Asianet Suvarna News Asianet Suvarna News

4 ವರ್ಷಗಳಾದರೂ ಸಿದ್ದಗಂಗಾ ಶ್ರೀಗಳ ಪುತ್ಥಳಿ ನಿರ್ಮಾಣ ಕಾರ್ಯ ಶೇ.10ರಷ್ಟು ಕಾಮಗಾರಿ ಮುಗಿದಿಲ್ಲ!

ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರದಲ್ಲಿ 111 ಅಡಿ ಎತ್ತರದ ಶ್ರೀಗಳ ಪುತ್ಥಳಿ ಹಾಗೂ ಸಭಾಂಗಣದಂತಹ ಬೃಹತ್ ಯೋಜನೆಯ ಕಾರ್ಯಕ್ರಮಕ್ಕೆ ಚಾಲನೆ ದೊರೆತು ವರ್ಷಗಳೇ ಗತಿಸಿದರೂ ಅದರ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ.
 

Even after 4 years 10 percent of the construction work of Siddaganga Sree Statue has not been completed gvd
Author
First Published Nov 27, 2023, 8:44 PM IST

ಗಂ.ದಯಾನಂದ ಕುದೂರು

ಕುದೂರು (ನ.27): ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರು ವೀರಾಪುರದಲ್ಲಿ 111 ಅಡಿ ಎತ್ತರದ ಶ್ರೀಗಳ ಪುತ್ಥಳಿ ಹಾಗೂ ಸಭಾಂಗಣದಂತಹ ಬೃಹತ್ ಯೋಜನೆಯ ಕಾರ್ಯಕ್ರಮಕ್ಕೆ ಚಾಲನೆ ದೊರೆತು ವರ್ಷಗಳೇ ಗತಿಸಿದರೂ ಅದರ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ.

ಈ ಯೋಜನೆಯ ಕಾಮಗಾರಿ ಇದೇ ರೀತಿ ಮುಂದುವರೆದರೆ ಮುಂದಿನ ಹತ್ತು ವರ್ಷಗಳಾದರೂ ಪುತ್ಥಳಿ ನಿರ್ಮಾಣ ಕಾರ್ಯ ಮುಗಿಯುವುದು ಅನುಮಾನ. 2019ರ ನವೆಂಬರ್ 8ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶ್ರೀಗಳ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಎರಡು ವರ್ಷಗಳಲ್ಲಿ ಈ ಕಾರ್ಯಯವನ್ನು ಸಂಪೂರ್ಣಗೊಳಿಸಿ ಅದನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಘೋಷಿಸಿದ್ದರು. ಆದರೆ, ಘೋಷಣೆ ಮಾಡಿ ನಾಲ್ಕು ವರ್ಷಗಳಾದರು ಕಾಮಗಾರಿ ಶೇ.10ರಷ್ಟು ಮುಗಿದಿಲ್ಲ.

ಡಿಕೆಶಿ ಸಿಬಿಐ ಕೇಸ್ ವಾಪಸಿನ ನಿರ್ಧಾರಕ್ಕೆ ಛೀಮಾರಿ ಬೀಳಲಿದೆ: ಎಚ್‌.ಡಿ.ಕುಮಾರಸ್ವಾಮಿ

80 ಕೋಟಿ ಮೀಸಲು: ಗುಜರಾತಿನ ಸರದಾರ್ ವಲ್ಲಭಬಾಯಿ ಪಟೇಲ್ ಪುತ್ಥಳಿಯಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಇನ್ನೆರೆಡು ವರ್ಷಗಳಲ್ಲಿ ಪುತ್ಥಳಿ ಕಾರ್ಯ ಮುಗಿಸುತ್ತೇವೆ. ಇದಕ್ಕಾಗಿ 80 ಕೋಟಿ ರು. ಹಣವನ್ನು ಮೀಸಲಿರಿಸಿದ್ದೇವೆ ಎಂದು ಯಡಿಯೂರಪ್ಪನವರು ಘೋಷಿಸಿದ್ದರು. 55 ಕೋಟಿ ಪುತ್ಥಳಿ ಕಾರ್ಯಕ್ಕೆ ಉಳಿದ 25 ಕೋಟಿ ರು.ಗಳನ್ನು ಗ್ರಾಮದ ಅಭಿವೃದ್ದಿಗೆಂದು ಮೀಸಲಿರಿಸಿದ್ದರು. ಆದರೆ ಸರ್ಕಾರ ಬದಲಾದ ಹಿನ್ನಲೆಯಲ್ಲಿ ಹಣ ಸಕಾಲಕ್ಕೆ ಬಿಡುಗಡೆ ಆಗದೆ ಕಾಮಗಾರಿ ಕೆಲಸ ನಿಧಾನ ಗತಿ ಪಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣರ ಬಳಿ ಸಾಕಷ್ಟು ಬಾರಿ ಚರ್ಚೆ ಮಾಡಿ ಹಣ ಮಂಜೂರು ಮಾಡಿಸಿ ಕೆಲಸದ ವೇಗ ಹೆಚ್ಚಿಸಿ ಎಂದು ಮನವಿ ಮಾಡಿದ್ದರೂ ಅವರಿಂದ ಇದುವರೆಗೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

16 ಎಕರೆ ವಿಸ್ತಾರದಲ್ಲಿ ಅಭಿವೃದ್ಧಿ: ವೀರಾಪುರ ಗ್ರಾಮದ ಸೋಮಶೇಖರ್ ಒಂದು ಎಕರೆ ಜಾಗವನ್ನು ಪುತ್ಥಳಿ ಕಾರ್ಯಕ್ಕೆ ದಾನವಾಗಿ ನೀಡಿದರು. ನಂತರ ಪುತ್ಥಳಿಯ ಜೊತೆಗೆ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಜಾಗದ ಕೊರತೆ ಬಂದಾಗ ಅದಕ್ಕೆ ಹೊಂದಿಕೊಂಡಂತೆಯೇ ಇದ್ದ 15 ಎಕರೆ ಸರ್ಕಾರಿ ಜಾಗವನ್ನು ಸರ್ಕಾರ ಮಂಜೂರು ಮಾಡಿಕೊಟ್ಟಿತ್ತು. ಹೀಗೆ ಒಟ್ಟು 16 ಎಕರೆ ಪ್ರದೇಶದಲ್ಲಿ ಸಭಾಂಗಣ, ಥೀಯೇಟರ್, ದಾಸೋಹ ಭವನ ಒಳಗೊಂಡಂತೆ ಈ ಜಾಗವನ್ನು ಬಳಕೆ ಮಾಡಲು ನೀಲನಕ್ಷೆ ರೂಪಿಸಲಾಗಿದೆ.

141 ಅಡಿ ಎತ್ತರದ ಪುತ್ಥಳಿ: ಸಿದ್ದಗಂಗಾ ಶ್ರೀಗಳು 111 ವರ್ಷ ಬದುಕಿದ್ದರು ಎಂಬ ಹಿನ್ನೆಲೆಯಲ್ಲಿ ಅಷ್ಟೇ ಎತ್ತರದ ಪುತ್ಥಳಿ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಯಿತು. ಪುತ್ಥಳಿಯ ತಳಪಾಯ ಸೇರಿ 30 ಅಡಿ ಬಂಡೆಯಾಕಾರದ ತಳಪಾಯ ಸೇರಿ ಒಟ್ಟು 141 ಅಡಿ ಎತ್ತರದ ಶ್ರೀಗಳ ಪುತ್ಥಳಿ ನಿರ್ಮಾಣ ಆಗಬೇಕಿದೆ. ಇದರ ನೀಲನಕ್ಷೆಯನ್ನು ಸೂಲಿಕೆರೆಯ ಮೋಹನ್ ರಚಿಸಿದ್ದರು. ಇದರ ಸಮೀಪದಲ್ಲಿಯೇ ಸಭಾಭವನ, ಮ್ಯೂಸಿಯಂ, ಥಿಯೇಟರ್, ಮೆಡಿಟೇಷನ್ ಹಾಲ್ ನಿರ್ಮಾಣವಾಗಲಿದ್ದು, ಥಿಯೇಟರ್‌ನಲ್ಲಿ ಶ್ರೀಗಳ ಬದುಕು ಮತ್ತು ಸಾಧನೆಯ ಕುರಿತಾಗಿ ಸಿನೆಮಾ, ಸಾಕ್ಷ್ಯಚಿತ್ರಗಳು ಹಾಗೂ ಫೋಟೋ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಹಾಗೂ ಪುತ್ಥಳಿಯ ಸುತ್ತಲೂ ಭಕ್ತರು ಕೂತು ಅದರ ಸೌಂದರ್‍ಯ ಸವಿಯಲು ಆಸನಗಳ ವ್ಯವಸ್ಥೆ ಮಾಡಬೇಕಾಗಿದೆ ಎಂಬ ನಿರ್ಧಾರದಲ್ಲಿ ಕಾಮಗಾರಿ ಕಾರ್ಯ ನಡೆಯುತ್ತಿದೆ. ಈ ಮೂಲಕ ವೀರಾಪುರ ಗ್ರಾಮವನ್ನು ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು.

ವೀರಾಪುರದ ರಸ್ತೆ ರಾಜಕಾರಣಿಗಳಿಗೇ ಪ್ರೀತಿ: ರಾಷ್ಟ್ರೀಯ ಹೆದ್ದಾರಿ 75 ರಿಂದ ವೀರಾಪುರ ಗ್ರಾಮದವರೆಗೂ ಸುಸಜ್ಜಿತ ವಿಶಾಲವಾದ ರಸ್ತೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ರಾಮನಗರದ ಅಂದಿನ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ್ ರವರು ಘೋಷಿಸಿ ಚಪ್ಪಾಳೆ ಪಡೆದು ಹೋದವರು ಮತ್ತೆ ವೀರಾಪುರ ಗ್ರಾಮದ ಕಡೆಗೆ ತಿರುಗಿ ನೋಡಲಿಲ್ಲ. ಸದ್ಯ ವೀರಾಪುರ ರಸ್ತೆಯಲ್ಲಿ ವೃದ್ಧರು, ಗರ್ಭಿಣಿಯರು ಓಡಾಡಲು ಆಗದಂತಹ ಕೆಟ್ಟ ರಸ್ತೆಯಾಗಿ ರೂಪುಗೊಂಡಿದೆ. ಪುತ್ಥಳಿ ಕಾರ್ಯ ಇದೇ ವೇಗದಲ್ಲಿ ಮುಂದುವರೆದರೆ ಕನಿಷ್ಟ 5 ವರ್ಷವಾದರೂ ಬೇಕು. 

ಆಗ ಅದರ ಉದ್ಘಾಟನೆಗೆ ಬರುವ ಮಂತ್ರಿಗಳಿಗೆ ತೊಂದರೆ ಆಗಬಾರದೆಂದು ರಸ್ತೆಗೆ ಡಾಂಬರೀಕರಣ ನಡೆಯುತ್ತದೆ. ಮತ ಹಾಕಿ ಗೆಲ್ಲಿಸಿದ ಮತದಾರ ಮಾತ್ರ ಅಲ್ಲಿಯ ತನಕ ಸರಿಯಾದ ರಸ್ತೆಯಿಲ್ಲದೆ ಒದ್ದಾಡುತ್ತಲೇ ಇರಬೇಕಾಗುತ್ತದೆ ಎಂದು ಗ್ರಾಮಸ್ಥರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚರಗೊಂಡು ಸಿದ್ದಗಂಗಾ ಶ್ರೀಗಳ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿ ಶ್ರಮಿಸಬೇಕು. ಸ್ವಾಮೀಜಿಯ ಕುರಿತಾದ ಭಕ್ತಿ ಅಭಿಮಾನವನ್ನು ಕೇವಲ ಭಾಷಣ ಹಾಗೂ ಚುನಾವಣೆಗಳಲ್ಲಿ ಬಳಸದೆ ಕೃತಿಯಲ್ಲಿ ಮಾಡಿ ತೋರಿಸಬೇಕೆಂದು ಭಕ್ತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಎಂಪಿ ಚುನಾವಣೆವರೆಗೂ ಸರ್ಕಾರದ ಜಾತಿಗಣತಿ ನಾಟಕ: ಎಚ್‌ಡಿಕೆ

ಶಾಸಕ ಬಾಲಕೃಷ್ಣರವರು ನಾನು ಗೆದ್ದ ನಂತರ ಮಾಡುವ ಮೊದಲ ಕೆಲಸವೇ ಸಿದ್ದಗಂಗಾ ಶ್ರೀಗಳ ಪುತ್ಥಳಿ ನಿರ್ಮಾಣದ ಕಾರ್ಯ ಎಂದು ಹೇಳಿದ್ದರು. ಆದರೆ ಗೆದ್ದ ನಂತರ ನಾನು ಈ ಮಾತು ನೆನಪಿಸಿದಾಗ ಇರು ಬ್ರದರ್ ಈಗ ತಾನೆ ಸರ್ಕಾರ ರಚನೆಯಾಗಿದೆ. ಸ್ವಲ್ಪ ದಿನ ಹೋಗಲಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ವೇದ್ಯವಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪುತ್ಥಳಿ ಕಾರ್‍ಯ ಆಗುವುದು ಅನುಮಾನ. ಯಡಿಯೂರಪ್ಪರವರು ಮೀಸಲಿರಿದ್ದ ಹಣವನ್ನು ಬಿಡುಗಡೆ ಮಾಡಿ ಪುತ್ಥಳಿ ಕಾಮಗಾರಿಗೆ ವೇಗ ನೀಡಬೇಕಾಗಿದೆ. ಎರಡು ವರ್ಷಗಳಲ್ಲಿ ಮುಗಿಯಬೇಕಾಗಿದ್ದ ಕಾರ್ಯ ಇನ್ನೂ ಸರಿಯಾಗಿ ಟೇಕಾಫ್ ಆಗಿಲ್ಲ ಎಂದರೆ ಸರ್ಕಾರದ ವೈಫಲ್ಯವನ್ನು ಇದು ತೋರಿಸುತ್ತಿದೆ.
- ಎಂ.ರುದ್ರೇಶ್, ಮಾಜಿ ಅಧ್ಯಕ್ಷರು, ಕೆಆರ್ ಐಡಿಎಲ್

Follow Us:
Download App:
  • android
  • ios