಡೀಪ್‌ ಲಾಟರಿ ಡ್ರಾ ಮಾಡಲಾಗುವುದು ಎಂದು ಹೇಳಿ ಹಣ ಪಡೆದುಕೊಳ್ಳುತ್ತಿದ್ದರು.

ಮೋಸಹೋದ ಮಹಿಳೆಯರು:

ಹೆಚ್ಚಾಗಿ ಮಹಿಳೆಯೇ ಎಲ್ಲರೊಂದಿಗೂ ಮಾತನಾಡಿ ನಿಮಗೆ ದ್ವಿಚಕ್ರ ವಾಹನ ಸಿಗಲಿದೆ ಇಲ್ಲವಾದರೆ 42 ಬಂಪರ್‌ ಬಹುಮಾನವಿದೆ. ಅದೂ ಅಲ್ಲದೇ ಯಾವುದೇ ಬಹುಮಾನ ಬರದಿದ್ದರೂ 800 ರು. ಮರಳಿ ಸಿಗುತ್ತದೆ. ಆ ಮೊತ್ತದ ಸಮಾಧಾನಕರ ಬಹುಮಾನ ನಿಮಗೆ ಸಿಗಲಿದೆ ಎಂದು ಪುಸಲಾಯಿಸಲಾಗುತ್ತಿತ್ತು. ಹಣ ಇಲ್ಲವೆಂದರೆ, ಇನ್ನೂ ಸಮಯವಿದೆ. ನಿಮ್ಮ ಯಜಮಾನರನ್ನು ಕೇಳಿ. ಅವರು ಉಳಿಸಿದ ಹಣವನ್ನು ನೀಡಿ. ಅದೃಷ್ಟ ಖುಲಾಯಿಸಿದರೆ ಲಕ್ಷ ರು. ವಾಹನ, ಸಾವಿರಾರು ರು. ಮೌಲ್ಯದ ಎಲೆಕ್ಟ್ರಾನಿಕ್‌ ಉಪಕರಣ ನಿಮ್ಮದಾಗಲಿದೆ. ಇಲ್ಲವಾದರೆ ನೀವು ನೀಡುವ ಹಣಕ್ಕೆ ತಕ್ಕಂತೆ ನಿಮಗೆ ಬಹುಮಾನ ಸಿಗಲಿದೆ ಎಂದು ಮರಳು ಮಾಡಲಾಗುತ್ತಿತ್ತು.

ಇದನ್ನು ನಂಬಿ 3500 ಜನರು ಹಣ ನೀಡಿದ್ದಾರೆ. ಇಂದು ಶುಕ್ರವಾರ ಫೆ.28 ರಂದು ಶಿರಹಟ್ಟಿ ನಗರಕ್ಕೆ ಆಗಮಿಸಿ ನೋಡಿದರೆ ಅಲ್ಲಿ ಯಾರೂ ಇಲ್ಲ. ಬಸವೇಶ್ವರ ವೃತ್ತದಲ್ಲಿ ಶ್ರೀ ಸಾಯಿ ಎಂಟರ್‌ಪ್ರೈಸಿಸ್‌ ಎಂಬ ಸಂಸ್ಥೆಯೂ ಇರಲಿಲ್ಲ. ಯಾವುದೇ ಲಕ್ಕಿ ಡ್ರಾ ಸಹ ಇರಲಿಲ್ಲ. ಅವಳು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಆ ಸಂಖ್ಯೆಯೂ ಚಾಲ್ತಿಯಲ್ಲಿಲ್ಲ. ಇದರಿಂದ ಮಹಿಳೆಯರು ಕಕ್ಕಾಬಿಕ್ಕಿಯಾಗಿದ್ದಾರೆ.
ಮೋಸ ಹೋದ ಮಹಿಳೆಯರು ಶುಕ್ರವಾರ ಶಿರಹಟ್ಟಿಯ ತಹಶೀಲ್ದಾರ ಕಚೇರಿ, ಫಕ್ಕೀರೇಶ್ವರ ಮಠ, ಪೊಲೀಸ್‌ ಠಾಣೆ, ಬಸವೇಶ್ವರ ವೃತ್ತದ ಶೋರೂಂ ಬಳಿ ಗುಂಪು ಗುಂಪಾಗಿ ನಿಂತು ಚರ್ಚಿಸುತ್ತಿದ್ದರು. ಯಾಕೆ ಇಷ್ಟೊಂದು ಜನರು ಗ್ರಾಮೀಣ ಭಾಗದಿಂದ ಅದರಲ್ಲೂ ಮಹಿಳೆಯರೇ ಆಗಮಿಸಿದ್ದಾರೆ ಎಂದು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿತು.

ನಂಬಿ ಮೋಸ ಹೋಗಿದ್ದೇವೆ. ನಮ್ಮ ತಾಲೂಕಿನವರೇ ಎಂದು ಹೇಳಿದ್ದರಿಂದ ನಂಬಿದೆವು. ಏನು ಮಾಡೋದು ಎಂದು ತಮ್ಮ ಪತ್ನಿಯರ ಜೊತೆ ದ್ವಿಚಕ್ರ ವಾಹನ, ಉಪಕರಣಗಳ ಆಸೆಗೆ ಬಂದಿದ್ದ ಹೇಮಣ್ಣ ಕುರಿ, ಶಿವಣ್ಣ ಮರಿಗೌಡರ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರ ದಾಖಲಾಗಿಲ್ಲ.