'ಬೂಟಾಟಿಕೆ ಹೆಚ್ಚು ದಿನ ನಡೆಯಲ್ಲ - ತಳ್ಳುವ ದಿನ ದೂರವಿಲ್ಲ' : ಎಚ್‌ಡಿಕೆ ವಿರುದ್ಧ ಗರಂ
ಮಣ್ಣಿನ ಮಕ್ಕಳೆಂಬ ಬೂಟಾಟಿಕೆ ಹೆಚ್ಚು ದಿನ ಉಳಿಯುವುದಿಲ್ಲ. ಜನರನ್ನು ಮರಳು ಮಾಡುವ ನಾಯಕರ ಬೂಟಾಟಿಕೆ ಮಾತುಗಳು ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ ಎಂದು ಮಾಜಿ ಸಿಎಂ ಎಚ್‌ಡಿಕೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಲಾಗಿದೆ.
ರಾಮನಗರ (ಏ.19): ಮಣ್ಣಿನ ಮಕ್ಕಳು, ರೈತರ ಉದ್ಧಾರಕರೆಂದು ಬೊಗಳೆ ಬಿಡುತ್ತಾ ಜನರನ್ನು ಮರಳು ಮಾಡುವ ನಾಯಕರ ಬೂಟಾಟಿಕೆ ಮಾತುಗಳು ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ. ಪ್ರಜ್ಞಾವಂತರಾಗಿರುವ ಕ್ಷೇತ್ರದ ಜನರು ಪಾಠ ಕಲಿಸುವ ದಿನಗಳು ದೂರ ಉಳಿದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಕೆ.ರಾಜು ವಾಗ್ದಾಳಿ ನಡೆಸಿದರು.
ತಾಲೂಕಿನ ವಡ್ಡರಹಳ್ಳಿಯಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ/ಬ್ಯಾರೇಜ್ ನಿರ್ಮಿಸುವ ಹಾಗೂ ವಡ್ಡರಹಳ್ಳಿಯ ಕೆರೆಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತನ ಮಗನೆಂದು ಹೇಳಿಕೊಳ್ಳುವ ನಾಯಕರಿಗೆ ಕಣ್ಣೀರು ಸುರಿಸಿ ಜನರನ್ನು ಮರಳು ಮಾಡುವುದನ್ನು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಕೆಲಸ ಮಾಡದೆ ಸುಳ್ಳು ಹೇಳಿಕೊಂಡು ಬೂಟಾಟಿಕೆ ಪ್ರದರ್ಶಿಸುತ್ತಾ ನಾಟಕವಾಡಿದರೆ ಜನರು ಹೆಚ್ಚು ದಿನ ಸಹಿಸುವುದಿಲ್ಲ. ಆ ನಾಯಕರ ನಿಜವಾದ ಬಣ್ಣ ಯಾವುದೆಂದು ಗೊತ್ತಾಗುತ್ತದೆ ಎಂದು ಟೀಕಿಸಿದರು.
HDK ಕರ್ಮಭೂಮಿ ರಾಮನಗರದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್: ಮಾಜಿ ಶಾಸಕ ಕಾಂಗ್ರೆಸ್ ಸೇರ್ಪಡೆ ..
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ವಯಸ್ಸಿನಲ್ಲಿ ನನಗಿಂತಲೂ ಚಿಕ್ಕವನು. ಆದರೂ, ನನ್ನನ್ನು ಶಿಖಂಡಿಯಂತಲ್ಲ ಏಕವಚನದಲ್ಲಿ ಟೀಕಿಸಿದ್ದಾನೆ. ನಾನೆಂದೂ ಶಿಖಂಡಿ ರೀತಿ ಬಾಳಿದವನಲ್ಲ. ಅವನ ಎಲ್ಲಾ ಟೀಕೆ ಟಿಪ್ಪಣಿಗಳಿಗೆ ಬಹಿರಂಗ ಸಭೆಯಲ್ಲಿಯೇ ಸೂಕ್ತ ಉತ್ತರ ನೀಡುತ್ತೇನೆ ಎಂದರು.
ನಾನು ಶಾಸಕನಾಗಿದ್ದಾಗ ಬಗರ್‌ಹುಕುಂನಲ್ಲಿ 2 ಸಾವಿರ ರೈತರಿಗೆ ಸಾಗುವಳಿ ಚೀಟಿ ಕೊಡಿಸಿದೆ. ನಗರ ಸೇರಿ ತಾಲೂಕು ಗ್ರಾಮೀಣ ಪ್ರದೇಶಗಳಲ್ಲಿನ ಬಡವರಿಗೆ ನಿವೇಶನ, ಸೂರು ಕಲ್ಪಿಸಿಕೊಟ್ಟಿದ್ದೇನೆ. ಇವರೆಡರಲ್ಲಿ ಒಂದೇ ಒಂದು ಕೆಲಸ ಮಾಡಿರುವುದನ್ನು ಕುಮಾರಸ್ವಾಮಿ ತೋರಿಸಿದರೆ ಕೈ ಮುಗಿಯುತ್ತೇನೆ ಎಂದು ಸವಾಲು ಹಾಕಿದರು.
ವಡ್ಡರಹಳ್ಳಿ ಕೆರೆಗೆ ನೀರು ತುಂಬಿಸುವ ಆಲೋಚನೆ ನಾನು ಶಾಸಕನಾಗಿದ್ದಲೇ ನಡೆದಿತ್ತು. ಈಗ ವಡ್ಡರಹಳ್ಳಿಯಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ/ಬ್ಯಾರೇಜ್ ನಿರ್ಮಿಸುವ ಯೋಚನೆಯೂ ಬಂದಿತು. ಕಾಂಗ್ರೆಸ್ ನಾಯಕರ ಕನಸಿನ ಕೂಸಾಗಿರುವ ಅದನ್ನು ಜೆಡಿಎಸ್ ನಾಯಕರನ್ನು ತಮ್ಮ ಕೊಡುಗೆಯೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಈ ಯೋಜನೆ ಬಗ್ಗೆ ಶಾಸಕಿ ಅನಿತಾರವರಿಗೆ ಎಳ್ಳಷ್ಟುತಿಳುವಳಿಕೆ ಇಲ್ಲ. ತಮ್ಮ ಮನೆಯಲ್ಲಿ ಹುಟ್ಟಿದ ಮಗುವಿಗೆ ನಾಮಕರಣ ಮಾಡುವುದನ್ನು ಬಿಟ್ಟು, ಇನ್ಯಾರದೊ ಮನೆಯಲ್ಲಿ ಹುಟ್ಟಿದ ಮಗುವಿಗೆ ನಾಮಕರಣ ಮಾಡಲು ಹೊರಟಿದ್ದಾರೆ ಎಂದು ಲಿಂಗಪ್ಪ ಲೇವಡಿ ಮಾಡಿದರು.