ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಸರ್ಕಾರದ ತೀರ್ಮಾನ: ಸಚಿವ ಪರಮೇಶ್ವರ್
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರು (ಮೇ.19): ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಿಂದ ಜಿಲ್ಲೆಗೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ನಾನು ಮತ್ತು ಸಚಿವ ರಾಜಣ್ಣ ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಆದರೆ ಸಂಪುಟ ನಮ್ಮೊಬ್ಬರದ್ದೇ ಅಲ್ಲವಲ್ಲ.
ಈ ಬಗ್ಗೆ ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿ ಈ ಲಿಂಕ್ ಕೆನಾಲ್ ಮಾಡಬಹುದು ಎಂದು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದು ಸರ್ಕಾರದ ತೀರ್ಮಾನ, ನನ್ನ ತೀರ್ಮಾನವಲ್ಲ ಎಂದು ಸ್ಪಷ್ಟಪಡಿಸಿದರು. ತುಮಕೂರು ಜಿಲ್ಲೆಗೆ ಕುಡಿಯುವ ನೀರು ಮತ್ತು ಸೆಮಿಡ್ರೆಂಪ್ ನಾಲೆಯಲ್ಲಿ ಹೇಮಾವತಿ ಡ್ಯಾಮ್‌ನಿಂದ 25 ಟಿಎಂಸಿ ನೀರು ಕೊಟ್ಟಿದ್ದಾರೆ. ಆದರೆ ಹಾಸನ ಜಿಲ್ಲೆಯಿಂದ 18 ರಿಂದ 19ಟಿಎಂಸಿ ನೀರು ನಮ್ಮ ಜಿಲ್ಲೆಗೆ ಇದುವರೆಗೂ ಬಂದಿಲ್ಲ. ಸುಮಾರು 14 ರಿಂದ 15 ಟಿಎಂಸಿ ನೀರು ಬಂದಿರಬಹುದು ಅಷ್ಟೇ ಎಂದರು.
ಗುಬ್ಬಿ ತಾಲೂಕು, ತುರುವೇಕೆರೆ, ತಿಪಟೂರಿಗೆ ಕುಡಿಯುವ ನೀರಿಗೆ ಹಂಚಿಕೆಯಾಗಿದೆ. ಇಲ್ಲಿಂದ ಮುಂದೆ ಕುಣಿಗಲ್ ಕೆರೆಗೂ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಮಧ್ಯೆದಲ್ಲಿ ಹೆಬ್ಬೂರಿಗೂ ಏತ ನೀರಾವರಿ ಮೂಲಕ ನೀರು ಹರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು. ಗುಬ್ಬಿ ತಾಲೂಕಿನ ಡಿ. ರಾಂಪುರದ ಬಳಿ ಇರುವ 70ನೇ ಕಿ.ಮೀ.ನಿಂದ ನೇರವಾಗಿ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಬೇಕೆಂದು ಕಳೆದ ಐದಾರು ವರ್ಷಗಳಿಂದ ಪ್ರಸ್ತಾವನೆ ಇದೆ. ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಈ ಬಾರಿ ಸಂಪುಟದಲ್ಲಿ ವಿಷಯ ಮಂಡಿಸಿ, ಸರ್ಕಾರ ಎಕ್ಸ್‌ಪ್ರೆಸ್ ಕೆನಾಲ್ ಮಾಡಬಹುದು ಎಂದು ತೀರ್ಮಾನ ತೆಗೆದುಕೊಂಡಿದೆ ಎಂದರು.
ಪ್ರಜ್ವಲ್ ರೇವಣ್ಣ ಇದ್ದಲ್ಲಿಗೇ ಹೋಗಿ ಅರೆಸ್ಟ್ ಮಾಡ್ತೀವಿ: ಗೃಹ ಸಚಿವ ಪರಮೇಶ್ವರ್
ಈ ಮಧ್ಯೆ ರೈತರು ಈ ಎಕ್ಸ್‌ಪ್ರೆಸ್ ಕೆನಾಲ್ ಕೆಲಸ ಆಗಬಾರದು ಎಂದು ತಡೆದು ನಿಲ್ಲಿಸಿದ್ದಾರೆ. ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ, ನೀರಾವರಿ ಸಚಿವ, ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಕಳೆದ ಜಿಪಂ ಕೆಡಿಪಿ ಸಭೆಯಲ್ಲೂ ಸಹ ಈ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಸ್ಥಗಿತಗೊಳಿಸುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿತ್ತು. ಸಭೆಯು ತೀರ್ಮಾನ ಮಾಡಿದಂತೆ ಪ್ರೊಸಿಡಿಂಕ್ಸ್ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ ಎಂದರು.