ಕಲಬುರಗಿ(ಮಾ.05): ಕಾಡು ಹಂದಿ ಬೇಟೆಗೆ ಬಳಸಲಾಗುತ್ತಿದ್ದ ಸ್ಫೋಟಕದ ಉಂಡೆ ಸಿಡಿದು ’ಹೋರಿ’ ಬಾಯಿ ಸಂಪೂರ್ಣ ಹರಿದು ಹೋದ ಹೃದಯ ವಿದ್ರಾವಕ ಪ್ರಸಂಗ ಕಲಬುರಗಿ- ಕಮಲಾಪುರ ರಸ್ತೆಯಲ್ಲಿ ಬರುವ ಉಪಳಾಂವ್ ಗುಡ್ಡದ ತಿರುವಿನ ಬಳಿ ಬುಧವಾರ ಸಂಭವಿಸಿದೆ. 

ಕಪನೂರು ಗ್ರಾಮದ ರೈತ ಚಂದ್ರಕಾಂತ ಎಂಬುವವರಿಗೆ ಸೇರಿದ್ದ ’ಹೋರಿ’ ಈ ಘಟನೆಯಲ್ಲಿ ತೀವ್ರ ಗಾಯ ಅನುಭವಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ನ ಪಶು ವೈದ್ಯಕೀಯ ವಿವಿಗೆ ರವಾನಿಸಲಾಗಿದೆ. ಎಂದಿನಂತೆ ಈ ಹೋರಿ ಮೇಯಲು ಹೊರಟಿತ್ತು. ಕಸದ ತೊಟ್ಟಿಯ ಬಳಿ ಬಂದು ತಿನ್ನಲು ಬಾಯಿ ಹಾಕುತ್ತಲೇ ಸ್ಫೋಟಕದ ಉಂಡೆ ಅದರ ಬಾಯಿ ಸೇರಿದೆ. ಉಂಡೆ ಬಾಯಿಯೊಳಗೆ ಹೋಗುತ್ತಲೇ ಸಿಡಿದಿದೆ. ಆ ಸಿಡಿತದ ರಭಸಕ್ಕೆ ಹೋರಿಯ ಬಾಯಿ ಸಂಪೂರ್ಣ ಹರಿದ ಹೋಗಿ ರಕ್ತಸ್ರಾವವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುತ್ತಲಿನ ಜನ ಈ ಘಟನೆ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಗ್ರಾಮೀಣ ಠಾಣೆಯ ಸಿಪಿಐ ಸೋಮಲಿಂಗ ಕಿರದಳ್ಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಲ್ಲದೆ ಗಾಯಗೊಂಡು ರಕ್ತಸ್ರಾವದಿಂದ ನರಳುತ್ತಿದ್ದ ಹೋರಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ನ ಪಶುವೈದ್ಯಕೀಯ ವಿವಿಗೆ ಹೋರಿಯನ್ನು ರವಾನಿಸಲಾಗಿದೆ ಎಂದು ಸೋಮಲಿಂಗ ಕಿರದಳ್ಳಿ ತಿಳಿಸಿದ್ದಾರೆ. 

ಚಂದ್ರಕಾಂತ ಎಂಬುವವರಿಗೆ ಸೇರಿರುವ ಹೋರಿ ಬಾಯಿ ಸಂಪೂರ್ಣ ಸಿಡಿದಿದೆ. ನಾಲಿಗೆ ಹೊರಗೆ ಬಿದ್ದಿವೆಯಲ್ಲದೆ ರಕ್ತಸ್ರಾವವಾಗಿದೆ. ಹೀಗಾಗಿ ಜೀವನ್ಮರಣದ ಹೋರಾಟದಲ್ಲಿದೆ ಎಂದು ಘಟನೆಯನ್ನು ಕಂಡಿರುವ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಏನಿದು ಹಂದಿ ಬೇಟೆ ಸ್ಫೋಟಕ?

ಕಲಬುರಗಿ ಸೇರಿದಂತೆ ಸುತ್ತಲಿನ ಅನೇಕ ಕಡೆಗಳಲ್ಲಿ ಮುಳ್ಳು ಹಂದಿ, ಕಾಡು ಹಂದಿ ಉಪಟಳ ತಪ್ಪಿಸಲು ಇಂತಹ ಸ್ಫೋಟಕ ಬಳಸಲಾಗುತ್ತದೆ. ಸ್ಫೋಟಕದ ಪುಡಿಯನ್ನು ಜೋಳ, ಗೋಧಿ ಹಿಟ್ಟನ್ನು ಬಳಸಿಯೋ ಇತ್ಯಾದಿ ಮಾಂಸಹಾರವನ್ನು ಬಳಸಿ ಅದರಲ್ಲಿ ತುಂಬಿ ಉಂಡೆ ಗಾತ್ರದಲ್ಲಿ ಹಂದಿಗಳು ಸತ್ತಾಡುವ ಪ್ರದೇಶದಲ್ಲಿ ಎಸೆಯಲಾಗುತ್ತದೆ.

ಕಾಡು ಹಂದಿಗಳು ಇತ್ತ ಬಂದಾಗ ಆಹಾರದ ಆಶೆಗಾಗಿ ಈ ಉಂಡೆ ತಿನ್ನಲು ಮುಂದಾದರೆ ಹಂದಿ ಬಾಯಲ್ಲೇ ಸ್ಫೋಟಗೊಂಡು ಅವು ಸ್ಥಳದಲ್ಲೇ ಸಾವನ್ನಪ್ಪುತ್ತವೆ, ಇಲ್ಲವೇ ತೀವ್ರ ಗಾಯಗೊಳ್ಳುತ್ತವೆ. ಇದೇ ಸ್ಫೋಟಕ ಇಂದು ಹೋರಿ ನುಂಗಿದ್ದರಿಂದ ಅದು ತೀವ್ರ ರಕ್ತಸ್ರಾವಕ್ಕೆ ಗುರಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅತೀ ಭಯಂಕರ ಬೇಟೆ: 

ಸ್ಫೋಟಕ ಬಳಸಿ ಕಾಡು, ಮುಳ್ಳು ಹಂದಿ ಕೊಲ್ಲುವ ಅಥವಾ ಅದರ ಉಪಟಳದಿಂದ ಬಚಾವ್ ಆಗುವ ಈ ಪದ್ಧತಿ, ಅದಕ್ಕೆ ಬಳಸುವ ರಸಾಯಕಿ, ಸ್ಫೋಟಕಗಳೇ ಅಮಾನುಷ ಎಂಬಂತಾಗಿದೆ. ಏಕೆಂದರೆ ಹಂದಿಗಳ ಉಪಟಳ ತಪ್ಪಿಸಲು ಅವುಗಳನ್ನು ಈ ರೀತಿ ಅಮಾನುಷವಾಗಿ ಕೊಲ್ಲುವುದು ಅದೆಷ್ಟು ಸರಿ? ಎಂಬುದೇ ಉದ್ಭವವಾಗಿರುವ ಪ್ರಶ್ನೆ. ಹಂದಿ ಕೊಲ್ಲುವ ನೆಪದಲ್ಲಿ ಸ್ಥಳೀಯ ಗುಡ್ಡುಗಾಡು ಜನಾಂಗದವರು, ಪಾರ್ದಿ ಸಮುದಾಯವರು ಇಂತಹ ರಸಾಯನಿಕ ಉಂಡೆಗಳನ್ನು ಬೇಕಾಬಿಟ್ಟಿ ಬಿಸಾಕೋದರಿಂದ ಸಂಭವಿಸುವ ಅಪಾಯಗಳಿಗೆ ಯಾರು ಹೊಣೆ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. 

ಹಂದಿ ಬೇಟೆಗೆ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬಲೆ ಬಳಸೋದು, ಕೋಲು, ಬಡಿಗೆ ಬಳಸೋದು ಕಂಡಿದ್ದೇವೆ. ಇದೇ ಮೊದಲ ಬಾರಿಗೆ ನಗರ ಹಾಗೂ ಸುತ್ತಲಿನ ಪರಿಸರದಲ್ಲಿ ಹಂದಿ ಬೇಟೆಗೆ ಬಳಸುವ ಸ್ಫೋಟಕ ಸಿಡಿದ ಘಟನೆ ಇದಾಗಿದೆ. ಹೀಗಾಗಿ ಹಂದಿ ಬೇಟೆಯ ಅಮಾನುಷ ರೂಪವೂ ಇದರಿಂದಾಗಿ ಹೊರಬಿದ್ದಂತಾಗಿದೆ. ಇನ್ನಾದೂರ ಇಂತಹ ಅಪಾಯಕಾರಿ ಸ್ಫೋಟಕದವನ್ನು ಬಳಸಿ ಹಂದಿ ಬೇಟೆಗಾರರನ್ನು ಹಿಡಿದು ಶಿಕ್ಷಿಸುವ ಕೆಲಸಕ್ಕೆ ಪಾಲಿಕೆ, ಪೊಲೀಸ್ ಇಲಾಖೆ ಮುಂದಾಗಬೇಕಿದೆ.

#Newsin100Seconds I ಕ್ಷಣದ ಪ್ರಮುಖ ಸುದ್ದಿಗಳು

"