ಬೀದರ್‌(ಮೇ.30): ಕೊರೋನಾ ವೈರಸ್‌ ರೋಗದ ಮಧ್ಯೆಯೇ ಹಗಲಿನಲ್ಲಿ ಸುಮಾರು 43 ರಿಂದ 44 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನಿಂದ ತತ್ತರಿಸಿದ್ದರೆ, ರಾತ್ರಿ ಹೊತ್ತು ಸೊಳ್ಳೆಗಳ ಕಾಟದಿಂದ ಬೀದರ್‌ನ ಹಳೆ ಭಾಗದ ಜನರು ಹೈರಾಣ ಆಗಿದ್ದಾರೆ.

ಸಂಜೆ 6 ಗಂಟೆಯಾಗುತ್ತಲೇ ಜೇನು ನೋಣಗಳಂತೆ ಸೊಳ್ಳೆಗಳ ಹಿಂಡು ಮನೆಗಳಲ್ಲಿ ಹೊಕ್ಕು ಇಡೀ ರಾತ್ರಿ ಜನರನ್ನು ನಿದ್ದೆ ಮಾಡಲು ಬಿಡುತ್ತಿಲ್ಲ. ಜನರು ಬೇಸಿಗೆ ಇದ್ದಿದ್ದರಿಂದ ಮನೆ ಅಂಗಳದಲ್ಲಿ, ಮನೆ ಛಾವಣಿ ಮೇಲೆ ಮಲಗುತಿದ್ದಾರೆ. ಆದರೆ ಸೊಳ್ಳೆಗಳು ನೆಮ್ಮದಿಯಿಂದ ನಿದ್ದೆ ಮಾಡಲು ಬಿಡುತ್ತಿಲ್ಲ.

ಬೀದರ್: 'ದಕ್ಷ ಅಧಿಕಾರಿಗಳಿಗೆ ಮಾನಸಿಕ ಒತ್ತಡ ಹಾಕಿದ್ರೆ ಈಶ್ವರ ಖಂಡ್ರೆ ವಿರುದ್ಧ ದೂರು'

ಅಧಿಕಾರಿಗಳ ನಿರ್ಲಕ್ಷ್ಯ:

ಎಲ್ಲವು ಸಾಮಾಜಿಕ ಜಾಲತಾಣದ ಕಾಲವಾಗಿದ್ದರಿಂದ ಯಾವುದೇ ಒಂದು ವಾರ್ಡ್‌ನಲ್ಲಿ ಬ್ಲಿಚಿಂಗ್‌ ಪೌಡರ್‌ ಆಗಲಿ ಅಥವಾ ಚರಂಡಿ ಸ್ವಚ್ಛತೆ ಆರಂಭವಾಗುತ್ತಿದೆ ಎಂದು ಫೋಟೋ ತೆಗೆದು ಸಂಬಂಧಪಟ್ಟಅಧಿಕಾರಿಗಳಿಗೆ ಕಳುಹಿಸುತ್ತಾರೆ. ಅವರು ಉನ್ನತ ಅಧಿಕಾರಿಗಳಿಗೆ ಸಭೆಯಲ್ಲಿ ಇವುಗಳನ್ನೇ ತೋರಿಸತ್ತಾರೆ. ಆದರೆ ನಿಜವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ನಿಯಂತ್ರಣಕ್ಕೆ ಬರುತ್ತಿಲ್ಲ:

ಬಿಸಿಲಿನ ತಾಪಕ್ಕೆ ಜನರು ಪ್ರತಿ ದಿನ ಸಂಜೆ ಮನೆಯಿಂದ ಹೊರಗೆ ಅಥವಾ ಮನೆ ಎದುರು ನಿಂತರೆ ಸೊಳ್ಳೆಗಳ ಕಾಟ ಶುರುವಾಗುತ್ತದೆ. ಯಾವುದೇ ಬತ್ತಿಯಾಗಲಿ ಅಥವಾ ಲಿಕ್ವಿಡ್‌ನಿಂದ ಸೊಳ್ಳೆಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬಿರುತ್ತಿಲ್ಲ.

ರಾತ್ರಿ ಮಲಗಬೇಕಾದರೆ ಸೊಳ್ಳೆ ಪರದೆ ಬಳಸಿದ್ದರೆ ಮಾತ್ರ ನಿದ್ದೆ ಮಾಡಲು ಸಾಧ್ಯ. ಸೊಳ್ಳೆಗಳಿಂದಲೇ ಡೆಂಘೀ, ಮಲೇರಿಯಾದಂತಹ ಅನೇಕ ರೋಗಗಳು ಹರಡುತ್ತವೆ. ಆದರೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ನಗರ ಸಭೆ ಯಾವುದೇ ರೀತಿಯಿಂದ ಕ್ರಮ ಕೈಗೊಳ್ಳುತ್ತಿಲ್ಲ.

ಹಗಲಿನಲ್ಲಿ ಸುಡು ಬಿಸಿಲು ಇದ್ದರೆ ರಾತ್ರಿ ಸೊಳ್ಳೆಗಳ ಕಾಟ ಇದೆ. ಹೀಗಾಗಿ ರಾತ್ರಿ ಹೊತ್ತು ನಿದ್ದೆ ಆಗುತ್ತಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕಾಗಿ ನಗರ ಸಭೆಯಿಂದ ಫಾಗಿಂಗ್‌ ಮಾಡುವುದಲ್ಲದೆ ಚರಂಡಿಗಳು ಸ್ವಚ್ಛವಾಗಿದ್ದರೆ ಸೊಳ್ಳಗಳ ಕಾಟ ಇರುವುದಿಲ್ಲ. ಆದರೆ ಇದು ಯಾವುದೂ ಆಗುತ್ತಿಲ್ಲ ಎಂದು ಹಳೆ ನಗರದ ನಿವಾಸಿ ಭಾವುರಾವ ಅವರು ಹೇಳಿದ್ದಾರೆ.  

ಪ್ರತಿ ದಿನ ರಾತ್ರಿ 12ರ ವರೆಗೆ ನಿದ್ದೆ ಬರುತ್ತಿಲ್ಲ. ಮನೆಯೊಳಗೆ ಧಗಿ, ಹೊರಗೆ ಸೊಳ್ಳೆಗಳ ಕಾಟ. ಇದರ ನಡುವೆ ಕೊರೋನಾ ರೋಗದ ಮತ್ತೊಂದು ಭಯ ನಮ್ಮನ್ನು ಕಾಡುತ್ತಿದೆ. ಉಳ್ಳವರು ಸೊಳ್ಳೆ ಪರದೆ ಬಳಸಿ ಮನೆ ಛಾವಣಿಗಳಾಗಲಿ ಅಥವಾ ಮನೆಯಂಗಳದಲ್ಲಿ ಮಲಗುತ್ತಾರೆ ಬಡವರು ಏನು ಮಾಡ್ಬೇಕು? ಎಂದು ಸ್ಥಳೀಯ ನಿವಾಸಿ ಫಾರೂಕ್‌ ಹೇಳಿದ್ದಾರೆ.