ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲು ಕಾಂಗ್ರೆಸ್‌ ಘಟಬಂಧನ್‌ ಗುಂಪು ಆಹ್ವಾನಿಸುತ್ತಿದೆ ಎಂಬುವುದಕ್ಕಿಂತ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸುತ್ತಿದ್ದಾರೆ.

 ಕೋಲಾರ (ನ.13): ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲು ಕಾಂಗ್ರೆಸ್‌ ಘಟಬಂಧನ್‌ ಗುಂಪು ಆಹ್ವಾನಿಸುತ್ತಿದೆ ಎಂಬುವುದಕ್ಕಿಂತ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸುತ್ತಿದ್ದಾರೆ.

ಆದರೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿ (Congress) ಭಿನ್ನಮತ, ಗುಂಪುಗಾರಿಕೆ ತಾಂಡವವಾಡುತ್ತಿದೆ. ವಿಧಾನಸಭಾ ಚುನಾವಣೆ (Election) ಸಮೀಪಿಸುತ್ತಿದ್ದರೂ ಗುಂಪುಗಾರಿಕೆ ತಡೆಗಟ್ಟಲು ಕೆಪಿಸಿಸಿ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನವು ಕಳೆದ ಒಂದು ವರ್ಷದಿಂದ ತೆರವು ಆಗಿರುವುದನ್ನು ಭರ್ತಿ ಮಾಡಲು ಕೆಪಿಸಿಸಿಗೆ ಸಾಧ್ಯವಾಗಿಲ್ಲ.

ಒಂದು ಪಕ್ಷ, ಮೂರು ಬಣ

ಮಾಜಿ ಸಂಸದ, ಎಐಸಿಸಿ ಸಂಚಾಲನ ಸಮಿತಿ ಸದಸ್ಯ ಕೆ.ಎಚ್‌.ಮುನಿಯಪ್ಪ ಮತ್ತು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ನೇತೃತ್ವದ ಎರಡು ಬಣಗಳು ಜಿಲ್ಲೆಯಲ್ಲಿ ಶೀತಲ ಸಮರದಲ್ಲಿ ನಿರತವಾಗಿವೆ. ಇವೆರಡು ಬಣದಿಂದ ಅಂತರ ಕಾಯ್ದುಕೊಂಡು ತಟಸ್ಥವಾಗಿರುವವರದೇ ಮತ್ತೊಂದು ಬಣ ಸೃಷ್ಟಿಯಾಗಿದ್ದು, ಜಿಲ್ಲಾ ಕಾಂಗ್ರೆಸ್‌ ಮೂರು ಬಾಗಿಲ ಮನೆಯಂತಾಗಿದೆ.

ಕೆ.ಎಚ್‌.ಮುನಿಯಪ್ಪ ಮತ್ತು ಕೆ.ಆರ್‌.ರಮೇಶ್‌ ಕುಮಾರ್‌ ಇವರನ್ನು ಒಂದು ಮಾಡಲು ರಾಜ್ಯಕ್ಕೆ ಜೋಡೋ ಯಾತ್ರೆ ಸಮಯದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದೆ ನಿಲ್ಲಿಸಿ ತೇಪೆ ಹಾಕುವ ಕೆಲಸ ಮಾಡಿದರಾದರೂ ಇಬ್ಬರೂ ಒಂದಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದಕ್ಕೆ ಇಂಬುಕೊಟ್ಟಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಕೆ.ಎಚ್‌.ಮುನಿಯಪ್ಪ ಅವರು ಸಿದ್ದರಾಮಯ್ಯ ಕೋಲಾರದಲ್ಲಿ ಸ್ವರ್ಧಿಸಲಿದ್ದಾರೆ ಎಂಬ ವಿಷಯ ನನಗೆ ಗೊತ್ತಿಲ್ಲ, ಅವರು ಸ್ಪರ್ಧಿಸಿದರೆ ಸ್ವಾಗತಿಸುತ್ತೇನೆ ಎಂದಿರುವುದು ಬಣ ರಾಜಕೀಯಕ್ಕೆ ಕನ್ನಡಿ ಹಿಡಿದಂತಿದೆ.

ತಿರುಗುಬಾಣವಾದ ಘಟಬಂಧನ್‌

ಈ ಇಬ್ಬರು ಪ್ರಮುಖ ನಾಯಕರ ಕಿತ್ತಾಟದ ನಡುವೆ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲುವು ಸಾಧ್ಯವೇ ಎಂಬುವುದು ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿರು ಪ್ರಶ್ನೆ.

ಕೆ.ಹೆಚ್‌.ಮುನಿಯಪ್ಪ ಮೇಲಿನ ಕೋಪಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಘಟಬಂಧನ್‌ ಬಣವು ಕಾಂಗ್ರೆಸ್‌ ಪಕ್ಷದ ಪ್ರತಿಷ್ಠೆ, ತತ್ವ, ನೀತಿ ಸಿದ್ದಾಂತಗಳನ್ನು ಗಾಳಿಗೆ ತೊರಿ ವೈಯುಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿ ತೆಗೆದುಕೊಂಡ ನಿರ್ಧಾರವು ಇಂದು ಭಾರಿ ಪರಿಣಾಮ ಬೀರಿದೆ. ಅವರು ಸಾಕಿದ ಗಿಣಿಯೇ ಮುಂದೆ ಹದ್ದಾಗಿ ಕುಕ್ಕಲಿದೆ ಎಂಬ ಪರಿಕಲ್ಪನೆಯೂ ಇಲ್ಲವಾಗಿದ್ದಕ್ಕೆ ಇಂದು ಪಶ್ಚಾತ್ತಾಪಪಡುವಂತಾಗಿದೆ.

ಆಕಾಂಕ್ಷಿಗಳಿಗೆ ಬಿಸಿ ತುಪ್ಪವಾದ ಸಿದ್ದು

ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸದೆ ಹೋದರೆ ಸಾಕು ಎಂಬಂತೆ ಕೆಲವು ಆಕಾಂಕ್ಷಿಗಳು ಚಾತಕದ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಅಕಾಂಕ್ಷಿಗಳಾದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಕೊತ್ತೂರು ಮಂಜುನಾಥ್‌, ವಿ.ಆರ್‌.ಸುದರ್ಶನ್‌, ಕೆ.ಶ್ರೀನಿವಾಸಗೌಡ ಮುಂತಾದವರು ಇದ್ದಾರೆ. ಆದರೆ ಇದರಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಮತ್ತು ಎಂ.ಎಲ್‌.ಸಿ. ನಸೀರ್‌ ಅಹಮದ್‌ ಬ್ಯಾಲಹಳ್ಳಿ ಗೋವಿಂದಗೌಡರ ಪರ ಒತ್ತಡ ಹೇರಬಹುದು. ಎಂ.ಎಲ್‌.ಸಿ. ಅನಿಲ್‌ ಕುಮಾರ್‌ ಅವರು ಕೊತ್ತೂರು ಮಂಜುನಾಥ್‌ ಪರ ವಹಿಸುವ ಸಾಧ್ಯತೆ ಇದೆ.

ಈಗ ಕೆ.ಎಚ್‌.ಮುನಿಯಪ್ಪ ಅವರ ಅಂಗಳಕ್ಕೆ ಘಟಬಂಧನ್‌ ಬಣ ಸಿದ್ದರಾಮಯ್ಯ ಎಂಬ ಚೆಂಡು ಬಂದು ಬಿದ್ದಿದೆ. ಮುನಿಯಪ್ಪ ಬಣ ಏನು ಮಾಡಹುದು ಎಂಬುದು ಇನ್ನೂ ನಿಗೂಢವಾಗಿದೆ. ಇವೆರಡು ಬಣಗಳನ್ನು ವಿಶ್ವಾಸಕ್ಕೆ ಪಡೆದರೆ ಮಾತ್ರ ಸಿದ್ದರಾಮಯ್ಯ ಗೆಲುವು ಸುಲಭಸಾಧ್ಯ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಬಾಕ್ಸ್‌

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಶಾಸಕರಿಗೆಲ್ಲಾ ಮುಂದಿನ ಚುನಾವಣೆ ಈ ಹಿಂದಿನಷ್ಟುಸುಲಭವಲ್ಲ ಎಂಬುವುದು ಮನದಟ್ಟಾಗಿದೆ. ಕೆಲವು ಶಾಸಕರಿಗೆ ಹಲವಾರು ಅಡತಡೆಗಳು. ವಿವಾದವನ್ನು ಎದುರಿಸಬೇಕಾದ ಸಮಸ್ಯೆಗಳು ಎದುರಾಗಿವೆ. ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಮಾಲೂರು ಕೆ.ವೈ.ನಂಜೇಗೌಡ, ಶ್ರೀನಿವಾಸಪುರ ಕೆ.ಆರ್‌.ರಮೇಶ್‌ ಕುಮಾರ್‌ ಅವರುಗಳಿಗೆ ಮುಂದಿನ ಚುನಾವಣೆ ಎದುರಿಸುವುದು ಸುಲಭವಾಗಿಲ್ಲ.

12ಕೆಎಲ್‌ಆರ್‌-6

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

12ಕೆಎಲ್‌ಆರ್‌-6-1

ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌.

12ಕೆಎಲ್‌ಆರ್‌-6-2

ಮಾಜಿ ಕೇಂದ್ರ ಸಚಿವ ಕೆ.ಹೆಚ್‌.ಮುನಿಯಪ್ಪ.