ಚನ್ನಪಟ್ಟಣ [ನ.17]:  ಪೊಲೀಸರಿಗೆ ಸಿಕ್ಕಿ ಬಿದ್ದಿರುವ ನಕಲಿ ಐಎಎಸ್ ಅಧಿಕಾರಿ ಮಹಮದ್ ಸಲ್ಮಾನ್ ಅಮಾಯಕ ಜನರಿಗೆ ಸರ್ಕಾರಿ ಉದ್ಯೋಗ ಹಾಗೂ ನಿವೇಶನ ಕೊಡಿಸುವು ದಾಗಿ ನಂಬಿಸಿ ಹಣ ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ .

ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಮಹಮ ದ್ ಸಲ್ಮಾನ್ ಮತ್ತು ತಂಡ ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಚನ್ನಪಟ್ಟಣ, ಮಾಗಡಿ, ಗಂಗಾವತಿ ಹೀಗೆ ಹಲವಾರು ಕಡೆ ಸಂಚರಿಸಿ ಕೆಲಸ, ನಿವೇಶನ ಕೊಡಿಸುವುದಾಗಿ ಹಣ ವಂಚಿಸುತ್ತಿದ್ದನು. ಆರ್‌ಡಿಪಿಐ ಅಧಿಕಾರಿ ಎಂದು ಹೇಳಿಕೊಂಡು ವಿಧಾನಸೌಧ, ಎಂ.ಎಸ್.ಬಿಲ್ಡಿಂಗ್‌ನಲ್ಲಿರುವ ಹಲವಾರು ಇಲಾಖೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಧಿಕಾರಿಗಳಿಂದ ಕೆಲಸ ಕಾರ್ಯಗಳಿಗೆ ಶಿಫಾರಸು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾಗಡಿ ತಾಲೂಕಿನ ಕುದೂರು
ಮುಂತಾದ ಗ್ರಾಮಗಳಲ್ಲಿ ಇರುವ ಅಂಗನವಾಡಿಗಳು ವಿಶೇಷವಾಗಿ ಉರ್ದು ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುವುದು, ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಸುಳ್ಳು ನಂಬಿಸಿದ್ದನು.

ಶಿವಮೊಗ್ಗ ತಾಲೂಕಿನ ಐನೋರ ಹೋಬಳಿ ಅಬ್ಬಲುಗೆರೆ ಗ್ರಾಮದ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ್ದ ಮಹಮದ್, ಏಳು ಹೋದರರ ಪೈಕಿ ಒಬ್ಬ. 2014 ರಲ್ಲಿ ಶಿವಮೊಗ್ಗ ಜಿಪಂನಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದನು. ಜಿಪಂಗೆ ಬರುತ್ತಿದ್ದ ಸಾರ್ವಜನಿಕರಿಗೆ ಕೆಲಸ ಮಾಡಿಕೊಟ್ಟು ಹಣ ಮಾಡುತ್ತಿದ್ದ. 2016 ರಲ್ಲಿ ಬೆಂಗಳೂರಿಗೆ ಆಗಮಿಸಿದ್ದನು. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲಕ್ಕೇನಹಳ್ಳಿ ಸೊಂಡೆಕೊಪ್ಪ ರಸ್ತೆಯ ಮನೆಯಲ್ಲಿ ವಾಸವಿದ್ದ. ತಾನು ಆರ್‌ಡಿಪಿಐ ಇಲಾಖೆಯ ಐಎಎಸ್ ಅಧಿಕಾರಿ ಅಂತಲೂ, ನೆಲಮಂಗಲದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನಾ ವೇದಿಕೆ ಕಚೇರಿ 
ಸ್ಥಾಪಿಸಿ ರಾಜ್ಯಾಧ್ಯಕ್ಷ ಅಂತಲೂ ಗುರುತಿಸಿಕೊಳ್ಳುತ್ತಿದ್ದನು. 

ಜನರನ್ನು ನಂಬಿಸಲು ಕಾರಿಗೆ ಸರ್ಕಾರಿ ಇಲಾಖೆಯ ಬೋರ್ಡ್‌ನಂತೆ ಕಾಣುವ ಹಸಿರು ಬಣ್ಣದ ವೇದಿಕೆಯ ಹೆಸರಿನ ಬೋರ್ಡ್ ಸಹ ಸಿಕ್ಕಿಸಿದ್ದ. ಕಾರಿಗೆ ರವಿಕುಮಾರ್ ಎಂಬ ವ್ಯಕ್ತಿಯನ್ನು ಚಾಲಕ ಜೊತೆಗೆ ಗನ್‌ಮ್ಯಾನ್ ಆಗಿ ನೇಮಿಸಿ ಕೊಂಡಿದ್ದನು. ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನ ವೇದಿಕೆಯ ಹೆಸರಿನಲ್ಲಿ ನಕಲಿ ಸಂಘಟನೆ ಸ್ಥಾಪಿಸಿ ತಾನು ರಾಜ್ಯಾಧ್ಯಕ್ಷನೆಂದು ಫೋಸು ಕೊಡುತ್ತಾ ಸರ್ಕಾರಿ ಇಲಾಖೆಗಳಲ್ಲಿ ಅವರಿವರ ಕೆಲಸ ಮಾಡಿಸಿಕೊಡುತ್ತಿದ್ದನು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದಿಬ್ಬರಿಗೆ ನಿವೇಶನ ಮಾಡಿಸಿಕೊಟ್ಟು ನಂಬಿಕೆ ಹುಟ್ಟಿಸಿದ್ದ. ಇದೇ ವೇಳೆ ತಾನು ಅಧಿಕಾರಿ ಅಂತಲೂ ನಂಬಿಸಲಾರಂಭಿಸಿದ್ದ. ಕೆಲಸ, ಸೈಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾರಂಭಿಸಿದ್ದನು. ನಕಲಿ ಐಎಎಸ್ ಅಧಿಕಾರಿಯಾಗಿ ಫೋಸು ಕೊಡುತ್ತಿದ್ದ ಆರೋಪದ ಮೇಲೆ ಬಂಧನದಲ್ಲಿರುವ ಮಹಮದ್ ಸಲ್ಮಾನ್ ಬಳಿ ಪೊಲೀಸರು ಇನ್ನೋವ ಕಾರು, ಲ್ಯಾಪ್ ಟಾಪ್‌ಗಳು, ಕ್ಯಾಮೆರಾ, ಮೊಬೈಲ್‌ಗಳು, ಪೊಲೀಸ್ ಲಾಠಿ, ಪೊಲೀಸ್ ಕ್ಯಾಪ್, ಕೆಲವು ರಬ್ಬರ್ ಸ್ಟಾಂಪ್ ಗಳು, ಬೇರೆ ಬೇರೆ ವ್ಯಕ್ತಿಗಳ ಆಧಾರ್ ಕಾರ್ಡ್‌ಗಳು, ಸರ್ಕಾರಿ ದಾಖಲೆ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪರಾರಿಯಾಗಿದ್ದ ವಂಚಕರು: ಚನ್ನಪಟ್ಟಣ ತಾಲೂಕು ಬೆಳೆಕೆರೆ ಗ್ರಾಮದಲ್ಲಿ ಸರ್ವೆ ಸಂಖ್ಯೆ 44/ಪಿ6ರ ಪಹಣಿ ತಿದ್ದುಪಡಿ ಮಾಡಿಕೊಡುವಂತೆ ಚನ್ನಪಟ್ಟಣ ತಹಸೀಲ್ದಾರ್ ಬಿ.ಕೆ.ಸುದರ್ಶನ್ ಅವರಿಗೆ ಫೋನು ಮೂಲಕ ತಾಕೀತು ಮಾಡಿದ್ದ. ನ.14ರ ಗುರುವಾರ ರಾತ್ರಿ ಚನ್ನಪಟ್ಟಣ
ಐಬಿಯ ಬಳಿ ಈತ, ಚಾಲಕ ರವಿಕುಮಾರ್ ಮತ್ತು ಮಂಜು ಎಂಬಾತನೊಡಗೂಡಿ ತಹಸೀಲ್ದಾರರನ್ನು ಭೇಟಿ ಮಾಡಿ ಮಾತನಾಡುತ್ತಿದ್ದಾಗ, ಸ್ಥಳಕ್ಕೆ ಬಂದ ಸಬ್ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತು ಸಿಬ್ಬಂದಿ ಕಂಡ ನಕಲಿ ಐಎಎಸ್ ಅಧಿಕಾರಿ ಮಹಮದ್ ಸಲ್ಮಾನ್ ಮತ್ತು
ಸಹಚರರು ಪರಾರಿಯಾಗಿದ್ದಾರೆ.

ಆರೋಪಿಗಳ ಬಂಧನ: ಈ ವೇಳೆ ತಹಸೀಲ್ದಾರ್ ಸುದರ್ಶನ್ ನೀಡಿದ ದೂರಿನ ಮೇರೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಸಾತನೂರು ವೃತ್ತದ ಬಳಿ ಇವರ ಕಾರು ನಿಂತಿತ್ತು. ಆದರೆ ಆರೋಪಿಗಳು ಇರಲಿಲ್ಲ. ಕಾರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ತನಿಖೆ ಆರಂಭಿಸಿ ಮಹಮದ್ ಸಲ್ಮಾನ್, ಈತನ ಬಳಿಕ ಕಾರು ಚಾಲಕ ಕಂ ಗನ್‌ಮ್ಯಾನ್ ಆಗಿದ್ದ ಬಿ.ರವಿ, ಈತನನ್ನು ಸರ್ಕಾರಿ ಅಧಿಕಾರಿ ಎಂದು ನಂಬಿ ಪಹಣಿ ತಿದ್ದುಪಡಿಗೆ ಒತ್ತಾಯಿಸಿದ ಚನ್ನಪಟ್ಟಣ ತಾಲೂಕು ಬೆಳೆಕರೆ ಗ್ರಾಮದ ಬಿ.ಎಸ್.ಮಂಜು ಮತ್ತು ಗೋವಿಂದರಾಜು ಒಟ್ಟು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.