ಗುತ್ತಿಗೆದಾರರಿಂದ ಹಣ ಹೊಡೆಯುವ ಹುನ್ನಾರ: ಮಾಜಿ ಸಚಿವ ಮುರುಗೇಶ ನಿರಾಣಿ

ಕೃಷ್ಣಾ ಮೇಲ್ದಂಡೆ ಕಾಮಗಾರಿ ಸ್ಥಗಿತಗೊಳಿಸಿದ್ದೇಕೆ?, ಬೀಳಗಿ ಶಾಸಕರ ವಿರುದ್ಧ ಮಾಜಿ ಸಚಿವ ಮುರುಗೇಶ ನಿರಾಣಿ ಗಂಭೀರ ಆರೋಪ

Extorting Money from Contractors Says Former Minister Murugesh Nirani grg

ಬಾಗಲಕೋಟೆ(ಜು.23):  ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ಬೀಳಗಿ ಮತಕ್ಷೇತ್ರದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳು ಸ್ಥಗಿತಗೊಂಡಿವೆ. ಕಾಮಗಾರಿಗಳ ಮುಂದುವರಿಕೆಗೆ ಗುತ್ತಿಗೆದಾರರಿಂದ ನೇರವಾಗಿ ಹಣ ಪಡೆಯುವ ಹುನ್ನಾರ ನಡೆದಿದೆ. ಸ್ಥಳೀಯ ಶಾಸಕರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ, ಬೀಳಗಿ ಮತಕ್ಷೇತ್ರದ ಮಾಜಿ ಶಾಸಕ ಮುರಗೇಶ ನಿರಾಣಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರದ ಅವಧಿಯಲ್ಲಿ ನಡೆದಿರುವ ಪ್ರಕ್ರಿಯೆಗಳಲ್ಲಿ ಪ್ರಮುಖವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಅದರಲ್ಲೂ ರಸ್ತೆ, ಸೇತುವೆ ಸೇರಿದಂತೆ ಇತರೆ ಕಾಮಗಾರಿಗಳನ್ನು ತಡೆ ಹಿಡಿಯುವ ಉದ್ದೇಶವಾದರು ಏನು ಎಂದು ಪ್ರಶ್ನಿಸಿದರು. ತಾವು ಪ್ರಾಮಾಣಿಕ ಶಾಸಕರೆಂದು ಬಿಂಬಿಸಿಕೊಳ್ಳುವ ಬೀಳಗಿ ಶಾಸಕರು ಬೇರೆ ಬೇರೆ ಫೋನ್‌ಗಳ ಮುಖಾಂತರ ಗುತ್ತಿಗೆದಾರರಿಂದ ಹಣ ಪಡೆಯುವ ಯತ್ನ ನಡೆಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಬೀದಿಗಿಳಿದ ಬಿಜೆಪಿ

ನನ್ನ ದೂರದೃಷ್ಟಿಯ ಭಾಗವಾಗಿದ್ದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ 1.27 ಲಕ್ಷ ಎಕರೆ ನೀರಾವರಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ವಿಸ್ತೃತ ಕಾಮಗಾರಿಗಳು ಸಹ ಸ್ಥಗಿತಗೊಂಡಿವೆ. ಕೃಷ್ಣಾ ಮೇಲ್ದಂಡೆ ಅನುಷ್ಠಾನ ವಿಷಯದಲ್ಲಿ ಮಾತನಾಡುವ ಶಾಸಕರು, ಈ ಕಾಮಗಾರಿಗಳ ಕೆಲಸಗಳನ್ನು ಸ್ಥಗಿತಗೊಳಿಸಿದ್ದು ಏಕೆ ಎಂದು ಪ್ರಶ್ನಿಸಿದರಲ್ಲದೆ, ಇದು ನನ್ನ ಕೊನೆ ಚುನಾವಣೆ ಎನ್ನುತ್ತಲೇ ವರ್ಗಾವಣೆ ವಿಷಯದಲ್ಲಿ ಸಹ ಹಸ್ತಕ್ಷೇಪ ನಡೆಸಿದ್ದಾರೆ ಎಂದು ನಿರಾಣಿ ಆರೋಪಿಸಿದರು.

ಹಿಂದಿನ ಸರ್ಕಾರ ಸಂತ್ರಸ್ತರ ಪುನರ್ವಸತಿಗಾಗಿ ಯೋಜಿಸಿದ ಯೋಜನೆಗಳ ಹಣವನ್ನು ಪರ್ಯಾಯ ಕಾರ್ಯಕ್ಕೆ ಬಳಸಲಾಗುತ್ತಿದೆ. ಇದು ರೈತರಿಗೆ ಮಾಡಿದ ದ್ರೋಹವಾಗಿದೆ. ರೈತರ ಭೂಮಿಗೆ ನಿಗದಿಪಡಿಸಲಾದ ಹಣವನ್ನು ಪರ್ಯಾಯ ಕಾರ್ಯಕ್ಕೆ ಬಳಸುತ್ತಿರುವುದು ನಿಜಕ್ಕೂ ಈ ಭಾಗದ ಸಂತ್ರಸ್ತರಿಗೆ ನೋವು ತಂದಿದೆ ಎಂದರು.

ಎಡಗೈಯಿಂದ ಬಲಗೈಗೆ ಕೊಡುವುದಾಗಿದೆ:

ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಸಹ ಸಾಕಷ್ಟುಗೊಂದಲ ಸೃಷ್ಟಿಸಿದೆ. ಹಣವನ್ನು ಗ್ಯಾರಂಟಿಗೆ ಕ್ರೋಢೀಕರಿಸುವ ಭರದಲ್ಲಿ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹಾಕಿದೆ. ಮುದ್ರಾಂಕ ಶುಲ್ಕ, ಅಬಕಾರಿ ಶುಲ್ಕ, ವಿದ್ಯುತ್‌ ಬಿಲ್‌ ಏರಿಕೆ ಸೇರಿದಂತೆ ಇತರೆ ರೀತಿಯಲ್ಲಿ ತೆರಿಗೆ ಹಾಕಿ ಒಂದು ರೀತಿಯಲ್ಲಿ ಎಡಗೈಯಿಂದ ಕಸಿದುಕೊಂಡು ಬಲಗೈಗೆ ಕೊಡುತ್ತಿದೆ ಎಂದು ಹೇಳಿದರು.

ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮಾತೆತ್ತಿದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಇಲ್ಲಿನ ಕಾಂಗ್ರೆಸ್‌ ಶಾಸಕರು ಏನೂ ಮಾತನಾಡದೆ ಸುಮ್ಮನಿದ್ದಾರೆ. ಹತ್ತಾರು ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರು ಈ ಬಾರಿ ಮಂಡಿಸಿರುವ ಬಜೆಟ್‌ ಅತ್ಯಂತ ಕೆಟ್ಟಬಜೆಟ್‌ ಆಗಿದೆ. ಇಂತಹವರಿಂದ ಜಿಲ್ಲೆಯ ಅಭಿವೃದ್ಧಿ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

680 ಕೋಟಿ ತೆರಿಗೆ ಕಟ್ಟುವೆ:

ನನ್ನ ಸಮೂಹದ ಎಲ್ಲ ಕಾರ್ಖಾನೆಗಳಿಂದ ವಾರ್ಷಿಕವಾಗಿ .680 ಕೋಟಿಯಷ್ಟುಬೃಹತ್‌ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟುತ್ತಿದ್ದೇನೆ. ಉತ್ತರ ಕರ್ನಾಟಕದಲ್ಲಿಯೇ ಕನ್ನಡಿಗನೊಬ್ಬ ಕಟ್ಟುತ್ತಿರುವ ಅತಿ ಹೆಚ್ಚಿನ ತೆರಿಗೆ ಇದಾಗಿದೆ. ಇದು ನನ್ನ ಪಾರದರ್ಶಕ ವ್ಯವಸ್ಥೆಗೆ ಕನ್ನಡಿಯಾಗಿದೆ ಎಂದು ನಿರಾಣಿ ತಮ್ಮ ವ್ಯವಹಾರಿಕ ನಡೆಯನ್ನು ಸಮರ್ಥಿಸಿಕೊಂಡರು.

ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಸಪೋರ್ಟ್ ಇದೆ: ಸಚಿವ ಆರ್.ಬಿ.ತಿಮ್ಮಾಪುರ

ಲೋಕಸಭೆಗೆ ನಾ ನಿಲ್ಲಲಾರೆ

ಹಲವು ನಮ್ಮದೇ ತಪ್ಪುಗಳಿಂದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸೋತಿದ್ದೇವೆ. ಆಗಿರುವ ತಪ್ಪುಗಳನ್ನು ತಿದ್ದುಕೊಂಡು ಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ. ನಾನು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಬರುವ ವಿಧಾನಸಭೆ ಚುನಾವಣೆಗೆ ಬೀಳಗಿ ಮತಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವೆ. ಲೋಕಸಭೆ ಚುನಾವಣೆಗೆ ಯಾರೇ ಸ್ಪರ್ಧಿಸಿದರು ಸಹ ಅವರ ಪರವಾಗಿ ಒಗ್ಗಟ್ಟಾಗಿ ಶ್ರಮಿಸಲಿದ್ದೇವೆ ಎಂದು ಹೇಳಿದರು.

ಬೇರೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನನ್ನ ತಾಕತ್ತಿದೆಯೇ?

ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ಶಾಸಕ ಲಕ್ಷ್ಮಣ ಸವದಿ ಮಾಡಿರುವ ಆರೋಪಕ್ಕೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ನಿರಾಣಿ, ನನ್ನ ಎಲ್ಲ ಕಾರ್ಖಾನೆಗಳಲ್ಲಿಯೂ ಆಧುನಿಕ ತಂತ್ರಜ್ಞಾನ ಆಧಾರಿತ ತೂಕದ ಯಂತ್ರಗಳಿವೆ. ಆ ಪ್ರಾಮಾಣಿಕತೆ ಇರುವುದರಿಂದಲೇ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ. ನಾನು ಸಹ ರೈತ ಕುಟುಂಬದಿಂದ ಬಂದವನಾಗಿದ್ದರಿಂದ ನನ್ನ ಒಡೆತನದ ಸಕ್ಕರೆ ಕಾರ್ಖಾನೆಯಿಂದ ರೈತರ ಕಬ್ಬಿನ ಬಿಲ್ಲು ಸಹಿತ ನೀಡುವುದು ಸೇರಿದಂತೆ ಅನ್ಯಾಯವಾಗಲು ಬಿಡುವುದಿಲ್ಲ. ಇಂತಹ ತಾಕತ್ತು ಜಿಲ್ಲೆಯ ಇತರೆ ಕಾರ್ಖಾನೆಗಳ ಮಾಲೀಕರಿಗೆ ಇದೆಯೇ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios