Mysuru : ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಯುತ ಬೆಲೆ
ತಾಲೂಕಿನ ಮುದ್ದಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು ಸ್ವಾಧೀನಪಡಿಸಿಕೊಳ್ಳಲಿರುವ ಜಮೀನುಗಳಿಗೆ ನ್ಯಾಯಯುತ ಬೆಲೆಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಿ. ಹರ್ಷವರ್ಧನ್ ಭರವಸೆ ನೀಡಿದರು.
ನಂಜನಗೂಡು : ತಾಲೂಕಿನ ಮುದ್ದಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲು ಸ್ವಾಧೀನಪಡಿಸಿಕೊಳ್ಳಲಿರುವ ಜಮೀನುಗಳಿಗೆ ನ್ಯಾಯಯುತ ಬೆಲೆಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಿ. ಹರ್ಷವರ್ಧನ್ ಭರವಸೆ ನೀಡಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಕೆಎಐಡಿಬಿಯಿಂದ ಮುದ್ದಹಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಬೆಲೆ ನಿಗದಿ ಪಡಿಸಲು ಕರೆಯಲಾಗಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನ ಮುದ್ದಹಳ್ಳಿ, ಎಲಚಗೆರೆ ಹಾಗೂ ಸಿಂಧುವಳ್ಳಿಪುರ ಗ್ರಾಮಕ್ಕೆ ಸೇರಿದ 448 ಎಕರೆ ಭೂಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಉದ್ದೇಶಿತ ಕೈಗಾರಿಕಾ ಪ್ರದೇಶದಲ್ಲಿ ಭವಿಷ್ಯದಲ್ಲಿ ಕೈಗಾರಿಕೆಗಳು ಸ್ಥಾಪನೆ ಆದಲ್ಲಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗವಕಾಶಗಳು ಲಭ್ಯವಾಗಲಿವೆ. ವಿಶೇಷವಾಗಿ ಸಮಿ ಕಂಡಕ್ಟರ್ ಉದ್ಯಮಗಳು ಸ್ಥಾಪನೆ ಆಗುವ ಅವಕಾಶವಿದ್ದು, ಇದರಿಂದ ಸ್ಥಳೀಯ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಈ ಹಿಂದೆ ಕಂದಾಯ ಸಚಿವರಾಗಿದ್ದ ವಿ. ಶ್ರೀನಿವಾಸಪ್ರಸಾದ್ ಕೈಗಾರಿಕೆಗಳಿಗೆ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ವೇಳೆ ದರ ನಿಗದಿಗೆ ಸಂಬಂಧಿಸಿದಂತೆ ರೈತರ ಬೇಡಿಕೆಗೆ ಓಗೊಟ್ಟು ನಿಗದಿತ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಖರೀದಿಸುವ ನಿಯಮಾವಳಿ ರೂಪಿಸಿದರು. ಇದರಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತ ಬೆಲೆ ದೊರಕುವ ಜತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ಕಾಯಂ ಉದ್ಯೋಗ ದೊರಕಲಿದೆ ಎಂದು ತಿಳಿಸಿದರು.
ಇನ್ನು ರೈತರ ಒಪ್ಪಿಗೆ ಪಡೆದುಕೊಂಡೇ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಿದ್ದು, ಯಾವುದೇ ಮಧ್ಯವರ್ತಿಗಳು ಹಾಗೂ ಬಂಡವಾಳಶಾಯಿಗಳು ರೈತರನ್ನು ಶೋಷಿಸದಂತೆ ನೋಡಿಕೊಳ್ಳಲಾಗುವುದು. ಜತೆಗೆ ಕೆಎಐಡಿಬಿ ಅಧಿಕಾರಿಗಳು ವಿವಿಧ ರೀತಿಯ ದರವನ್ನು ನಿಗದಿಪಡಿಸಿದ್ದಾರೆ. ಆದರೆ, ಎಲ್ಲ ರೈತರಿಗೂ ಒಂದೇ ದರ ಲಭ್ಯವಾಗಬೇಕು ಎಂಬ ಆಶಯದೊಂದಿಗೆ ಪ್ರತಿ ಎಕರೆಗೆ ಕನಿಷ್ಠ 40 ಲಕ್ಷ ರು. ನಿಗದಿಪಡಿಸುವಂತೆ ಸೂಚಿಸಿದೆ. ಇದರೊಂದಿಗೆ ಇಂದಿನ ಸಭೆಯಲ್ಲಿ ರೈತರು ಪ್ರಸ್ತಾಪಿಸಿರುವ ದರವನ್ನು ಕೊಡಿಸಿಕೊಡಲು ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಜತೆಗೆ ಇಂದಿನ ಸಭೆಯಲ್ಲಿ ರೈತರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಕ್ರೂಢೀಕರಿಸಿ ಮುಂಬರುವ ದಿನಗಳಲ್ಲಿ ಇನ್ನೊಂದು ಸಭೆ ನಡೆಸಿ ಸ್ವಾಧೀನಪಡಿಸಿಕೊಳ್ಳಲಾಗುವ ಭೂಮಿಗೆ ನ್ಯಾಯಯುತ ದರ ನಿಗದಿಪಡಿಸಲಾಗುವುದು ಎಂದು ಹೇಳಿದರು.
ಭೂಸ್ವಾಧೀನ ವಿಶೇಷ ಜಿಲ್ಲಾಧಿಕಾರಿ ದಯಾನಂದ ಭಂಡಾರಿ ಮಾತನಾಡಿ, ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಅನ್ವಯ ಜಮೀನುಗಳಿಗೆ ದರ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ರೈತರು ಕೆಐಎಡಿಬಿ ಭೂಸ್ವಾಧೀನಕ್ಕೆ ಒಳಪಡಿಸಲು ಮುಂದಾಗಿರುವ ಜಮೀನು ಕೃಷಿ ಯೋಗ್ಯ ಭೂಮಿಯಾಗಿದ್ದು, ಈ ಭೂಮಿಯನ್ನೇ ನಂಬಿ ನೂರಾರು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಇದೀಗ ಕೈಗಾರಿಕಾ ಪ್ರದೇಶ ಸ್ಥಾಪನೆ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ಕಸಿಯುತ್ತಿರುವುದು ಆತಂಕ ತಂದಿದೆ. ಹೀಗಾಗಿ ಶಾಸಕರು ಮಧ್ಯಪ್ರವೇಶಿಸಿ ರೈತರಿಂದ ಸ್ವಾಧೀನಕ್ಕೆ ಒಳಪಡುವ ಪ್ರತಿ ಎಕರೆ ಭೂಮಿಗೆ 1.5 ಕೋಟಿ ರು. ದರವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಿ. ಹರ್ಷವರ್ಧನ್, ರೈತರ ಒಪ್ಪಿಗೆ ಪಡೆದುಕೊಂಡೇ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಕರ್ನಾಟಕ ರೈತಸಂಘದ ರಾಜ್ಯ ಉಪಾಧ್ಯಕ್ಷ ಕಂದೇಗಾಲ ಶ್ರೀನಿವಾಸ್, ಕಾರ್ಯಬಸವಣ್ಣ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಉಗ್ರನರಸಿಂಹೇಗೌಡ, ಬಸವಟ್ಟಿಗೆ ನಾಗೇಂದ್ರ, ಶಿರಮಳ್ಳಿ ಸಿದ್ದಪ್ಪ, ಪ್ರಕಾಶ್ ಇದ್ದರು.
-- ರೈತ ಸಂಘಟನೆಗಳಿಂದ ವಿರೋಧ--
ಇನ್ನು ಮುದ್ದಹಳ್ಳಿಯಲ್ಲಿ ರೈತರ ವಿರೋಧದ ನಡುವೆಯೂ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ. ಅಭಿವೃದ್ಧಿಯ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಕೆಎಐಡಿಬಿ ಮುಂದಾಗಿದೆ ಎಂದು ಆರೋಪಿಸಿ ಅಂಬೇಡ್ಕರ್ ಭವನದ ಮುಂಭಾಗ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.
ಈಗಾಗಲೇ ಕಡಕೊಳ, ತಾಂಡ್ಯ, ತಾಂಡವಪುರ, ಅಡಕನಹಳ್ಳಿ, ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ನೂರಾರು ಎಕರೆ ಕೈಗಾರಿಕಾ ಪ್ರದೇಶದಲ್ಲಿ ಬೆರಳೆಣಿಕೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದಂತೆ ಕೈಗಾರಿಕಾ ಪ್ರದೇಶವೇ ಪಾಳುಬಿದ್ದಿದೆ. ಹೀಗಾಗಿ ಹೊಸದೊಂದು ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ಅಧಿಕಾರಿಗಳಿಗೆ ಲಾಭವಿದೆಯೇ ಹೊರತು ರೈತರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ಅನುಕೂಲವಿಲ್ಲ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿದರು.