ಎತ್ತಿನ ಹೊಳೆ ಯೋಜನೆ : ಶೀಘ್ರ ಭೂ ಪರಿಹಾರ ಮೊತ್ತ ವಿತರಿಸಲು ಸೂಚನೆ

ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಂಡ ಭೂ ಮಾಲೀಕರಿಗೆ ಶೀಘ್ರ ಪರಿಹಾರ ಮೊತ್ತವನ್ನು ವಿತರಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸೂಚನೆ ನೀಡಿದರು

Ethina Hole Yojana DC Order for  disbursement of land compensation amount as soon as possible  snr

ತುಮಕೂರು: ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಂಡ ಭೂ ಮಾಲೀಕರಿಗೆ ಶೀಘ್ರ ಪರಿಹಾರ ಮೊತ್ತವನ್ನು ವಿತರಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಿಡುಗಡೆಯಾಗಿರುವ ಪರಿಹಾರ ಹಣವನ್ನು ಭೂ ಮಾಲೀಕರಿಗೆ ಕೂಡಲೆ ವಿತರಿಸಬೇಕು. ಖಾತೆಯಲ್ಲಿ 113.36 ಕೋಟಿ ರು. ಪರಿಹಾರ ಹಣವಿದ್ದರೂ ವಿತರಣೆಗೆ ವಿಳಂಬವೇಕೆ? ಸಂಬಂಧಿಸಿದ ಭೂಸ್ವಾಧೀನಾಧಿಕಾರಿಗಳು ತಿಪಟೂರು ತಾಲೂಕಿನ ಹಳೆಪಾಳ್ಯ ಹಾಗೂ ಈಡೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಂಬಂಧಿಸಿದ ಭೂ ಮಾಲೀಕರಿಂದ ಅಗತ್ಯ ದಾಖಲೆಗಳನ್ನು ಪಡೆದು, ಪರಿಹಾರ ವಿತರಿಸಲು ಕ್ರಮವಹಿಸುವಂತೆ ಸೂಚಿಸಿದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 3136 ಎಕರೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಗೆ ವಾರದೊಳಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದರು.

ಎತ್ತಿನಹೊಳೆ ಯೋಜನೆಗೆ ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಎನ್. ಮಂಜುನಾಥ ಮಾತನಾಡಿ, ಸ್ವಾಧೀನಪಡಿಸಿಕೊಂಡ ಭೂಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ಈಗಾಗಲೇ ನೋಟೀಸ್ ನೀಡಲಾಗಿದ್ದು, ಭೂ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವ ಕಾರಣ ಪರಿಹಾರ ಹಣ ವಿತರಣೆಯಲ್ಲಿ ವಿಳಂಬವಾಗಿದೆ. ಅಗತ್ಯ ದಾಖಲೆಗಳು ಸಲ್ಲಿಕೆಯಾದ ನಂತರ ಪರಿಹಾರ ಹಣವನ್ನು ಭೂಮಾಲೀಕರಿಗೆ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಾಲೀಕರಿಂದ ವಂಶವೃಕ್ಷ, ಭೂಹಿಡುವಳಿ ಪತ್ರ, ಋಣಭಾರ ರಾಹಿತ್ಯ ದೃಢೀಕರಣ ಪತ್ರ, ಪಹಣಿ, ಆಧಾರ್‌, ಮ್ಯುಟೇಷನ್, ಬ್ಯಾಂಕ್ ಖಾತೆ ವಿವರ, ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ವಿಶೇಷ ಭೂಸ್ವಾಧೀನಾಧಿಕಾರಿ ಸೋಮಪ್ಪ ಕಡಕೋಳ, ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios