ಚಾಮರಾಜನಗರ [ಸೆ.01]:  ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡಿರುವ ಸದೃಢರು ಸೆ.30ರೊಳಗೆ ಬಿಪಿಎಲ್‌ ಕಾರ್ಡ್‌ ಅನ್ನು ಹಿಂದಿರುಗಿಸುವಂತೆ ಆಹಾರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಕೇಂದ್ರ, ರಾಜ್ಯ ಸರ್ಕಾರ ನೀಡುತ್ತಿರುವ ಬಿಪಿಎಲ್‌ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡಿತರ ಪಡೆಯುತ್ತಿದ್ದು, ಸರ್ಕಾರಕ್ಕೆ ವಂಚನೆ ಮಾಡುತ್ತಿರುವುದು ಕಂಡು ಬಂದಿದೆ.

ಆದಾಯ ತೆರಿಗೆ ಪಾವತಿಸುತ್ತಿರುವ, 1000 ಅಡಿ ಅಥವಾ 10 ಚದರಕ್ಕಿಂತ ದೊಡ್ಡದಾದ ಪಕ್ಕಾ ಮನೆ ಹೊಂದಿರುವ ಕೆಲವು ಕುಟುಂಬಗಳು, ಶಿಕ್ಷಣ, ಸಾರಿಗೆ, ವಿದ್ಯುತ್‌, ರೈಲ್ವೆ, ಪೊಲೀಸ್‌ ಮೊದಲಾದ ಸರ್ಕಾರಿ ಇಲಾಖೆಯಲ್ಲಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ಹೊರತುಪಡಿಸಿ, ಕುಟುಂಬದ ಇತರರ ಹೆಸರಿನಲ್ಲಿ ತಮ್ಮ ಹೆಸರೂ ಸೇರಿಸಿ ಬಿಪಿಎಲ್‌ ಪಡಿತರ ಚೀಟಿ ಪಡೆದು ವಂಚಿಸಿದ್ದಾರೆ.

ಬಿಪಿಎಲ್‌ ಕಾರ್ಡ್‌ಗಾಗಿ ಸರ್ಕಾರಕ್ಕೆ ವಂಚನೆ:

ಸಹಕಾರ ಸಂಘಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿಗಳ ನೌಕರರು, ಬ್ಯಾಂಕ್‌ ನೌಕರರು, ಆಸ್ಪತ್ರೆ ನೌಕರರು, ವಕೀಲರು, ಆಡಿಟ​ರ್‍ಸ್ಗಳು, ದೊಡ್ಡ ಅಂಗಡಿ, ಹೋಟೆಲ್‌ ವರ್ತಕರು, ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ-ಕಾಲೇಜು ನೌಕರರು, ಗುತ್ತಿಗೆದಾರರು, ಕಮಿಷನ್‌ ಏಜೆಂಟ್‌ಗಳ ಮನೆ, ಮಳಿಗೆ ಕಟ್ಟಡಗಳಿಗೆ ಬಾಡಿಗೆ ನೀಡಿ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಪಡೆದಿರುವ ಬಗ್ಗೆ ಕಂಡು ಬಂದಿದೆ.

ಪತ್ತೆ ಪ್ರಕ್ರಿಯೆ ಆರಂಭ:

ಸರ್ಕಾರವು ಬಿಪಿಎಲ್‌ ಪಡಿತರ ಚೀಟಿ ಪಡೆಯಲು 1,20,000  ರು. ಕುಟುಂಬದ ಆದಾಯ ನಿಗದಿಪಡಿಸಲಾಗಿದ್ದು, ಈ ಆದಾಯ ಮೀರಿದ ಕುಟುಂಬಗಳು ಬಿಪಿಎಲ್‌ ಪಡೆದು ವಂಚಿಸುತ್ತಿದ್ದಾರೆ. ಒಂದು ಕೆಜಿ ಅಕ್ಕಿಗೆ 35ರು.ಗಳಂತೆ ಸರ್ಕಾರ ಪಾವತಿಸಿ ದುರ್ಬಲ ಕುಂಟುಂಬಗಳಿಗೆ ನೀಡುತ್ತಿರುವ ಯೋಜನೆಯ ಲಾಭವನ್ನು ಕೆಲವು ಸದೃಢರು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವುದು ಹಾಗೂ ಈ ರೀತಿ ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿರುವುದನ್ನು ಸರ್ಕಾರ ಪರಿಗಣಿಸಿದ್ದು, ಪತ್ತೆ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನರ್ಹರು ಕಾರ್ಡ್‌ ಹಿಂದಿರುಗಿಸಿ:

ವಂಚಿಸಿ ಬಿಪಿಎಲ್‌ ಕಾರ್ಡ್‌ ಪಡೆದುಕೊಂಡಿರುವ ಸದೃಢರು ಸೆ. 30ರೊಳಗಾಗಿ ಆಯಾ ತಾಲೂಕು ಕಚೇರಿಗೆ ಕಾರ್ಡ್‌ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ಅನರ್ಹರನ್ನು ಸರ್ಕಾರವೇ ಪತ್ತೆ ಮಾಡಿ, ಕಾರ್ಡ್‌ ಅನ್ನು ಪಡೆದುಕೊಳ್ಳಲಿದೆ. ಅಲ್ಲದೇ ಪದಾರ್ಥ ಪಡೆದುಕೊಳ್ಳುತ್ತಿದ್ದ ದಿನದಿಂದ ಇದುವರೆಗೆ ಎಷ್ಟುಅಕ್ಕಿ ಪಡೆದಿದ್ದಾರೆ ಎಂಬುವುದನ್ನು ಲೆಕ್ಕ ಮಾಡಿ ಕೆಜಿಗೆ 35 ರು. ನಂತೆ ವಸೂಲಿ ಮಾಡುವುದರ ಜೊತೆಗೆ ಕರ್ನಾಟಕ ಪ್ರಿವೆನ್ಷನ್‌ ಆಫ್‌ ಅನ್‌ಆಥರೈಸ್ಡ್‌ ಪೊಸೆಷನ್‌ ಆಫ್‌ ರೇಷನ್‌ ಕಾಡ್ಸ್‌ ಆರ್ಡರ್‌-1977ರ ಪ್ರಕಾರ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.