ಬೆಂಗಳೂರು [ಸೆ.12]:   ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಷಯ ಬೋಧನೆ ಮಾಡಲು ಪ್ರಾಧ್ಯಾಪಕರು ಇಲ್ಲದಿದ್ದರೂ ಭಾರತೀಯ ವೈದ್ಯಕೀಯ ಪರಿಷತ್‌ಗೆ (ಎಂಸಿಐ) ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಕಾಲೇಜು ಮಾನ್ಯತೆ ಪಡೆದಿದೆ. ಅಲ್ಲದೆ, ಕಳೆದ ಆರು ವರ್ಷಗಳಿಂದಲೂ ನಿಯಮ ಬಾಹಿರವಾಗಿ ವೈದ್ಯಕೀಯ ಕಾಲೇಜು ನಡೆಸುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ರೋಗಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಕೇಂದ್ರ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ಪತ್ರೆಯಾಗಿರುವ ರಾಜಾಜಿನಗರ ಇಎಸ್‌ಐ ಆಸ್ಪತ್ರೆಯು ಸರ್ಕಾರಿ ಸಂಸ್ಥೆಯಾಗಿರುವ ಭಾರತೀಯ ವೈದ್ಯಕೀಯ ಪರಿಷತ್‌ಗೆ ಸುಳ್ಳು ಮಾಹಿತಿ ನೀಡಿದೆ. 2013ರಲ್ಲಿ ಇಎಸ್‌ಐ ಆಸ್ಪತ್ರೆಯು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಅಗತ್ಯ ಭೋದನಾ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಪೀಣ್ಯ ಇಎಸ್‌ಐ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ತಜ್ಞ ವೈದ್ಯರನ್ನು ಇಎಸ್‌ಐ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರು ಎಂದು ನಕಲಿ ದಾಖಲೆ ಸೃಷ್ಟಿಮಾಡಿದೆ. ಅಲ್ಲದೆ, ಈ ದಾಖಲೆಗಳನ್ನು ಎಂಸಿಐಗೆ ಸಲ್ಲಿಸಿ ವೈದ್ಯಕೀಯ ಕಾಲೇಜಿನ ಮಾನ್ಯತೆ ಪಡೆದಿದೆ. ಈ ಸಂಬಂಧ ಎಂಸಿಐ ರಾಜಾಜಿನಗರ ವೈದ್ಯಕೀಯ ಕಾಲೇಜಿಗೆ ಏಪ್ರಿಲ್‌ನಲ್ಲಿ ತುರ್ತು ನೋಟಿಸ್‌ ಜಾರಿ ಮಾಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮತಿ ಪಡೆಯಬೇಕಾದರೆ ಅಗತ್ಯ ಭೋದಕ ಸಿಬ್ಬಂದಿ ಹೊಂದಿರಬೇಕು. ಜತೆಗೆ ಎಷ್ಟುಹಾಸಿಗೆಯ ಆಸ್ಪತ್ರೆ ಇದೆ, ವೈದ್ಯಕೀಯ ಕಾಲೇಜು ನಡೆಸಲು ಅಗತ್ಯವಿರುವ ಎಲ್ಲಾ ಸೌಕರ್ಯಗಳು ಇವೆಯೇ ಎಂಬ ಮಾಹಿತಿ ಒದಗಿಸಬೇಕು. ಆದರೆ, ರಾಜಾಜಿನಗರ ಆಸ್ಪತ್ರೆಯಲ್ಲಿ ವಿವಿಧ ವಿಷಯಗಳ ಆರು ಸಹಾಯಕ ಪ್ರಾಧ್ಯಾಪಕರ ಕೊರತೆ ಇತ್ತು. ಹೀಗಾಗಿ ರಾಜಾಜಿನಗರ ಆಸ್ಪತ್ರೆಗೆ ಸಂಬಂಧವೇ ಇಲ್ಲದ ಹಾಗೂ ಪ್ರಾಧ್ಯಾಪಕರೂ ಅಲ್ಲದ ಪೀಣ್ಯ ಆಸ್ಪತ್ರೆಯ ಆರು ತಜ್ಞ ವೈದ್ಯರನ್ನು ರಾಜಾಜಿನಗರ ಆಸ್ಪತ್ರೆ ಸಹಾಯಕ ಪ್ರಾಧ್ಯಾಪಕರು ಎಂದು ಸುಳ್ಳು ಮಾಹಿತಿ ನೀಡಲಾಗಿದೆ. ಇದು ದಾವಣಗೆರೆ ಮೂಲದ ನರೇಂದ್ರ ಎಂಬ ವ್ಯಕ್ತಿ ಸಲ್ಲಿಸಿದ ಆರ್‌ಟಿಐ ಅರ್ಜಿಯಿಂದ ಬಯಲಾಗಿದೆ.

 ಎಂಸಿಐ ತುರ್ತು ನೋಟಿಸ್‌

ಪೀಣ್ಯ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಆರ್‌.ಬಿಂದುರಾಜ್‌, ಡಾ.ಅರುಣ್‌ ಉದಯರಾಜ್‌, ಡಾ.ಡಿ.ಸಿ.ಆತ್ಮರಾಮ್‌, ಡಾ.ವಿಶ್ವನಾಥ್‌ ಅಂಕದ, ಡಾ.ಚಂದ್ರಶೇಖರ ಮೂರ್ತಿ, ಡಾ.ಎ.ಕಿರಣ್‌ ಅವರ ಹೆಸರು ಹಾಗೂ ಅವರು ಪೀಣ್ಯ ಆಸ್ಪತ್ರೆಯ ತಜ್ಞ ವೈದ್ಯರು ಎಂದು ಸಾಬೀತುಪಡಿಸುವ ಪೂರಕ ದಾಖಲೆಗಳೊಂದಿಗೆ ಎಂಸಿಐ ರಾಜಾಜಿನಗರ ಇಎಸ್‌ಐ ವೈದ್ಯಕೀಯ ಕಾಲೇಜಿಗೆ ನೋಟಿಸ್‌ ಜಾರಿ ಮಾಡಿದೆ.

ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಸಾಕ್ಷ್ಯಾಧಾರಗಳ ಸಹಿತ ದೂರು ಬಂದಿದೆ. ಈ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡುವಂತೆ ಏಪ್ರಿಲ್‌ ತಿಂಗಳಲ್ಲಿ ನೋಟಿಸ್‌ ಜಾರಿ ಮಾಡಿದೆ. ನೋಟಿಸ್‌ನ ಉತ್ತರ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ನೋಟಿಸ್‌ನಲ್ಲಿ ಹೇಳಿದೆ. ಆದರೆ, ಈವರೆಗೂ ರಾಜಾಜಿನಗರ ಆಸ್ಪತ್ರೆಯಿಂದ ಉತ್ತರ ನೀಡಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.