Asianet Suvarna News Asianet Suvarna News

ರಾಯಚೂರಿಗೆ ಜವಳಿ ಆಯ್ತು, ಈಗ ಡ್ರಗ್‌ ಪಾರ್ಕ್: ಮುರುಗೇಶ್‌ ನಿರಾಣಿ

*  ರಾಯಚೂರು ಜಿಲ್ಲೆಗೆ ಮತ್ತೊಂದು ಅಪಾಯಕಾರಿ ಘಟಕ
*  ಘೋಷಣೆಗಳಿಗೆ ಸೀಮಿತಗೊಂಡ ಯೋಜನೆಗಳು, ಅನುಷ್ಠಾನ ಗೌಣ
*  ರಾಯಚೂರು-ಯಾದಗಿರಿ ಜಿಲ್ಲೆಗಳ ನಡುವೆ ಬೃಹತ್‌ ಡ್ರಗ್‌ ಪಾರ್ಕ್ ಸ್ಥಾಪಿಸಲು ತೀರ್ಮಾನ 
 

Establishment of a Drug Park in Raichur District Says Murugesh Nirani grg
Author
Bengaluru, First Published Jun 24, 2022, 12:30 PM IST

ರಾಮಕೃಷ್ಣ ದಾಸರಿ

ರಾಯಚೂರು(ಜೂ.24):  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆ ಜನರಿಗೆ ಅಗತ್ಯ ಬೇಡಿಕೆಗಳನ್ನು ನೀಡದೇ ಅನಗತ್ಯ, ಕೇಳದೇ ಇರುವ ಯೋಜನೆ, ಘೋಷಣೆ ಮಾಡುವುದನ್ನು ಮುಂದುವರಿಸಿವೆ. ಜಿಲ್ಲೆ ಜನ ಐಐಟಿ ಬೇಡಿದರೆ, ಬಯಸದ ಐಐಐಟಿ ನೀಡಿದರು, ಏಮ್ಸ್‌ ಕೇಳುತ್ತಿದ್ದರೆ ಅದಕ್ಕೆ ಕಿವಿಗೊಡುತ್ತಿಲ್ಲ. ಇದೀಗ ಥೀಮ್‌ ಪಾರ್ಕ್ ಕೇಳಿದರೆ ಜವಳ ಪಾರ್ಕ್ ನೀಡುವುದಾಗಿ ತಿಳಿಸಿದೆ. ಇದೀಗ ಜನರು ಕೇಳದೇ ಇರುವಂತಹ ಡ್ರಗ್‌ ಪಾರ್ಕ್‌ನ್ನೂ ನೀಡಲು ಮುಂದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಪರಿಸರ ಹಾನಿ ಆರ್ಟಿಪಿಎಸ್‌, ವೈಟಿಪಿಎಸ್‌, ನೂರಾರು ಕೈಗಾರಿಕಾ ಘಟಕಗಳ ಬಳಿಕ ಇದೀಗ ಮತ್ತೊಂದು ಅಪಾಯಕಾರಿ ಬೃಹತ್‌ ಡ್ರಗ್‌ ಪಾರ್ಕ್ ನಿರ್ಮಿಸಲು ನಿರ್ಧರಿಸಿದೆ.

ಮೊನ್ನೆ ಜವಳಿ, ಇಂದು ಡ್ರಗ್‌ ಪಾರ್ಕ್ ಘೋಷಣೆ:

ತುಮಗೂರಿನಲ್ಲಿ ನಡೆದ ಕೈಗಾರಿಕಾ ಅದಾಲತ್‌ನಲ್ಲಿ ಭಾಗವಹಿಸಿದ್ದ ಬೃಹತ್‌ ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್‌ ನಿರಾಣಿ ರಾಯಚೂರು ಜಿಲ್ಲೆಯಲ್ಲಿ ಡ್ರಗ್‌ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಕೃಷ್ಣಾ ನದಿ ಪಕ್ಕದಲ್ಲಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಬೃಹತ್‌ ಡ್ರಗ್‌ ಪಾರ್ಕ್ ನಿರ್ಮಿಸಲು ಉದ್ದೇಶಿಸಿದ್ದು ಅದಕ್ಕಾಗಿ ಕೇಂದ್ರ ಸರ್ಕಾರವು 1 ಸಾವಿರ ಕೋಟಿ ರು. ನೀಡುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಸಹ ಅಗತ್ಯ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕೈಮಗ್ಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಅವರು ಸಹ ಜಿಲ್ಲೆಯಲ್ಲಿ ಜವಳಿ ಪಾರ್ಕ್ ನಿರ್ಮಿಸಿ 5 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದು ಘೋಷಿಸಿದ್ದಾರೆ. ಆದರೆ ಇಲ್ಲಿವರೆಗೆ ಜಾಗ ಗುರುತಿಸುವುದಾಗಲಿ, ಸಭೆಗಳನ್ನು ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಕಾರ್ಯಕ್ಕೆ ಸಚಿವರು ಮುಂದಾಗಿಲ್ಲ, ಹೀಗೆ ಮೊನ್ನೆ ಜವಳಿ ಇಂದು ಡ್ರಗ್ಸ್‌ ಪಾರ್ಕ್ ಜಿಲ್ಲೆಗೆ ಘೋಷಣೆಯಾಗಿದ್ದು, ಅನುಷ್ಠಾನದ ವಿಚಾರವಾಗಿ ಗೌಣತೆ ಪಡೆದುಕೊಳ್ಳಲಿವೆ.

ರಾಯಚೂರು: ಅನ್ನ ಬಸಿಯುವಾಗ ಗಂಜಿ ಬಿದ್ದು ನಾಲ್ಕು ಮಕ್ಕಳಿಗೆ ಗಾಯ

ಜಾಗದ ಕೊರತೆ, ಉದ್ಯೋಗ ಸೃಷ್ಟಿಎಲ್ಲಿ?:

ರಾಯಚೂರು ಜಿಲ್ಲೆಯು ಬೃಹತ್‌ ಕೈಗಾರಿಕಾ ವಲಯವನ್ನು ಈಗಾಗಲೇ ಹೊಂದಿದೆ. ಆರ್ಟಿಪಿಎಸ್‌, ವೈಟಿಪಿಎಸ್‌, ಹಟ್ಟಿಚಿನ್ನದ ಗಣಿ ಸೇರಿದಂತೆ ರಾಜ್ಯದಲ್ಲಿ ಅತೀ ಹೆಚ್ಚು ಅಕ್ಕಿ ಗಿರಣಿ, ಹತ್ತಿ ಮಿಲ್‌ಗಳನ್ನು ಜಿಲ್ಲೆ ಹೊಂದಿದೆ. ಇದರ ಜೊತೆಗೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕ್ಷೇತ್ರಗಳ ಬೃಹತ್‌ ಕೈಗಾರಿಕೆಗಳು ನೆಲೆ ಕಂಡುಕೊಂಡಿದ್ದು, ಹೊಸದಾಗಿ ಬರುವ ಬೃಹತ್‌ ಕೈಗಾರಿಕೆಗಳಿಗೆ ಕೈಗಾರಿಕಾ ಅಭಿವೃದ್ಧಿ ಪ್ರದೇಶ ಇಲಾಖೆಯಡಿ ಬರುವ ಜಮೀನು ಇಲ್ಲದಂತಾಗಿದೆ.

ಮತ್ತೊಂದು ಅಪಾಯಕಾರಿ ಘಟಕ:

ಜಿಲ್ಲೆಯಲ್ಲಿ ಆರ್ಟಿಪಿಎಸ್‌, ವೈಟಿಪಿಎಸ್‌ನಿಂದ ಪರಿಸರ ಹಾನಿಯಾಗುತ್ತಿದೆ, ರಾಯಚೂರು ನಗರದ ಲಿಂಗಸುಗೂರು ರಸ್ತೆಯಲ್ಲಿ ಪವರ್‌ ಗ್ರಿಡ್‌ನಿಂದಾಗಿ ನಗರದ ಬೆಳವಳಿಗೆಯೇ ಕುಂಟಿತಗೊಂಡಿದೆ, ಹೆಚ್ಚಿನ ರಾಸಾಯನಿಕ ಬಳಸಿ ಭತ್ತ ಬೆಳೆಯುತ್ತಿರುವುದರಿಂದ ಇಲ್ಲಿನ ಭೂಮಿ ಬರಡಾಗುತ್ತಿದೆ, ಈಗಿರುವ ಕೈಗಾರಿಕೆಗಳಿಂದ ಕೃಷ್ಣಾ, ತುಂಗಭದ್ರಾ ನದಿ ನೀರು ಕಲುಷಿತಗೊಳ್ಳುತ್ತಿದೆ. ಇಷ್ಟೇಲ್ಲಾ ವಿನಾಶದ ಸಂಗತಿಗಳ ಅಡುವೆ ಮತ್ತೊಂದು ಅಪಾಯಕಾರಿ ಘಟಕವಾಗಿರುವ ಡ್ರಗ್‌ ಪಾರ್ಕ್ ನೀಡಿದಲ್ಲಿ ಪರಿಸರ ನಾಶ ಇನ್ನಷ್ಟುಹೆಚ್ಚಾಗುವ ಆತಂಕ ಶುರುಗೊಂಡಿದೆ.

ದೇಶದ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ಟೀ ಪುಡಿ, ಕೊಬ್ಬರಿ ಎಣ್ಣೆ, ವಾಷಿಂಗ್ ಪೌಡರ್ ಮಾರಾಟ!

ರಾಯಚೂರು-ಯಾದಗಿರಿ ಜಿಲ್ಲೆಗಳ ನಡುವೆ ಬೃಹತ್‌ ಡ್ರಗ್‌ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರವು ಒಂದು ಸಾವಿರ ಕೋಟಿ ಅನುದಾನ ನೀಡುತ್ತಿದೆ ಅಂತ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ. 

ಜಿಲ್ಲೆಗೆ ಬೇಡವಾದ ಯೋಜನೆಗಳನ್ನೇ ಸರ್ಕಾರ ಘೋಷಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಉಸ್ತುವಾರಿ ಸಚಿವರು ಜವಳಿ ಪಾರ್ಕ್ ಮಾಡುವುದಾಗಿ ತಿಳಿಸಿದ್ದಾರೆ. ಆದರೆ ಅದು ಘೋಷಣೆಗೆ ಸೀಮಿತವಾಗಿದೆ. ಇದೀಗ ಡ್ರಗ್‌ ಪಾರ್ಕ್ ಘೋಷಿಸಿದ್ದು ಇದರಿಂದ ಆಗುವ ಅಪಾಯಗಳು ಸಾಕಷ್ಟಿವೆ ಎನ್ನುವುದನ್ನು ಎಲ್ಲರೂ ಅರಿತುಗೊಳ್ಳಬೇಕು ಅಂತ ಉದ್ಯಮಿ ಲಕ್ಷ್ಮೀರೆಡ್ಡಿ ಹೇಳಿದ್ದಾರೆ.  
 

Follow Us:
Download App:
  • android
  • ios