* ಕತಾರ್‌ನಿಂದ 4 ತಿಂಗಳ ಹಿಂದೆ ಆಗಮಿಸಿದ್ದ ವ್ಯಕ್ತಿ ಮರಳಿ ಕತಾರ್‌ಗೆ ವಾಪಸ್‌* ಮೊದಲು ಯುಕೆ ಮತ್ತು ನೈಜೀರಿಯಾ ಭಾಗದಲ್ಲಿ ಈ ಹೊಸ ರೂಪಾಂತರಿ ಪತ್ತೆ*  ಈಟಾ ವರದಿಯಿಂದ ಕೋವಿಡ್‌ ರೂಪಾಂತರಿ ತಳಿಗಳ ಬಗ್ಗೆ ಅಧ್ಯಯನ  

ಮಂಗಳೂರು(ಆ.07): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೋನಾ ರೂಪಾಂತರಿ ವೈರಸ್‌ ‘ಈಟಾ’ ಪ್ರಕರಣ ಪತ್ತೆಯಾಗಿದೆ. ಕತಾರ್‌ನಿಂದ ನಾಲ್ಕು ತಿಂಗಳ ಹಿಂದೆ ಆಗಮಿಸಿದ ವ್ಯಕ್ತಿಯಲ್ಲಿ ಈ ವೈರಸ್‌ ಪತ್ತೆಯಾಗಿದ್ದರೂ ನಂತರ ಅವರು ಗುಣಮುಖರಾಗಿ ಮರಳಿ ಕತಾರ್‌ಗೆ ತೆರಳಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದ ಮೂಡುಬಿದಿರೆ ಮೂಲದ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಕೊರೋನಾ ಪಾಸಿಟಿವ್‌ ದೃಢಪಟ್ಟಿತ್ತು. ನಂತರ ಹೆಚ್ಚಿನ ಪರೀಕ್ಷೆಗಾಗಿ ಅವರ ಗಂಟಲು ದ್ರವ ಮಾದರಿಯನ್ನು ಜಿನೋಮಿಕ್‌ ಸ್ಟಡಿಗೆ ಕಳುಹಿಸಿಕೊಡಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ರೂಪಾಂತರಿ ಈಟಾ ವೈರಸ್‌ ಇದ್ದುದು ದೃಢಪಟ್ಟಿದೆ.

ಮುಂದಿನ ತಿಂಗಳೇ ಕೊರೋನಾ 3ನೇ ಅಲೆ..?

ಸಂಪರ್ಕಿತರೆಲ್ಲ ನೆಗೆಟಿವ್‌: 

ಈ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 150 ಮಂದಿಯನ್ನು ನಾಲ್ಕು ತಿಂಗಳ ಹಿಂದೆಯೇ ಪರೀಕ್ಷೆಗೆ ಒಳಪಡಿಸಿದ್ದು ಎಲ್ಲರಿಗೂ ನೆಗೆಟಿವ್‌ ವರದಿ ಬಂದಿದೆ. ಅವರೆಲ್ಲರೂ ಈಗಲೂ ಆರೋಗ್ಯವಾಗಿದ್ದಾರೆ. ಸೋಂಕಿತ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆದು ಮತ್ತೆ ಕತಾರ್‌ಗೆ ವಾಪಸ್‌ ಹೋಗಿ ಆಗಿದೆ. ಹಾಗಾಗಿ ಆತಂಕಪಡಬೇಕಿಲ್ಲ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಯುಕೆ ಮತ್ತು ನೈಜೀರಿಯಾ ಭಾಗದಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿತ್ತು. ಭಾರತದಲ್ಲಿ ಮಿಜೋರಾಂ ಸೇರಿ ಕೆಲವು ಭಾಗದಲ್ಲೂ ಪತ್ತೆಯಾಗಿತ್ತು. ಇದೀಗ ಬಂದಿರುವ ‘ಈಟಾ’ ವರದಿಯಿಂದ ಕೋವಿಡ್‌ ರೂಪಾಂತರಿ ತಳಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ ಎಂದವರು ಹೇಳಿದ್ದಾರೆ.