ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ 200 ಮಂದಿ ರಸ್ತೆಗೆ ಬಲಿ..!
ಉಡುಪಿ ಜಿಲ್ಲೆಯನ್ನು ಹಾದುಹೋಗುವ ರಾ.ಹೆ. 66 ಚತುಷ್ಪಥದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತಗಳ ಸಂಖ್ಯೆ ಏರಿಕೆ
ಉಡುಪಿ(ಜು.24): ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತದಲ್ಲಿ ವರ್ಷವೊಂದಕ್ಕೆ ಸರಾಸರಿ 200 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸುಮಾರು ಒಂದು ಸಾವಿರದಷ್ಟು ಮಂದಿ ಅಂಗವಿಕಲರಾಗುತ್ತಿದ್ದಾರೆ ಅಥವಾ ಗಂಭೀರ ಸ್ವರೂಪದಲ್ಲಿ ಗಾಯಗೊಳ್ಳುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹೆಜಮಾಡಿಯಿಂದ ಬೈಂದೂರುವರೆಗೆ 97 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 66 ಮತ್ತು ಮಲ್ಪೆಯಿಂದ ಆಗುಂಬೆವರೆಗೆ 55 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 169ಎ ಇದೆ. 250 ಕಿ.ಮೀ. ರಾಜ್ಯ ಹೆದ್ದಾರಿ ಇದೆ, ಇನ್ನೂ ಸಾವಿರಾರು ಕಿ.ಮೀ. ಜಿಲ್ಲಾ- ಗ್ರಾಮೀಣ ರಸ್ತೆಗಳಿವೆ. ಜಿಲ್ಲೆಯನ್ನು ಹಾದು ಹೋಗುವ ರಾ.ಹೆ. 66 ಈಗ ಚತುಷ್ಪಥವಾಗಿದ್ದು, ಅದೇ ಕಾರಣಕ್ಕೆ ನಿತ್ಯವೂ ಅದರಲ್ಲಿ ಅಪಘಾತಗಳು ಸಂಭವಿಸುತ್ತಿದೆ. ಅದರಲ್ಲೂ ಈ ಹೆದ್ದಾರಿ ಚತುಷ್ಪಥಗೊಂಡ ಕಳೆದ 5 ವರ್ಷಗಳಲ್ಲಿ ಇಲ್ಲಿ ಸಾಯುವವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
ಮಳೆ ಏರುಪೇರು; ತಲೆಕೆಳಗಾದ ರೈತರ ಲೆಕ್ಕಾಚಾರ!
ಕಳೆದ 5 ವರ್ಷಗಳಲ್ಲಿ (2017- 2021) ಜಿಲ್ಲೆಯಲ್ಲಿ ಒಟ್ಟು 15,799 ಅಪಘಾತಗಳು ಸಂಭವಿಸಿವೆ. ಅದರಲ್ಲಿ 1155 ಮಂದಿ ಮೃತಪಟ್ಟಿದ್ದರೆ, 4068 ಮಂದಿ ಅಂಗವಿಕಲತೆ ಅಥವಾ ಗಂಭೀರ ಸ್ಪರೂಪದಲ್ಲಿ ಗಾಯಗೊಂಡಿದ್ದಾರೆ. 2399 ಮಂದಿ ಲಘು ಸ್ವರೂಪದ ಗಾಯಗೊಂಡಿದ್ದಾರೆ.
ಈ ವರ್ಷ 6 ತಿಂಗಳಲ್ಲಿ 699 ಅಪಘಾತಗಳಲ್ಲಿ 128 ಮಂದಿ ಬಲಿಯಾಗಿದ್ದರೆ, 483 ಮಂದಿ ಗಂಭೀರ ಮತ್ತು 399 ಮಂದಿ ಸಾಧಾರಣ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಈ ಅಪಘಾತಗಳು ಹೆಚ್ಚಾಗಿವೆ ಎಂಬ ಆರೋಪವೂ ಇದೆ. ಜೊತೆಗೆ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿರುವುದೂ ಅಪಘಾತಗಳು ಹೆಚ್ಚುವುದಕ್ಕೆ ಕಾರಣವಾಗಿದೆ.
ಆ ದಿನ ಬೆಳ್ಳಂಬೆಳಗ್ಗೆ 8 ಮಕ್ಕಳ ಬಲಿ
ಜಿಲ್ಲೆಯಲ್ಲಿ ನಡೆದ ಅತಿದೊಡ್ಡ ರಸ್ತೆ ಅಪಘಾತ 2016ರ ಜೂನ್ 21ರಂದು ಬೈಂದೂರು ತಾಲೂಕಿನಲ್ಲಿ ಸಂಭವಿಸಿತ್ತು. ಅಂದು ಸುರಿಯುವ ಮಳೆಯಲ್ಲಿ ಮೊವಾಡಿ ಜಂಕ್ಷನ್‌ನಲ್ಲಿ ಬೆಳ್ಳಂಬೆಳಗ್ಗೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಓಮ್ನಿಗೆ ಜವರಾಯನಂತೆ ಅತಿವೇಗದಲ್ಲಿ ಬಂದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದು 8 ಮಕ್ಕಳು ಅಸುನೀಗಿದ ಘಟನೆಯಿಂದ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು. ಆ ಮಕ್ಕಳ ಮನೆಯವರೂ ಇಂದಿಗೂ ನೋವನ್ನನುಭವಿಸುತ್ತಿದ್ದಾರೆ.
Droupadi Murmu: ಹೆಜ್ಜೆ ಇಟ್ಟಳು ದ್ರೌಪದಿ ಭಾರತ ಮಹಾ...ಭಾರತವಾಗಲಿ- ಚಿಂತನಾ ಹೆಗಡೆ ಅವರ ಭಾಗವತಿಗೆ ವೈರಲ್!
2017ರಲ್ಲಿ 1314 ಅಪಘಾತ, 231 ಸಾವು, 1,440 ಗಾಯಾಳು
2018ರಲ್ಲಿ 1271 ಅಪಘಾತ, 228 ಸಾವು, 1,443 ಗಾಯಾಳು
2019ರಲ್ಲಿ 1214 ಅಪಘಾತ, 264 ಸಾವು, 1,319 ಗಾಯಾಳು
2020ರಲ್ಲಿ 990 ಅಪಘಾತ, 196 ಸಾವು, 1,110 ಗಾಯಾಳು
2021ರಲ್ಲಿ 1010 ಅಪಘಾತ, 196 ಸಾವು, 1,161 ಗಾಯಾಳು
2022ರಲ್ಲಿ 699 ಅಪಘಾತ, 128 ಸಾವು, 887 ಗಾಯಾಳು
ಅಪಘಾತ ತಡೆಯಲು ಕ್ರಮ ವಹಿಸಲಾಗುತ್ತಿದೆ: ಡಿಸಿ
ಜಿಲ್ಲೆಯಲ್ಲಿರುವ ಅಪಘಾತಗಳು ಹೆಚ್ಚಿರುವ ಪ್ರದೇಶಗಳನ್ನು ಅಪಘಾತ ವಲಯಗಳೆಂದು ಗುರುತಿಸಿ, ಅಲ್ಲಿ ಅಪಘಾತಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹೆದ್ದಾರಿ ಅಧಿಕಾರಿಗಳ ಸಭೆ ನಡೆಸಿ, ಅವೈಜ್ಞಾನಿಕ ಕಾಮಗಾರಿಗಳನ್ನು ಸರಿಪಡಿಸುವಂತೆ, ಮಳೆಯಿಂದ ಉಂಟಾದ ಹೊಂಡಗಳನ್ನು ಮುಚ್ಚುವಂತೆ ಸೂಚಿಸಿದ್ದೇನೆ ಅಂತ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.