Asianet Suvarna News Asianet Suvarna News

ಧೈರ್ಯವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ: ಸುರೇಶ್‌

ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಭಯಪಡದೆ ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ಎಸ್‌. ಸುರೇಶ್‌ಕುಮಾರ್‌ ಹೇಳಿದರು.

 Face SSLC with courage  Suresh snr
Author
First Published Mar 21, 2023, 5:54 AM IST

  ತುಮಕೂರು :  ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಭಯಪಡದೆ ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ಎಸ್‌. ಸುರೇಶ್‌ಕುಮಾರ್‌ ಹೇಳಿದರು.

ಮಾ.31ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಗರದ ಸಿದ್ಧಗಂಗಾ ಮಠದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಸಿದ್ಧಗಂಗಾ ಮಠ ಸ್ಫೂರ್ತಿಯ ಕೇಂದ್ರ. ಇಲ್ಲಿರುವ ಮಕ್ಕಳಿಗೆ ನಡೆದಾಡುವ ದೇವರ ಆಶೀರ್ವಾದ ಇದೆ. ಯಾವುದೇ ಕಾರಣಕ್ಕೂ ಪರೀಕ್ಷೆ ಬಗ್ಗೆ ಭಯ ಪಡಬಾರದು. ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು 10 ದಿನ ಬಾಕಿ ಇದೆ. ಈ 10 ದಿನ ಮಕ್ಕಳಿಗೆ ಅತ್ಯಮೂಲ್ಯ. ಈ ಸಮಯವನ್ನು ವ್ಯರ್ಥ ಮಾಡದೆ ಕಾಳಜಿಯಿಂದ ಚೆನ್ನಾಗಿ ಓದಬೇಕು. ಪರೀಕ್ಷೆ ಬಗ್ಗೆ ಭಯಪಟ್ಟರೆ ಓದಿರುವುದೂ ಸಹ ಮರೆತು ಹೋಗುತ್ತದೆ. ಸಹಜವಾಗಿ ವಿದ್ಯಾರ್ಥಿಗಳಲ್ಲಿ ನಾವು ಓದಿರುವುದು ಪರೀಕ್ಷೆಗೆ ಬರುತ್ತದೋ ಇಲ್ಲವೋ, ಓದಿರುವುದೆಲ್ಲ ಮರೆತು ಹೋಗುತ್ತದೆ ಎಂಬ ಭಯ ಇರುತ್ತದೆ. ನಾನು ಈಗಾಗಲೇ ಸುಮಾರು 36 ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಮಾತನಾಡಿದ್ದೇನೆ. ಎಲ್ಲ ಶಾಲೆಗಳ ಮಕ್ಕಳಲ್ಲೂ ಇದೇ ರೀತಿಯ ಭಾವನೆ ನೋಡಿದ್ದೇನೆ. ಹಾಗಾಗಿ ಇಂದಿನಿಂದ ನಾವು ಭಯಪಡುವುದಿಲ್ಲ ಎಂದು ಶ್ರೀಗಳಿಗೆ ಮಾತುಕೊಡಿ ಎಂದರು.

ಪರೀಕ್ಷೆಗೆ ಹೋಗುವ ಮುನ್ನ ಪ್ರವೇಶ ಪತ್ರ ಮರೆಯದೆ ತೆಗೆದುಕೊಂಡು ಹೋಗಬೇಕು. ಮೊದಲು ಪ್ರಶ್ನೆ ಪತ್ರಿಕೆಯನ್ನು 15 ನಿಮಿಷಗಳ ಓದಿ, ನಂತರ ಉತ್ತರ ಬರೆಯಲು ಪ್ರಾರಂಭಿಸಬೇಕು. ಪರೀಕ್ಷೆ ಬರೆಯುವಾಗ ಅತ್ತ ಇತ್ತ ನೋಡದೆ ಏಕಾಗ್ರತೆಯಿಂದ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಾದ ಮೇಲೆ ನಾನು ಮಂಜುನಾಥರೆಡ್ಡಿ ಎಂಬ ಒಬ್ಬ ಹುಡುಗನ ಮನೆಗೆ ಹೋಗಿದ್ದೆ. ಆ ಹುಡುಗನಿಗೆ ಪರೀಕ್ಷೆಯಲ್ಲಿ 625ಕ್ಕೆ 618 ಅಂಕ ಬಂದಿತ್ತು. ಆದರೆ ಆ ಹುಡುಗ ನಾನು ಓದಿರುವುದಕ್ಕೆ 621ಕ್ಕಿಂತ ಕಡಿಮೆ ಅಂಕ ಬರುವಂತಿಲ್ಲ ಎಂದು ಬೇಸರಗೊಂಡು ಮರು ಮೌಲ್ಯಮಾಪನಕ್ಕೆ ಹಾಕಿದ, ಆಗ 625ಕ್ಕೆ 621 ಅಂಕ ಬಂತು. ಬೋನ್‌ ಕ್ಯಾನ್ಸರ್‌ ಬಂದಿದ್ದರೂ ಕೂಡ ಅದನ್ನು ಲೆಕ್ಕಿಸದೆ ಎದುರಿಸಿ ಪರೀಕ್ಷೆ ಬರೆದು 625ಕ್ಕೆ 621 ಅಂಕ ಪಡೆದ ಮಂಜುನಾಥ ರೆಡ್ಡಿ ನಮ್ಮೆಲ್ಲರಿಗೂ ಮಾದರಿಯಾಗಬೇಕು. ಪರೀಕ್ಷೆ ಮುಗಿಯುವವರೆಗೂ ಆರೋಗ್ಯ ಬಹಳ ಮುಖ್ಯ. ಹಾಗಾಗಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ, ಸುರೇಶ್‌ಕುಮಾರ್‌ ಅವರು ಮಕ್ಕಳಿಗೆ ಪ್ರೋತ್ಸಾಹ ನೀಡುವ ವಿಶೇಷ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿ ಭಯ ಪಡದೆ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದ್ದಾರೆ ಎಂದರು. ಕೋವಿಡ್‌ ಸಂದರ್ಭದಲ್ಲಿ ಪರೀಕ್ಷೆ ಮಾಡಬೇಕಾ, ಬೇಡವಾ ಎಂಬ ಬಗ್ಗೆ ಗೊಂದಲ ಇದ್ದ ವೇಳೆ ಮಠಕ್ಕೆ ಸುರೇಶ್‌ಕುಮಾರ್‌ ಅವರು ಭೇಟಿ ನೀಡಿ ಮಕ್ಕಳೊಂದಿಗೆ ಪರೀಕ್ಷೆ ಮಾಡುವ ಕುರಿತು ಚರ್ಚೆ ನಡೆಸಿದರು. ಮಕ್ಕಳ ಅಭಿಪ್ರಾಯ ಸಂಗ್ರಹಿಸಿದರು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಶ್ರೀಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಾ. 31ರಿಂದ ಪ್ರಾರಂಭವಾಗುವ ಪರೀಕ್ಷೆ ಸಹ 2ನೇ ಪೂರ್ವ ಸಿದ್ಧತಾ ಪರೀಕ್ಷೆಯ ಮಾದರಿಯಲ್ಲೇ ಇರುತ್ತದೆ. ಯಾರೂ ಸಹ ಭಯಪಡುವ ಅಗತ್ಯವಿಲ್ಲ. ಸ್ವಲ್ಪ ಓದಿದರೆ 40 ರಿಂದ 45 ಅಂಕ ಪಡೆಯಬಹುದು. ಹೆಚ್ಚು ಅಂಕ ಬರಬೇಕು ಎಂದರೆ ಚೆನ್ನಾಗಿ ಓದಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಓದುವತ್ತ ಗಮನ ಹರಿಸಬೇಕು. ಪರೀಕ್ಷೆ ಬಗ್ಗೆ ಭಯ ಎನ್ನುವುದನ್ನು ಬಿಟ್ಟು ಬಿಡಬೇಕು. ಈ 10 ದಿವಸವನ್ನು ಬಹಳ ಚೆನ್ನಾಗಿ ಕಾಳಜಿಯಿಂದ ಉಪಯೋಗಿಸಿಕೊಳ್ಳಬೇಕು. ಜತೆಗೆ ಪರೀಕ್ಷಾ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕು.

ಎಸ್‌. ಸುರೇಶ್‌ಕುಮಾರ್‌ ಮಾಜಿ ಶಿಕ್ಷಣ ಸಚಿವ

Follow Us:
Download App:
  • android
  • ios