ಬೆಂಗಳೂರು (ಮಾ.23):  ಕೆಎ​ಸ್‌​ಆ​ರ್‌ಪಿ ಕಾನ್‌​ಸ್ಟೇ​ಬ​ಲ್‌​ಗಳ ನೇಮ​ಕಾ​ತಿಯ ದೈಹಿಕ ಪರೀಕ್ಷೆಯಲ್ಲಿ ಮೂಲ ಅಭ್ಯ​ರ್ಥಿ​ಗಳ ಬದ​ಲಾಗಿ ನಕಲಿ ಅಭ್ಯ​ರ್ಥಿ​ಗ​ಳು ಹಾಜ​ರಾ​ಗಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆಗ್ನೇಯ ವಿಭಾಗದ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳ​ಗಾವಿ ಜಿಲ್ಲೆಯ ಗೋಕಾಕ್‌ ತಾಲೂ​ಕಿನ ಜಗ​ದೀಶ್‌ ದೊಡ್ಡ​ಗೌ​ಡ​ರ್‌​(24), ರಾಮ​ಚಂದ್ರ ಚಿಗ​ಡ್ಡ​ನ​ವ​ರ್‌(26) ಮತ್ತು ಲಕ್ಷ್ಮ​ಣ್‌​(24) ಮತ್ತು ರಾಯ​ಭಾ​ಗ​ದ ಮಲ್ಲಯ್ಯ ಪೂಜಾ​ರಿ​(25) ಹಾಗೂ ನಾಗಪ್ಪ ಫಕೀ​ರಪ್ಪ ಗೊಲ್ಲ (26), ಮಲ್ಲಿ​ಕಾ​ರ್ಜುನ್‌ ಡೋನಿ​(26) ಬಂಧಿ​ತರು. ತಲೆ​ಮ​ರೆ​ಸಿ​ಕೊಂಡಿ​ರುವ ಪ್ರಕಾಶ್‌ ಆಡಿ​ನ್‌, ಸೈಯದ್‌ ಚಿಮ್ಮ​ಡ್‌ ಎಂಬು​ವ​ವರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋ​ಪಿ​ಗಳ ವಿರುದ್ಧ ಪರ​ಪ್ಪನ ಅಗ್ರ​ಹಾರ ಠಾಣೆ ಮತ್ತು ಮಡಿ​ವಾಳ ಠಾಣೆ​ಯಲ್ಲಿ ಪ್ರಕ​ರ​ಣ​ಗಳು ದಾಖ​ಲಾ​ಗಿ​ವೆ ಎಂದು ಪೊಲೀ​ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಪುರದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು: ಕಾರಣ..? ..

230 (ಸ್ಥ​ಳೀ​ಯೇ​ತ​ರ) ವಿಶೇಷ ಮೀಸಲು ಪೊಲೀಸ್‌ ಕಾನ್‌​ಸ್ಟೇ​ಬಲ್‌ ಹುದ್ದೆ​ಗ​ಳನ್ನು ಭರ್ತಿ ಮಾಡಲು ಕಳೆದ ವರ್ಷ ಅಧಿ​ಸೂ​ಚನೆ ಹೊರ​ಡಿ​ಸ​ಲಾ​ಗಿ​ತ್ತು. ಈ ಸಂಬಂಧ ಜನ​ವ​ರಿ​ಯಲ್ಲಿ ದೈಹಿಕ ಪರೀಕ್ಷೆ ನಡೆ​ಸ​ಲಾ​ಗಿ​ತ್ತು. ಈ ವೇಳೆ ಆರೋಪಿ ಜಗ​ದೀಶ್‌ ದೊಡ್ಡ​ಗೌ​ಡ​ರ್‌ ತನ್ನ ಬದ​ಲಿಗೆ ಪ್ರಕಾಶ್‌ ಆಡಿನ್‌, ಮಲ್ಲಯ್ಯ ಪೂಜಾರಿ ಬದ​ಲಿಗೆ ಅಪ​ರಿ​ಚಿತ ವ್ಯಕ್ತಿ ಮತ್ತು ನಾಗಪ್ಪ ಫಕೀ​ರಪ್ಪ ಬದ​ಲಿಗೆ ಮಲ್ಲಿ​ಕಾ​ರ್ಜುನ್‌ ಡೋನಿ ಎಂಬ​ವರು ದೈಹಿಕ ಪರೀ​ಕ್ಷೆಗೆ ಹಾಜ​ರಾ​ಗಿದ್ದು, ಮೂವರು ಉತ್ತಮ ಅಂಕ​ ಪಡೆದು ದೈಹಿಕ ಪರೀಕ್ಷೆಯಲ್ಲಿ ಉತ್ತೀ​ರ್ಣ​ರಾ​ಗಿ​ದ್ದ​ರು. ಅದನ್ನು ವಿಡಿಯೋ ಚಿತ್ರೀ​ಕ​ರಣ ಮಾಡ​ಲಾ​ಗಿ​ತ್ತು.

ವೈದ್ಯಕೀಯ ಪರೀಕ್ಷೆ ವೇಳೆ ಬೆಳಕಿಗೆ:

ಉತ್ತೀ​ರ್ಣ​ಗೊಂಡ ಮೂವರು ಅಭ್ಯ​ರ್ಥಿ​ಗ​ಳಿಗೆ ಮಾ.8ರಿಂದ 23ರವ​ರೆಗೆ ನಗ​ರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪ​ತ್ರೆ​ಯಲ್ಲಿ ವೈದ್ಯ​ಕೀಯ ಪರೀಕ್ಷೆ ನಡೆ​ಸ​ಲಾ​ಗಿತ್ತು. ಈ ವೇಳೆ ದೈಹಿಕ ಪರೀ​ಕ್ಷೆ​ ಚಿತ್ರೀ​ಕ​ರಿ​ಸಿ​ಕೊಂಡಿದ್ದ ವಿಡಿ​ಯೋ ಮುಂದಿ​ಟ್ಟು​ಕೊಂಡು ಅಭ್ಯ​ರ್ಥಿ​ಗಳನ್ನು ವೈದ್ಯ​ಕೀಯ ಪರೀ​ಕ್ಷೆಗೆ ಕಳು​ಹಿ​ಸ​ಲಾ​ಗಿತ್ತು. ಈ ಮಧ್ಯೆ ಜಗ​ದೀಶ್‌ ದೊಡ್ಡ​ಗೌ​ಡ​ರ್‌ ಮತ್ತು ಮಲ್ಲಯ್ಯ ಪೂಜಾರಿ ದಾಖ​ಲಾತಿ ಪರಿ​ಶೀ​ಲನೆ ವೇಳೆ​ ಈ ಹಿಂದೆ ದೈಹಿಕ ಪರೀಕ್ಷೆಯಲ್ಲಿ ಭಾಗಿ​ಯಾ​ಗಿದ್ದ ಅಭ್ಯ​ರ್ಥಿಗಳ ಮುಖ​ ಚ​ಹ​ರೆಗೂ ಜನ​ವ​ರಿ​ಯಲ್ಲಿ ನಡೆದ ದೈಹಿಕ ಪರಿ​ಕ್ಷೆಯಲ್ಲಿ ಭಾಗಿ​ಯಾ​ಗಿದ್ದ ಅಭ್ಯ​ರ್ಥಿಗಳ ಮುಖಚಹ​ರೆಗೂ ವ್ಯತ್ಯಾಸ ಕಂಡು ಬಂದಿದೆ.

ಕೂಡ​ಲೇ ಇಬ್ಬರು ಆರೋ​ಪಿ​ಗ​ಳನ್ನು ವಶಕ್ಕೆ ಪಡೆ​ದು ತೀವ್ರ ವಿಚಾರಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ.

ಸೋದರ ಸಂಬಂಧಿ ಕಳು​ಹಿಸಿ ಸಿಕ್ಕಿ ಬಿದ್ದ

ಮತ್ತೊಂದು ಪ್ರಕ​ರ​ಣ​ದಲ್ಲಿ ನಾಗಪ್ಪ ಎಸ್‌ ಫಕೀ​ರ​ಪ್ಪ​ ಗೊ​ಲ್ಲ ಮತ್ತು ಮಲ್ಲಿ​ಕಾ​ರ್ಜುನ್‌ ಡೋನಿ ಎಂಬ​ವ​ರನ್ನು ಮಡಿ​ವಾಳ ಪೊಲೀ​ಸರು ಬಂಧಿ​ಸಿ​ದ್ದಾ​ರೆ. ಮಲ್ಲಿ​ಕಾ​ರ್ಜುನ ಡೋನಿ, ನಾಗ​ಪ್ಪನ ಫಕೀ​ರ​ಪ್ಪನ ಸೋದರ ಸಂಬಂಧಿಯಾಗಿ​ದ್ದಾನೆ, ಈ ಹಿಂದೆ ನಾಲ್ಕೈದು ಬಾರಿ ದೈಹಿಕ ಪರೀ​ಕ್ಷೆ​ಯಲ್ಲಿ ಅನುತ್ತೀರ್ಣಗೊಂಡಿದ್ದರಿಂದ ಸಂಬಂಧಿ ಮಲ್ಲಿ​ಕಾ​ರ್ಜನ್‌ ಡೋನಿ​ಯನ್ನು ಕಳು​ಹಿ​ಸಿ ಸಿಕ್ಕಿ ಬಿದ್ದಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.