ನೀರು ಪೂರೈಸದಿದ್ದರೂ ಬಿಲ್ ಕಟ್ಟಬೇಕು- ಇದ್ಯಾವ ನ್ಯಾಯ!

ಕಳೆದ ಎರಡು ಮೂರು ತಿಂಗಳಿನಿಂದ ನಗರ ಪ್ರದೇಶದಲ್ಲಿ ಜಲಮಂಡಳಿ ಸಮರ್ಪಕವಾಗಿ ನೀರು ಪೂರೈಸದಿದ್ದರೂ ಪ್ರತಿ ತಿಂಗಳು ಕರಾರುವಕ್ಕಾಗಿ ನೀರಿನ ಬಿಲ್ ಮಾತ್ರ ನೀಡುತ್ತದೆ. ನೀರಿನ ಬಿಲ್ ಪಾವತಿಸುವಂತೆ ಕಟ್ಟುನಿಟ್ಟಾಗಿ ಸೂಚಿಸುತ್ತದೆ.

Even if the water is not supplied, the bill must be paid   snr

 -ವಿಜಯ್ ಕೇಸರಿ

 ಚನ್ನಪಟ್ಟಣ ಕಳೆದ ಎರಡು ಮೂರು ತಿಂಗಳಿನಿಂದ ನಗರ ಪ್ರದೇಶದಲ್ಲಿ ಜಲಮಂಡಳಿ ಸಮರ್ಪಕವಾಗಿ ನೀರು ಪೂರೈಸದಿದ್ದರೂ ಪ್ರತಿ ತಿಂಗಳು ಕರಾರುವಕ್ಕಾಗಿ ನೀರಿನ ಬಿಲ್ ಮಾತ್ರ ನೀಡುತ್ತದೆ. ನೀರಿನ ಬಿಲ್ ಪಾವತಿಸುವಂತೆ ಕಟ್ಟುನಿಟ್ಟಾಗಿ ಸೂಚಿಸುತ್ತದೆ. ಜಲಮಂಡಲಿಯ ಈ ನಡೆಯನ್ನು ಕೆಲ ನಗರನಿವಾಸಿಗಳು ವಿರೋಧಿಸಿ, ನೀರು ಪೂರೈಕೆ ಮಾಡದ ಮೇಲೆ ನೀರಿನ ಬಿಲ್ ಏಕೆ ಪಾವತಿಸಬೇಕು ಎಂದು ಸೆಡ್ಡು ಹೊಡೆದಿದ್ದಾರೆ.

ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿದ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಸಹ ಕುಡಿಯುವ ಹಾಗೂ ದಿನಬಳಕೆಯ ನೀರಿಗೆ ತತ್ವಾರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಲಮಂಡಲಿ ನಗರ ಪ್ರದೇಶದಲ್ಲಿ ಸರಿಯಾಗಿ ನೀರು ಪೂರೈಕೆ ಮಾಡಿರಲಿಲ್ಲ. ಆದರೆ, ಎಂದಿನಂತೆ ಪ್ರತಿ ತಿಂಗಳು ನೀರಿನ ಬಿಲ್ ಅನ್ನು ಮಾತ್ರ ಯಥಾವತ್ತಾಗಿ ನೀಡುತ್ತಿದ್ದು, ಇದರ ವಿರುದ್ಧ ಕೆಲ ನಗರನಿವಾಸಿಗಳು ಆಕ್ರೋಶಗೊಂಡಿದ್ದಾರೆ.

ನೀರು ಪೂರೈಕೆಯಲ್ಲಿ ವ್ಯತ್ಯಯ:

ಚನ್ನಪಟ್ಟಣ ನಗರಕ್ಕೆ ಟಿ.ಕೆ.ಹಳ್ಳಿಯಿಂದ ಬರುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇದರ ಜತೆಗೆ ಕೊಳವೆ ಬಾವಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ನಗರ ಪ್ರದೇಶಕ್ಕೆ ೧೩ ಎಂಎಲ್‌ಡಿ ನೀರಿನ ಅಗತ್ಯ ಇದೆ. ತೀವ್ರ ಬರದ ಹಿನ್ನೆಲೆಯಲ್ಲಿ ಮೂರರಿಂದ ನಾಲ್ಕು ಎಂಎಲ್‌ಡಿ ನೀರು ಮಾತ್ರ ಸಿಗುತ್ತಿದೆ. ಶಿಂಷಾ ನದಿಯಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದು ಮೂರು ತಿಂಗಳಿನಿಂದ ನಗರ ಪ್ರದೇಶದಲ್ಲಿ ಪೂರೈಕೆ ಮಾಡುವ ನೀರಿನಲ್ಲಿ ವ್ಯತ್ಯಯ ಉಂಟಾಗಿದೆ.

೧೦ ದಿನಕ್ಕೊಮ್ಮೆ ನೀರು!:

ನಗರದ ಕೆಲ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ಕಾವೇರಿ ನೀರನ್ನು ಪೂರೈಕೆ ಮಾಡಿದ್ದರೆ, ಇನ್ನು ಕೆಲ ವಾರ್ಡ್‌ಗಳಲ್ಲಿ ಕೆಲ ಸಮಸ್ಯೆಗಳ ಕಾರಣಕ್ಕೆ ೧೦ ದಿನಕ್ಕೊಮ್ಮೆ ಕಾವೇರಿ ನೀರು ಪೂರೈಕೆ ಮಾಡಲಾಗಿದೆ. ಇದರೊಂದಿಗೆ ಕೊಳವೆ ಬಾವಿ ನೀರು ಪೂರೈಕೆಯಲ್ಲಿ ಸಹ ವ್ಯತ್ಯಯವಾಗಿದೆ. ಹಿಂದೆಂದು ಕಾಣದ ನೀರಿನ ಅಭಾವವನ್ನು ಈ ವರ್ಷ ನಗರದ ಜನತೆ ಅನುಭವಿಸಿದ್ದಾರೆ.

ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ನಗರದ ಕೆಲ ಪ್ರದೇಶಗಳಿಗೆ ಜಲಮಂಡಳಿ ಹಾಗೂ ನಗರಸಭೆಯಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಇದರೊಂದಿಗೆ ಸಾರ್ವಜನಿಕರು ತಾವೇ ಸ್ವಯಂಪ್ರೇರಿತರಾಗಿ ಹಣ ನೀಡಿ ಟ್ಯಾಂಕರ್ ಮೂಲಕ ನೀರನ್ನು ತರೆಸಿಕೊಂಡಿದ್ದರು.

ಸರಿಯಾಗಿ ನೀರು ಪೂರೈಕೆ ಮಾಡದ ಜಲಮಂಡಳಿ ನೀರಿನ ಬಿಲ್ ಅನ್ನು ಮಾತ್ರ ತಪ್ಪದೇ ನೀಡುತ್ತಿದೆ. ಟ್ಯಾಂಕರ್ ನೀರಿಗೂ ನಾವೇ ಹಣ ತೆತ್ತು ಇದೀಗ ನೀರಿನ ಬಿಲ್ಲನ್ನೂ ಪಾವತಿಸಿ ಎಂದರೆ ಪಾವತಿಸುವುದು ಹೇಗೆ? ನಾವು ಬಿಲ್ ಪಾವತಿಸುವುದಿಲ್ಲ ಎಂದು ಕೆಲ ನಿವಾಸಿಗಳು ನೀರಿನ ಬಿಲ್ ಸಂಗ್ರಹಕ್ಕೆ ಹೋದ ಜಲಮಂಡಲಿ ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಮೂರು ರೀತಿಯ ದರ ನಿಗದಿ:

ನೀರಿನ ಸಂಪರ್ಕಕ್ಕೆ ನಗರ ನಿವಾಸಿಗಳಿಗೆ ಜಲಮಂಡಲಿ ಮೂರು ರೀತಿಯ ದರ ನಿಗದಿಪಡಿಸಿದೆ. ಗೃಹಬಳಕೆಯ ಸಂಪರ್ಕಕ್ಕೆ ತಿಂಗಳಿಗೆ ೨೧೮ ರು. ಕಟ್ಟಡ ನಿರ್ಮಾಣ ಉದ್ದೇಶಿತ ಸಂಪರ್ಕಕ್ಕೆ ತಿಂಗಳಿಗೆ ೪೩೬ ರು. ಹಾಗೂ ಹೋಟೆಲ್, ಬೇಕರಿ ಸೇರಿದಂತೆ ವಾಣಿಜ್ಯ ಉದ್ದೇಶದ ನೀರಿನ ಸಂಪರ್ಕಕ್ಕೆ ಪ್ರತಿ ತಿಂಗಳು ೮೮೦ ರು. ದರ ನಿಗದಿ ಮಾಡಿದೆ. ಗೃಹ ಬಳಕೆದಾರರು ತಮ್ಮ ಬಳಕೆಗೆ ತಕ್ಕಂತೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಟ್ಯಾಂಕರ್ ನೀರು ತರಿಸಿಕೊಂಡಿದ್ದರೆ, ವಾಣಿಜ್ಯ ಉದ್ದೇಶದವರು ಪ್ರತಿನಿತ್ಯ ಅಥವಾ ದಿನಬಿಟ್ಟು ದಿನ ಟ್ಯಾಂಕರ್ ಮೂಲಕ ನೀರು ಹೊಡೆಸಿಕೊಂಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ನೀರಿಗಾಗಿ ನಾವು ಸಾವಿರಾರು ರು. ಖರ್ಚು ಮಾಡಿದ್ದು, ಇದೀಗ ನೀರು ಪೂರೈಸದಿದ್ದರೂ ಸಹ ಜಲಮಂಡಳಿಯ ಬಿಲ್ ಪಾವತಿಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ ನಿಗದಿ ಕುರಿತು ಅಪಸ್ವರ:

ಇನ್ನು ಜಲಮಂಡಲಿ ನಿಗದಿಪಡಿಸಿರುವ ನೀರಿನ ದರದ ಕುರಿತು ಅಪಸ್ವರಗಳು ಕೇಳಿಬರುತ್ತಿದೆ. ನೀರು ಬಳಕೆ ಮೇಲೆ ದರ ನಿಗದಿ ಮಾಡದೇ ಗೃಹಬಳಕೆ, ವಾಣಿಜ್ಯ ಉದ್ದೇಶಕ್ಕೆ ಇಷ್ಟು ಎಂದು ದರ ನಿಗದಿಪಡಿಸಿರುವುದು ಸರಿಯಲ್ಲ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಕಡಿಮೆ ಮಂದಿ ಇರುವ ಮನೆಯವರು ಕಡಿಮೆ ನೀರು ಬಳಸಿದರೆ ಹೆಚ್ಚು ಜನ ಇರುವ ಮನೆಯವರು ಅಧಿಕ ಪ್ರಮಾಣದ ನೀರನ್ನು ಬಳಕೆ ಮಾಡುತ್ತಾರೆ. ವಾಣಿಜ್ಯ ಉದ್ದೇಶದ್ದೂ ಅದೇ ಕತೆ ದೊಡ್ಡ ಉದ್ಯಮಗಳು ಹಾಗೂ ಸಣ್ಣ ಉದ್ಯಮಗಳಿಗೂ ಒಂದೇ ದರ ನಿಗದಿಪಡಿಸಲಾಗಿದೆ. ಸರಿಯಾದ ಮಾನದಂಡ ಅನುಸರಿಸದೇ ಅಂದಾಜಿನ ಮೇಲೆ ದರ ನಿಗದಿಪಡಿಸಲಾಗಿದೆ ಎಂಬ ಅಸಮಾಧಾನ ನಗರನಿವಾಸಿಗಳಲ್ಲಿ ಕಂಡುಬರುತ್ತಿದ್ದು, ಮೀಟರ್ ಅಳವಡಿಸಿ ನೀರಿನ ಬಳಕೆಗೆ ತಕ್ಕಂತೆ ಶುಲ್ಕ ವಿಧಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ಕಾವೇರಿ ನೀರು ಮಾತ್ರ ಪೂರೈಸುತ್ತಿಲ್ಲ:

ನಗರ ಪ್ರದೇಶಕ್ಕೆ ಜಲಮಂಡಳಿ ಕಾವೇರಿ ನೀರನ್ನು ಮಾತ್ರ ಪೂರೈಕೆ ಮಾಡುತ್ತಿಲ್ಲ. ಕಾವೇರಿ ನೀರಿನ ಜತೆಗೆ ಬೋರ್ ನೀರನ್ನು ಸಹ ಪೂರೈಕೆ ಮಾಡುತ್ತಿದೆ. ಕೆಲ ನಿವಾಸಿಗಳು ಕಾವೇರಿ ನೀರಿಗೆ ಮಾತ್ರ ಹಣ ನೀಡಬೇಕು ಎಂದುಕೊಂಡಿದ್ದಾರೆ. ಆದರೆ, ಬೋರ್ ನೀರಿಗೂ ಸೇರಿಸಿಯೇ ಬಿಲ್ ಅನ್ನು ನಿಗದಿ ಮಾಡಲಾಗಿದ್ದು, ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜಲಮಂಡಲಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಕೋಟ್...........

ಕಳೆದ ಎರಡು ಮೂರು ತಿಂಗಳಿನಿಂದ ಕುಡಿಯುವ ಹಾಗೂ ದಿನಬಳಕೆಯ ನೀರಿಗೆ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಹಣ ತೆತ್ತು ಟ್ಯಾಂಕರ್ ನೀರು ಹೊಡೆಸಿಕೊಂಡಿದ್ದೇವೆ. ನೀರು ಪೂರೈಸದಿದ್ದರೂ ಜಲಮಂಡಳಿ ನೀರಿನ ಬಿಲ್ ನೀಡಿರುವುದು ಯಾವ ನ್ಯಾಯ. ನಾವು ನೀರಿನ ಬಿಲ್ ಪಾವತಿಸುತ್ತೇವೆ. ಟ್ಯಾಂಕರ್‌ಗೆ ನಾವು ಪಾವತಿಸಿರುವ ಹಣವನ್ನು ಜಲಮಂಡಲಿ ಅವರು ನೀಡಲಿ.

-ಸಿ.ವಿ.ರಾಮು, ನಗರ ನಿವಾಸಿ

ಕೋಟ್................

ಕಳೆದ ವರ್ಷ ತೀವ್ರ ಬರಗಾಲದ ಆವರಿಸಿದ ಕಾರಣ ಕಾವೇರಿ ನೀರಿನ ಅಭಾವ ಎದುರಾದರೂ ಕೊಳವೆ ಬಾವಿ ನೀರನ್ನು ಪೂರೈಕೆ ಮಾಡಲಾಗಿದೆ. ಕೆಲವರು ಬಿಲ್ ಏಕೆ ಕಟ್ಟಬೇಕು ಎಂದು ಪ್ರಶ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ತೀವ್ರ ಬರದ ಪರಿಸ್ಥಿತಿಯಲ್ಲೂ ಸಹ ಜಲಮಂಡಲಿ ಶಕ್ತಿಮೀರಿ ನೀರು ಪೂರೈಕೆ ಮಾಡಿದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು.

-ಜಯಕುಮಾರ್, ಎಇ, ಜಲಮಂಡಳಿ

(ಯಾವುದಾದರೂ ಒಂದು ಫೋಟೋ ಬಳಸಬಹುದಾ?)

ಪೊಟೋ೨೬ಸಿಪಿಟಿ೧:

ನಿವಾಸಿಯೊಬ್ಬರಿಗೆ ಜಲಮಂಡಳಿ ನೀಡಿರುವ ನೀರಿನ ಬಿಲ್.

Latest Videos
Follow Us:
Download App:
  • android
  • ios