ಶಿವಮೊಗ್ಗ(ಆ.14): ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಸಂಚಾರಿ ಆರೋಗ್ಯ ಘಟಕವನ್ನು ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಆರಂಭಿಸಿದ್ದು, ಶಿಕಾರಿಪುರ ತಾಲೂಕಿನ ಘಟಕದಲ್ಲಿ ನಕಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ತಾಲೂಕು ಕಚೇರಿ ಮುಂಬಾಗ ಪ್ರತಿಭಟಿಸಲಾಯಿತು.

ನೇತೃತ್ವ ವಹಿಸಿದ್ದ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಕೃಷ್ಣ ಹುಲಗಿ ಮಾತನಾಡಿ, ಘಟಕದಲ್ಲಿ ಎಂಬಿಬಿಎಸ್‌ ವೈದ್ಯರು ಕಡ್ಡಾಯವಾಗಿ ಇರಬೇಕು. ಜತೆಗೆ ಕೆಲ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಟೆಂಡರ್‌ ಪಡೆದ ಸಂಸ್ಥೆ ನಕಲಿ ವೈದ್ಯರನ್ನು ನೇಮಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಸಮಾಜ ಕಲ್ಯಾಣ ಹಾಗೂ ಆರೋಗ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿ ರಾಜ್ಯಾದ್ಯಂತ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಚಾಲನೆ ದೊರೆತ ಯೋಜನೆಯ ಬಗ್ಗೆ ಜನಸಾಮಾನ್ಯರು, ಬಡವರು, ಹಿಂದುಳಿದವರು ಬಹು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದೆ. ರಾಜ್ಯದಲ್ಲಿ ಟೆಂಡರ್‌ ಪಡೆದಿರುವ ಹೈದರಾಬಾದ್‌ ಮೂಲದ ಪ್ರಿಯಾ ಹೆಲ್ತ್‌ ಕೇರ್‌ ಸಂಸ್ಥೆಯು ಘಟಕದಲ್ಲಿ ಎಂಬಿಬಿಎಸ್‌ ಪದವಿ ಪಡೆದ ವೈದ್ಯರ ಬದಲು ನಕಲಿ ವೈದ್ಯರು, ಆಯುರ್ವೇದಿಕ್‌ ವೈದ್ಯರನ್ನು ನಿಯೋಜಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ.

ಕಾನೂನುಬಾಹಿರವಾಗಿ ರೋಗಿಗಳಿಗೆ ಚುಚ್ಚುಮದ್ದು, ಔಷಧೋಪಚಾರ ನೀಡಲಾಗುತ್ತಿದೆ. ಘಟಕದಲ್ಲಿನ ನಕಲಿ ವೈದ್ಯರಾದ ಡಾ. ರತನ್‌, ಡಾ. ದಿನೇಶ್‌ ಅವರ ಬಗ್ಗೆ ಜನತೆ ಅನುಮಾನಗೊಂಡು ಸಮಾಜ ಕಲ್ಯಾಣ ಇಲಾಖೆ, ತಾ. ವೈದ್ಯಾಧಿಕಾರಿಗಳ ಬಳಿ ಪ್ರಶ್ನಿಸಿದಾಗ ಎಂಬಿಬಿಎಸ್‌ ವೈದ್ಯರಲ್ಲದ ಬಗ್ಗೆ ಖಚಿತವಾಗಿದೆ ಎಂದು ದೂರಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪರವಾನಗಿ ರದ್ದು:

ಪ್ರಿಯಾ ಹೆಲ್ತ್‌ ಕೇರ್‌ ಸಂಸ್ಥೆ ಪರವಾನಗಿಯನ್ನು ಕೂಡಲೇ ರದ್ದುಪಡಿಸಿ ಉನ್ನತ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ ಅವರು, ಈಗಾಗಲೇ ಸರ್ಕಾರ ನೀಡಿದ ಹಣವನ್ನು ವಾಪಸ್‌ ಪಡೆದು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದರು.

ಸಂಸ್ಥೆ ಸಿಬ್ಬಂದಿ ನಾಪತ್ತೆ:

ಜನತೆಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ಸಂಚಾರಿ ಆರೋಗ್ಯ ಘಟಕದ ವಾಹನವನ್ನು ಪಟ್ಟಣದ ಬಿಸಿಎಂ ಹಾಸ್ಟೆಲ್‌ ಬಳಿ ನಿಲ್ಲಿಸಿದ್ದಾರೆ. ನಕಲಿ ವೈದ್ಯರು, ಪ್ರಿಯಾ ಹೆಲ್ತ್‌ ಕೇರ್‌ ಸಂಸ್ಥೆಯವರು ನಾಪತ್ತೆಯಾಗಿದ್ದಾರೆ. ಸಾಮಾನ್ಯ ಜನತೆಗೆ ಅತ್ಯಂತ ಉಪಯುಕ್ತವಾದ ಸಂಚಾರಿ ಆರೋಗ್ಯ ಘಟಕವನ್ನು ಹೊಸ ಸಂಸ್ಥೆಗೆ ವಹಿಸಿ ಕೂಡಲೇ ಪುನಃ ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.

ಶಿವಮೊಗ್ಗ: ನೆರೆ ಪರಿಹಾರ ಸ್ವೀಕಾರ ಕೇಂದ್ರ ಆರಂಭ, ನೀವೂ ನೆರವಾಗಬಹುದು

ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನ್ಯಾಯವಾದಿ ಮುಕ್ತಿಯಾರ್‌, ರಾಜುನಾಯ್ಕ, ಸಂಘಟನೆಯ ನಜೀರ್‌ ಅಹ್ಮದ್‌, ಮಂಜುನಾಥ್‌, ಮಾಲತೇಶ,ಪ್ರಕಾಶ್‌, ಶಿವಯ್ಯ ಇದ್ದರು.