Asianet Suvarna News Asianet Suvarna News

Bengaluru Rains: ಒತ್ತುವರಿ, ಕಾಂಕ್ರೀಟೀಕರಣ, ಭೂಬಳಕೆಗೆ ಪಾಠ ಕಲಿಸಿದ ಪ್ರಕೃತಿ..!

ಕೆರೆ, ರಾಜಕಾಲುವೆ ಇದ್ದ ಮಾರ್ಗವನ್ನು ಪ್ರಕೃತಿಯೇ ಸೂಚಿಸುತ್ತಿದೆ, ನೀರು ಇಂಗದೆ ಇರುವುದೂ ಕೂಡ ಸಮಸ್ಯೆಯ ಮೂಲ

Experts Talks Over Bengaluru Rains grg
Author
First Published Sep 7, 2022, 2:00 AM IST

ಬೆಂಗಳೂರು(ಸೆ.07):  ರಾಜಧಾನಿಯಲ್ಲಿ ಉಂಟಾಗುತ್ತಿರುವ ಅಬ್ಬರದ ಮಳೆ ಹಾನಿಗೆ ಹಲವು ದಶಕಗಳಿಂದ ನಡೆದ ಕೆರೆಗಳ ಒತ್ತುವರಿ, ಕಾಂಕ್ರೀಟೀಕರಣ, ಅವೈಜ್ಞಾನಿಕ ಭೂ ಬಳಕೆ ಪ್ರಮುಖ ಕಾರಣವಾಗಿದ್ದು, ಪ್ರಕೃತಿಯೆ ತಕ್ಕ ಪಾಠ ಕಲಿಸುತ್ತಿದೆ ಎಂಬ ಅಭಿಪ್ರಾಯ ಈಗ ತಜ್ಞರು, ಪರಿಸರವಾದಿಗಳಿಂದ ಕೇಳಿ ಬರುತ್ತಿದೆ.

ಸದ್ಯ ಮಳೆಯಿಂದ ಜಲಾವೃತವಾಗಿರುವ ಬೆಂಗಳೂರು ಬಡಾವಣೆಗಳು ಈ ಮೊದಲು ಕೃಷಿ ಭೂಮಿ, ಕೆರೆಯ ಅಚ್ಚುಕಟ್ಟು ಪ್ರದೇಶ, ಕಿರು ಅರಣ್ಯ ಪ್ರದೇಶಗಳಾಗಿದ್ದವು. ಕಳೆದ ಒಂದೆರಡು ದಶಕಗಳಲ್ಲಿ ಈ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಲೇಔಟ್‌, ಕಟ್ಟಡಗಳು, ರಸ್ತೆಗಳು ನಿರ್ಮಾಣವಾಗಿವೆ. ಹೀಗಾಗಿಯೇ, ಭಾರೀ ಮಳೆಯಾದಾಗ ಕೆರೆಗಳು ತುಂಬಿ ಕೋಡಿ ಒಡೆದು, ರಾಜಕಾಲುವೆ ಉಕ್ಕಿ ಹರಿದು ಸುತ್ತಮುತ್ತಲಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನುಗ್ಗಿದೆ. ಯಾವ ಪ್ರದೇಶದಲ್ಲಿ ಮುಂಚೆ ಕೆರೆ ಇತ್ತು, ಯಾವ ಪ್ರದೇಶದಲ್ಲಿ ರಾಜಕಾಲುವೆ ಹರಿದು ಹೋಗಿತ್ತು ಎಂದು ಪ್ರಕೃತಿಯೆ ತಿಳಿಸುತ್ತಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

ಪ್ರಮುಖವಾಗಿ ಬೆಳಂದೂರು, ವರ್ತೂರ, ವಿಭೂತಿಪುರ, ಸವಳಕೆರೆ, ಬೇಗೂರು ಕೆರೆಗಳ ಸುತ್ತಮುತ್ತಲ ಬಡಾವಣೆಗೆಗಳು ಸದ್ಯ ಮಳೆ ನೀರಿನ ಅನಾಹುತಕ್ಕೆ ತುತ್ತಾಗಿವೆ. ಈ ಕೆರೆಗಳ ವಿಸ್ತೀರ್ಣ ಕಳೆದ ಮೂರ್ನಾಲ್ಕು ದಶಕ್ಕೆ ಹೋಲಿಸಿದರೆ ಅರ್ಧಕ್ಕರ್ಧದಷ್ಟುತಗ್ಗಿದೆ. ಈ ಕೆರೆಗಳಿಗೆ ನೀರು ಹರಿದುಬರುತ್ತಿದ್ದ ಬೃಹತ್‌ ಕಾಲುವೆಗಳ ಮೇಲೆಯೇ ಕಟ್ಟಡ ಕಟ್ಟಲಾಗಿದೆ. ಬಹುತೇಕ ಕಡೆ ರಸ್ತೆ, ಲೇಔಟ್‌ ಹಿನ್ನೆಲೆ ಡಾಂಬರ್‌, ಕಾಂಕ್ರೀಟ್‌ ಹಾಕಲಾಗಿದ್ದು, ಭೂಮಿಯಲ್ಲಿ ನೀರು ಇಂಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಳೆ ಬಂದಾಗ ನೀರು ನುಗ್ಗಿ ಹಾನಿಯಾಗುತ್ತಿದೆ. ಮನುಷ್ಯ ಪ್ರಕೃತಿ ಕೇಡು ಮಾಡಿದ ಆದರೆ, ಬಲಶಾಲಿಯಾದ ಪ್ರಕೃತಿ ಮಳೆ ರೂಪದಲ್ಲಿ ಪಾಠಕಲಿಸುತ್ತಿದೆ. ಅಕ್ರಮ ಒತ್ತುವರಿ ತೆರವು ಮಾಡಬೇಕಾದ ಸರ್ಕಾರ ಸಕ್ರಮ ಯೋಜನೆಗಳಡಿ ಅನುಕೂಲ ಮಾಡಿಕೊಟ್ಟಿದೆ ಎಂದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಸಮುದ್ರ ಮಟ್ಟದಲ್ಲಿ ಇಲ್ಲ!

ಬೆಂಗಳೂರು ಸಮುದ್ರಮಟ್ಟದಿಂದ 3000 ಅಡಿ ಎತ್ತರದಲ್ಲಿದೆ. ಆದರೂ, ಸಮುದ್ರ ದಡದಲ್ಲಿರುವ ಮುಂಬೈ, ಚೆನ್ನೈನಂತೆ ಇಲ್ಲಿಯೂ ಮಳೆ ನೀರಿನ ಹಾನಿಯಾಗುತ್ತದೆ. ಪ್ರವಾಹ ಉಂಟಾಗುತ್ತದೆ ಎಂದರೆ ವೈಜ್ಞಾನಿಕವಾಗಿ ಭೂ ಬಳಕೆಯಾಗಿಲ್ಲ ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ. ಕೃಷಿ ಭೂಮಿ ಲೇಔಟ್‌ ಆಗುವ ಸಂದರ್ಭದಲ್ಲಿ ಅಗತ್ಯ ವೈಜ್ಞಾನಿಕ ಕ್ರಮ ಬಳಸಿಲ್ಲ. ಕೆರೆ ಸಮೀಪದ ಭೂಮಿಯಲ್ಲಿ ಕಟ್ಟಡ, ಲೇಔಟ್‌ ನಿರ್ಮಿಸುವ ಸಂದರ್ಭದಲ್ಲಿ ನೀರು ಇಂಗಲು ಆದ್ಯತೆ ನೀಡಬೇಕು, ಮಳೆನೀರು ಕಾಲುವೆಗಳ ಮೇಲೆಗೆ ಕಟ್ಟಡ ಕಟ್ಟಲಾಗಿದೆ. ಇದರಿಂದ ಮಳೆ ನೀರು ಬಂದು ಮನೆ, ಕಟ್ಟಡ, ರಸ್ತೆಗಳಲ್ಲಿ ನಿಂತಿದೆ ಎಂದು ಮೂಲ ಸೌಕರ್ಯ ತಜ್ಞ ಎಸ್‌.ರಾಜಕುಮಾರ್‌ ಹೇಳುತ್ತಾರೆ.

ರಾಜಕಾಲುವೆ ಕಾಂಕ್ರೀಟಿಕರಣ

ಸದ್ಯ ರಾಜಕಾಲುವೆಗಳನ್ನು ಸಂಪೂರ್ಣ ಕಾಂಕ್ರೀಟಿಕರಣ ಮಾಡಿದ್ದು, ಮಳೆ ನೀರು ಇಂಗುವುದಿಲ್ಲ. ಜತೆಗೆ ಅತ್ಯಂತ ವೇಗವಾಗಿ ಹರಿಯುತ್ತದೆ. ವೇಗವಾಗಿ ಹರಿಯುವ ನೀರು ತಿರುವುಗಳಲ್ಲಿ ಉಕ್ಕಿ ಸುತ್ತಮುತ್ತಲ ಮನೆ, ಬಡಾವಣೆ, ರಸ್ತೆಗಳಿಗೆ ನುಗ್ಗುತ್ತದೆ. ಭಾರೀ ಮಳೆಯಾದಾಗ ಎಲ್ಲ ಕಾಲುವೆಗಳಿಂದ ನೀರು ವೇಗವಾಗಿ ಕೆರೆಗೆ ಹರಿಯುತ್ತಿರುವಾಗ ಸಮೀಪ ಬಡಾವಣೆಗೆ ನುಗ್ಗುವ ಸಾಧ್ಯತೆಗಳಿರುತ್ತವೆ. ಇದು ಕೂಡಾ ಪ್ರವಾಹಕ್ಕೆ ಕಾರಣವಾಗುತ್ತದೆ, ಇತ್ತೀಚಿನ ದಿನಗಳಲ್ಲಿ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಇಲ್ಲವೇ ಕಾಂಕ್ರಿಟ್‌ ಮಾಡುತ್ತಿರುವುದರಿಂದ ಬಿದ್ದ ಮಳೆ ನೀರು ಇಂಗುತ್ತಿಲ್ಲ. ನಿಂತ ನೀರು ಸುಗಮವಾಗಿ ಚರಂಡಿ ಸೇರುವ ರೀತಿಯಲ್ಲಿ ನಿರ್ಮಿಸಿಲ್ಲ. ಈ ಎಲ್ಲ ಕಾರಣಗಳು ಸಹ ಜನರು ತೊಂದರೆ ಎದುರಿಸುವಂತಾಗಿದೆ ಎಂದು ತಜ್ಞರು ಹೇಳುತ್ತಾರೆ.

Heavy Rain : ಅರ್ಧ ಶತಮಾನದ ದಾಖಲೆ ಮಳೆಗೆ ಕಂಗೆಟ್ಟ ಬೆಂಗಳೂರು

ಪಾಠ ಕಲಿಯಲಿ ಬೆಂಗಳೂರು

ಮಳೆಹಾನಿಯಿಂದ ಅಕ್ರಮ ಲೇಔಟ್‌ ನಿರ್ಮಾಣ, ಕೆರೆ, ರಾಜಕಾಲುವೆ ಒತ್ತುವರಿ, ಅತಿಯಾದ ಕಾಂಕ್ರೀಟಿಕರಣ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಮನೆ ಕಟ್ಟುವ, ಲೇಔಟ್‌ನಲ್ಲಿ ಸೈಟು ಖರೀದಿಸುವ ಮುನ್ನ ಹಲವು ಬಾರಿ ಯೋಚಿಸಬೇಕು. ಇನ್ನಾದರು ವೈಜ್ಞಾನಿಕ ಭೂಬಳಕೆ, ನೀರು ಇಂಗಲು ಆದ್ಯತೆ ನೀಡಬೇಕು ಎಂದು ಪರಿಸರವಾದಿಗಳು ಸಲಹೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಬೆಂಗಳೂರಿನ ಮಳೆಹಾನಿ ಪ್ರದೇಶವು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಈಡಾಗಿದೆ. ಮಳೆಯಿಂದ ಹಾನಿಯಾದ ಪ್ರದೇಶಗಳ ಪೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಹಲವರು ಪ್ರಕೃತಿ ಕಲಿಸಿದ ಪಾಠ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
 

Follow Us:
Download App:
  • android
  • ios