ಟಿಬಿ ಡ್ಯಾಂ ಆಯಸ್ಸು ಕ್ಷೀಣ: ಎಚ್ಚರ ವಹಿಸಲು ಸರ್ಕಾರಕ್ಕೆ ತಜ್ಞರ ಸಲಹೆ..!
ತುಂಗಭದ್ರಾ ಜಲಾಶಯದ ಆಯಸ್ಸು ಕ್ಷೀಣಿಸಿದೆ. 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದಿದ್ದರಿಂದ ಇಂಥದ್ದೊಂದು ಮಾಹಿತಿ ಹೊರಬಿದಿದ್ದು, ದೊಡ್ಡ ಅನಾಹುತವಾಗುವ ಮುನ್ನ ಕ್ರಮಕೈಗೊಳ್ಳಿ ಎಂದು ಜಲತಜ್ಞರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೊಪ್ಪಳ(ಆ.20): ತುಂಗಭದ್ರಾ ಜಲಾಶಯಕ್ಕೆ ವಯಸ್ಸಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಲತಜ್ಞರು ನೀಡಿದ ಎಚ್ಚರಿಕೆಯ ರೂಪದ ತಿಳಿವಳಿಕೆಯ ಸಂದೇಶ! ಹೌದು, ತುಂಗಭದ್ರಾ ಜಲಾಶಯದ ಆಯಸ್ಸು ಕ್ಷೀಣಿಸಿದೆ. 19ನೇ ಕ್ರಸ್ಟ್ ಗೇಟ್ ಮುರಿದು ಬಿದ್ದಿದ್ದರಿಂದ ಇಂಥದ್ದೊಂದು ಮಾಹಿತಿ ಹೊರಬಿದಿದ್ದು, ದೊಡ್ಡ ಅನಾಹುತವಾಗುವ ಮುನ್ನ ಕ್ರಮಕೈಗೊಳ್ಳಿ ಎಂದು ಜಲತಜ್ಞರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 1948ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿ 1954ರಲ್ಲಿ ಲೋಕಾರ್ಪಣೆಗೊಂಡ ಜಲಾಶಯಕ್ಕೆ ಇದೀಗ ಬರೋಬ್ಬರಿ 70 ವರ್ಷ. ನಿರ್ಮಾಣ ಮಾಡಿದವರೇ ಅದರ ಆಯಸ್ಸು 100 ವರ್ಷ ಎಂದು ಹೇಳಿದ್ದಾರೆ. ಹೀಗಾಗಿ, ಅದನ್ನು ದುರಸ್ತಿ ಮಾಡುವ ಅಥವಾ ಅದಕ್ಕೆ ಪರ್ಯಾಯ ಜಲಾಶಯ ನಿರ್ಮಾಣ ಮಾಡುವ ಯೋಜನೆ ರೂಪಿಸಲು ಇದು ಸಕಾಲ.
ಜಲಾಶಯಕ್ಕೆ 50 ವರ್ಷವಾದಗಲೇ ಕ್ರಸ್ಟ್ ಗೇಟ್ ಬದಲಾಯಿಸಬೇಕಿತ್ತು. ಹಾಗೆ ಮಾಡದ್ದರಿಂದಲೇ 19ನೇ ಕ್ರಸ್ಟ್ ಗೇಟ್ ಕಳಚಿ ಹೋಗಿದೆ ಎಂದು ಜಲಾಶಯ ತಜ್ಞ ಕನ್ಹಯ್ಯ ನಾಯ್ಡು ಹೇಳಿದ್ದಾರೆ. ಅಷ್ಟೇ ಅಲ್ಲದೇ ಇನ್ನು 30 ವರ್ಷ ಜಲಾಶಯಕ್ಕೇನು ದೊಡ್ಡ ಅವಧಿಯಲ್ಲ. ಆದ್ದರಿಂದ ಈಗಿನಿಂದಲೇ ಪರ್ಯಾಯ ಯೋಜನೆ ರೂಪಿಸಬೇಕು ಎಂದಿದ್ದಾರೆ.
ಟಿಬಿ ಡ್ಯಾಂನಲ್ಲಿ 68 ಟಿಎಂಸಿ ನೀರು ಉಳಿಸಿದ ತಜ್ಞ ಕನ್ಹಯ್ಯಾ ನಾಯ್ಡು, 3 ರಾಜ್ಯದ ಸಮಸ್ಯೆ ಸುಖಾಂತ್ಯ
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬರೋಬ್ಬರಿ 13 ಲಕ್ಷ ಎಕರೆ ನೀರಾವರಿಗೆ ಟಿಬಿ ಡ್ಯಾಂ ನೀರು ಒದಗಿಸುತ್ತದೆ. ದೇಶ-ವಿದೇಶಗಳಿಗೆ ಅಕ್ಕಿ ರಫ್ತು ಮಾಡುವುದರಿಂದ ಸರ್ಕಾರಕ್ಕೆ ನೂರಾರು ಕೋಟಿ ರು. ಆದಾಯವನ್ನು ಈ ಡ್ಯಾಂ ನೀಡುತ್ತದೆ. ಇಂಥ ಜಲಾಶಯದ ಗೇಟ್ ದುರಸ್ತಿ ಮಾಡಿ ಕೈತೊಳೆದುಕೊಳ್ಳುವ ಬದಲು ಶಾಶ್ವತ, ಪರ್ಯಾಯ ಯೋಜನೆ ರೂಪಿಸುವ ಅವಶ್ಯಕತೆ ಇದ್ದು, ಈ ವರ್ಷದ ಬೇಸಿಗೆಯಲ್ಲಿ ಸಮಗ್ರ ದುರಸ್ತಿಗೆ ಮುಂದಾಗಬೇಕು ಎನ್ನುವುದು ಜನರ ಒತ್ತಾಸೆಯಾಗಿದೆ.
ಚರ್ಚೆಗೆ ಸೀಮಿತವಾದ ಸಮಾನಾಂತರ ಜಲಾಶಯ: ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬಳಕೆ ಮಾಡಿಕೊಳ್ಳಲು ಟಿಬಿ ಡ್ಯಾಂನ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆ ಕಳೆದ 50 ವರ್ಷದಿಂದ ಕಾರ್ಯಗತವಾಗುತ್ತಿಲ್ಲ. ನವಲಿ ಸಮಾಂತರ ಜಲಾಶಯ ನಿರ್ಮಾಣವೂ ಕಳೆದ 15 ವರ್ಷಗಳಿಂದ ಕೇವಲ ಚರ್ಚೆಯ ವಸ್ತುವಾಗುತ್ತಿದೆಯೇ ವಿನಃ ತಾರ್ಕಿಕ ಅಂತ್ಯ ಕಂಡಿಲ್ಲ.
ಕನ್ಹಯ್ಯ ನಾಯ್ಡು ನೀಡಿದ ಸಲಹೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕ್ರಸ್ಟ್ ಗೇಟ್ ದುರಸ್ತಿ ಮಾಡಿದ ತಕ್ಷಣ ಮುಂದಿನ ಯೋಜನೆ ರೂಪಿಸಲು ಬೋರ್ಡ್ ಜತೆಗೆ ಮಾತುಕತೆ ನಡೆಸುತ್ತೇವೆ. ಇನ್ನೆಂದೂ ಇಂಥ ಅನಾಹುತ ಮರುಕಳಿಸದಂತೆ ಕ್ರಮವಹಿಸುತ್ತೇವೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ತಿಳಿಸಸಿದ್ದಾರೆ.
ಟಿ.ಬಿ ಡ್ಯಾಂ: ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಸಕ್ಸಸ್: ಸಿಎಂಗೆ ಸಚಿವ ಜಮೀರ್ ಕರೆ
ಟಿಬಿ ಡ್ಯಾಂ ಭರ್ತಿಗೆ 9 ಅಡಿ ಬಾಕಿ: ರೈತರು ನಿರಾಳ
ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ 19ನೇ ಗೇಟ್ ಅಳವಡಿಕೆ ಮಾಡಿದ ಬಳಿಕ ಬರೋಬ್ಬರಿ 4 ಟಿಎಂಸಿ ನೀರು ಹರಿದು ಬಂದಿದ್ದು, ಡ್ಯಾಂ ಸಂಪೂರ್ಣ ಭರ್ತಿಯಾಗಲು ಇನ್ನೂ 9 ಅಡಿ ಬಾಕಿ ಇದೆ. ಡ್ಯಾಂನ ಒಳಹರಿವು 55,275 ಕ್ಯುಸೆಕ್‌ನಷ್ಟಿದ್ದು, ಸೋಮವಾರದ ವೇಳೆಗೆ ಒಟ್ಟು 75.129 ಟಿಎಂಸಿ ಸಂಗ್ರಹವಾಗಿದೆ. ಈ ಮೂಲಕ ಮೊದಲ ಬೆಳೆ ಬೆಳೆಯಲು ರೈತರಿಗೆ ಸಂಪೂರ್ಣ ನೀರು ಸಿಗುವುದು ಖಾತ್ರಿಯಾಗಿದೆ. ಮಳೆ ಹೆಚ್ಚಾಗಿ ತುಂಗಭದ್ರಾ ಡ್ಯಾಂ ಪುನಃ ಭರ್ತಿಯಾಗಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.
ಕಳಚಿ ಹೋಗಿದ್ದ ಗೇಟ್ ಅಳವಡಿಕೆ ಬಳಿಕ ಜಲಾಶಯದ ಎಲ್ಲ 32 ಕ್ರಸ್ಟ್ ಗೇಟ್‌ಗಳನ್ನು ಮುಚ್ಚಲಾಗಿದ್ದು, ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ತಡೆಹಿಡಿಯಲಾಗಿದೆ.