ಪುಕ್ಕಟೆ ಸೈಟ್ : 150 ಎಕರೆ ಜಾಗದಲ್ಲಿ ಹದ್ದು ಬಸ್ತು!
150 ಎಕರೆ ಜಾಗದಲ್ಲಿ ಉಚಿತವಾಗಿ ಸೈಟ್ ಹಂಚಿಕೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಜನ ಆಗಮಿಸಿ ಹದ್ದು ಬಸ್ತು ಮಾಡಿರುವ ಘಟನೆ ನಡೆದಿದೆ. ಬಳಿಕ ಈ ಬಗ್ಗೆ ವಾಸ್ತವ ವಿಚಾರ ಬೆಳಕಿಗೆ ಬಂದಿದೆ.
ದಾವಣಗೆರೆ (ಫೆ.01): ಶಾಸಕರು, ಪುರಸಭೆ ಪುಕ್ಕಟೆ ಸೈಟ್ ಹಂಚುವ ವದಂತಿ ಹರಡಿ ನೂರಾರು ಮಂದಿ ಸಲಾಕೆ, ಗುದ್ದಲಿ ಸಮೇತ ತೆರಳಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ತಮ್ಮದೆಂದು ಹದ್ದುಬಸ್ತು ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ಚಿಕ್ಕುಲಿಕೆರೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಸುಮಾರು 150 ಎಕರೆ ಜಾಗದಲ್ಲಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಪುರಸಭೆ ಸದಸ್ಯರು ಮನೆ ಕಟ್ಟಿಕೊಳ್ಳಲು ಹೇಳಿದ್ದಾರೆಂಬ ಗಾದಿ ಸುದ್ದಿ ಹರಡಿ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಯಿತು.
'ಜಮೀನು ಕೊಟ್ಟ ರೈತರಿಗೆ ಅವರ ಜಾಗದಲ್ಲೇ ಬಿಡಿಎ ನಿವೇಶನ' ...
ಈ ಗಾಳಿ ಸುದ್ದಿ ನಂಬಿದ ಜನ ವಯೋವೃದ್ಧರು, ಗರ್ಭಿಣಿ, ಬಾಣಂತಿಯರ ಸಮೇತ ನೂರಾರು ಸಂಖ್ಯೆಯಲ್ಲಿ ಆಪೆ ಆಟೋ, ದ್ವಿಚಕ್ರ ವಾಹನಗಳಲ್ಲಿ ತೆರಳಿ ಚಿಕ್ಕುಲಿಕೆರೆ ಗ್ರಾಮದ ಸರ್ವೆ ನಂ.91, ಲಕ್ಷ್ಮೀಸಾಗರದ ಸರ್ವೆ ನಂ.15ರಲ್ಲಿದ್ದ ಸ್ಥಳಕ್ಕೆ ತಮ್ಮ ಜಾಗ ಎಂಬಂತೆ ಗಡಿ ಹಾಕಿಕೊಂಡು, ಹಗ್ಗ ಕಟ್ಟಿಕೊಂಡು ನಿಂತುಬಿಟ್ಟಿದ್ದರು. ಸಲಾಕೆ, ಹಾರೆ, ಗುದ್ದಲಿ, ಪುಟ್ಟಿಗಳ ಸಮೇತ ಕುಟುಂಬ ಸಮೇತರಾಗಿ ಬಂದ ಜನ ತಮ್ಮ ಜಾಗ ಇದೇ ಎಂಬುದಾಗಿ ಗೂಟ ನೆಟ್ಟು, ಕಲ್ಲುಗಳನ್ನು ಹಾಕಿಕೊಂಡು ಜಾಗಕ್ಕೆ ತಮಗೇ ತಾವೇ ಹದ್ದುಬಸ್ತು ಮಾಡಿಕೊಂಡಿದ್ದರು.
ಕೆಲವರಂತು ಜಾಗಕ್ಕೆ ಬೇಲಿ ಹಾಕಿಕೊಳ್ಳುವುದಕ್ಕೂ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಗಾಳಿ ಸುದ್ದಿ ನಂಬಿ ಬಂದಿದ್ದ ಜನಕ್ಕೆ ವಾಸ್ತವ ವಿಚಾರ ತಿಳಿಸಿ ವಾಪಸ್ ಕಳುಹಿಸಿದರು. ಯಾರೋ ಕಿಡಿಗೇಡಿಗಳು ಹಬ್ಬಿಸಿದ ವದಂತಿ, ಗಾಳಿ ಸುದ್ದಿಯಿಂದಾಗಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.