7 ಲಕ್ಷದ ಈರುಳ್ಳಿ ಕಳ್ಳತನ: ಆನಿಯನ್‌ಗಾಗಿ ಆ್ಯಕ್ಸಿಡೆಂಟ್ ಹೈಡ್ರಾಮ..!
ಆ್ಯಕ್ಸಿಡೆಂಟ್ ಹೈಡ್ರಾಮ ಮಾಡಿ 7 ಲಕ್ಷ ರೂಪಾಯಿಗೂ ಹೆಚ್ಚಿನ ಈರುಳ್ಳಿ ಮಾರಾಟ ಮಾಡಿದ ಲಾರಿ ಚಾಲಕ ಸಿಕ್ಕಿಬಿದ್ದಿದ್ದಾನೆ. ಚೆನ್ನೈಗೆ ಕಳುಹಿಸುತ್ತಿದ್ದ ಕ್ಯಾಂಟರ್ ಚಾಲಕ ಮತ್ತು ಕ್ಯಾಂಟರ್ ಮಾಲೀಕ ಸೇರಿಕೊಂಡು 81 ಚೀಲ ಈರುಳ್ಳಿಯನ್ನು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ.
ತುಮಕೂರು(ಡಿ.08): ಈರುಳ್ಳಿ ಬೆಲೆ ಗಗನಕ್ಕೇರುತಿದ್ದಂತೆ ಈರುಳ್ಳಿ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈರುಳ್ಳಿ ಸಾಗಿಸುತಿದ್ದ ಕ್ಯಾಂಟರ್ ಮಾಲೀಕ, ಚಾಲಕ ಸೇರಿ ಈರುಳ್ಳಿ ತುಂಬಿದ ಚೀಲವನ್ನ ಕದ್ದು ಸಿಕ್ಕಿಬಿದ್ದಿದ್ದಾರೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉಚ್ಚವನಹಳ್ಳಿಯಿಂದ ಆನಂದಕುಮಾರ್ ಎನ್ನುವವರು ಸುಮಾರು 183 ಚೀಲ ಈರುಳ್ಳಿಯನ್ನು ಲೋಡ್ ಮಾಡಿ ಚೆನ್ನೈಗೆ ಕಳುಹಿಸುತ್ತಾರೆ. ದಾರಿ ಮಧ್ಯೆ ಹಿರಿಯೂರು ತಾಲೂಕಿನ ಗೊಲ್ಲಡಕು ಬಳಿ ಕ್ಯಾಂಟರ್ ಚಾಲಕ ಮತ್ತು ಕ್ಯಾಂಟರ್ ಮಾಲೀಕ ಸೇರಿಕೊಂಡು 81 ಚೀಲ ಈರುಳ್ಳಿಯನ್ನು ಬೇರೊಬ್ಬರಿಗೆ ಮಾರುತ್ತಾರೆ.
ಅಪಘಾತದ ನಾಟಕ:
ಬಳಿಕ ಅಲ್ಲಿಂದ ಹೊರಟು ಶಿರಾ ತಾಲೂಕಿನ ತಾವರೆಕರೆ ಬಳಿಕ ರಾ.ಹೆ.48 ರ ಯರಗುಂಟೇಶ್ವರ ನಗರದ ಬಳಿ ಕ್ಯಾಂಟರ್ ಪಲ್ಟಿ ಬೀಳಿಸುವ ನಾಟಕ ಆಡ್ತಾರೆ. ಬಳಿಕ ಕ್ಯಾಂಟರ್ ಅಪಘಾತವಾಗಿದೆ. ಅಂಬ್ಯುಲೆನ್ಸ್ ಲ್ಲಿ ಆಸ್ಪತ್ರೆಗೆ ಹೋಗುತಿದ್ದೇವೆ ಎಂದು ಈರುಳ್ಳಿ ಮಾಲೀಕ ಆನಂದ್ ಕುಮಾರ್ ಗೆ ಫೋನ್ ಮಾಡುತ್ತಾರೆ. ಅಲ್ಲದೇ ಕ್ಯಾಂಟರ್ ಪಲ್ಟಿಯಾದಾಗ ಈರುಳ್ಳಿ ಚೀಲವನ್ನು ಜನರು ಕೊಂಡೊಯ್ಯುತಿದ್ದಾರೆ ಬೇಗ ಬನ್ನಿ ಎಂದು ಹೇಳುತ್ತಾರೆ.
200ರ ಗಡಿ ದಾಟಿದ ಈರುಳ್ಳಿ ದರ: ತಗೊಳೋದಾ ಸುಮ್ನೆ ನೋಡೋದಾ?
ಈರುಳ್ಳಿ ಮಾಲೀಕ ಆನಂದ್ ಕುಮಾರ್ ಸ್ಥಳಕ್ಕೆ ಬಂದು ನೋಡಿದಾಗ ಕ್ಯಾಂಟರನ್ನು ಉದ್ದೇಶಪೂರ್ವಕವಾಗಿ ಪಲ್ಟಿ ಮಾಡಿದ ರೀತಿ ಕಂಡುಬಂತು. ಹಾಗಾಗಿ ತಾವರೆಕೆರೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣ ಕಾರ್ಯ ಪ್ರವರ್ತರಾದ ಪೊಲೀಸರು ಕದ್ದ ಈರುಳ್ಳಿ ಚೀಲವನ್ನು ಪತ್ತೆ ಮಾಡಿದ್ದಾರೆ. ಜತೆಗೆ ಕ್ಯಾಂಟರ್ ಚಾಲಕ ಚೇತನ್, ಕ್ಲೀನರ್ ಸಂತೋಷ್, ಕದ್ದ ಮಾಲನ್ನು ಪಡೆದುಕೊಂಡಿದ್ದ ಬುಡೆನ್ ಸಾಬ್,ದಾದಾಫೀರ್ ಹಾಗೂ ಶೇಖ್ ಅಲಿಖಾನ್ ಎನ್ನುವವರನ್ನು ಬಂಧಿಸಿದ್ದಾರೆ. ಸುಮಾರು 7 ಲಕ್ಷ ಮೌಲ್ಯದ ಈರುಳ್ಳಿ ಕಳ್ಳತನ ಮಾಡಲಾಗಿದೆ.
ಗಗನಮುಖಿಯಾದ ಈರುಳ್ಳಿ ದರ: ಬೆಳಗಾವಿಯಲ್ಲಿ ಏರಿಕೆ, ಗದಗನಲ್ಲಿ ಇಳಿಕೆ