ಗಗನಮುಖಿಯಾದ ಈರುಳ್ಳಿ ದರ: ಬೆಳಗಾವಿಯಲ್ಲಿ ಏರಿಕೆ, ಗದಗನಲ್ಲಿ ಇಳಿಕೆ
ಬೆಳಗಾವಿ ಎಪಿಎಂಸಿಗೆ ಬಾಗಲಕೋಟೆ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಗಳಿಂದ ಕೇವಲ 85 ಲಾರಿ ಲೋಡ್ ಈರುಳ್ಳಿ ಬಂದಿತ್ತು |ಗದಗ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಬಂದ ಈರುಳ್ಳಿ|200 ಟನ್‌ಗೂ ಅಧಿಕ ಈರುಳ್ಳಿ ಮಾರಾಟವಾಗಿದ್ದರಿಂದ ದರದಲ್ಲಿ ಅಲ್ಪ ಕಡಿಮೆ|
ಬೆಳಗಾವಿ/ಗದಗ: ಗಗನಮುಖಿಯಾಗಿರುವ ಈರುಳ್ಳಿ ಬೆಲೆ ಬೆಳಗಾವಿ ಮಾರುಕಟ್ಟೆಯಲ್ಲಿ ಶನಿವಾರ ಮತ್ತಷ್ಟು ಏರಿಕೆ ಕಂಡಿದ್ದು ಕ್ವಿಂಟಲ್‌ಗೆ 18500 ರು. ವರೆಗೂ ದಾಖಲಾಗಿದೆ. ಇದೇ ವೇಳೆ ಗದಗದಲ್ಲಿ ಮಾತ್ರ ಕೊಂಚ ಇಳಿಮುಖವಾಗಿದ್ದು ನಾಲ್ಕು ದಿನಗಳ ಹಿಂದೆ ಕ್ವಿಂಟಲ್‌ಗೆ 14000 ಕಂಡಿದ್ದ ಈರುಳ್ಳಿ ಇದೀಗ 12500 ಕ್ಕೆ ಮಾರಾಟವಾಗಿದೆ.
ಬೆಳಗಾವಿ ಎಪಿಎಂಸಿಯಲ್ಲಿ ಶನಿವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಕೇವಲ 85 ಲಾರಿ ಲೋಡ್ (6500 ಕ್ವಿಂಟಲ್) ಈರುಳ್ಳಿ ಬಂದಿತ್ತು. ಹರಾಜಿನಲ್ಲಿ ಲಭ್ಯವಿರುವ 6500 ಕ್ವಿಂಟಲ್ ಈರುಳ್ಳಿಯನ್ನು ಖರೀದಿಸಲು ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು ಸಾಯಂಕಾಲ 5 ಗಂಟೆಯ ಹೊತ್ತಿಗೆ ಪ್ರತಿ ಕ್ವಿಂಟಲ್ ಈರುಳ್ಳಿ 18500 ವರೆಗೆ ಮಾರಾಟವಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗದಗದಲ್ಲಿ ಕಳೆದ ಹದಿನೈದು ದಿನಗಳಿಂದ ಏರುಮುಖವಾಗಿದ್ದ ಈರುಳ್ಳಿ ಬೆಲೆಯಲ್ಲಿ ಕೊಂಚ ಇಳಿಮುಖ ಕಂಡಿದೆ. ಗದಗ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶನಿವಾರ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬಂದಿದ್ದರಿಂದ 12500 ರವರೆಗೆ ಮಾತ್ರ ಮಾರಾಟವಾಗಿದೆ. 200 ಟನ್‌ಗೂ ಅಧಿಕ ಈರುಳ್ಳಿ ಮಾರಾಟಕ್ಕೆ ಬಂದ ಹಿನ್ನೆಲೆಯಲ್ಲಿ ದರದಲ್ಲಿ ಅಲ್ಪ ಕಡಿಮೆಯಾಗಿದೆ ಎನ್ನುವುದು ಅಲ್ಲಿದ್ದ ಹಲವರ ಅಭಿಪ್ರಾಯವಾಗಿದೆ.