ವಿಜಯಪುರ[ಡಿ.04]:  ಡಿ.6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕ್ರೀಡಾ ಇಲಾಖೆಯ ಮಹತ್ವದ ಬೋರ್ಡ್‌ ಮೀಟಿಂಗ್‌ನಲ್ಲಿ ವಿಜಯಪುರ ವೆಲೋಡ್ರೋಮ್‌ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಚರ್ಚೆ ನಡೆಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದ್ದಾರೆ.

ನಗರದ ಬಿಎಲ್‌ಡಿಇ ಸಂಸ್ಥೆಯ ನೂತನ ಕ್ಯಾಂಪಸ್‌ನಲ್ಲಿ ಕರ್ನಾಟಕ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೇಶನ್‌ ಹಾಗೂ ವಿಜಯಪುರ ಅಮೆಚೂರ್‌ ಅಸೋಸಿಯೇಶನ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 12ನೇ ರಾಜ್ಯಮಟ್ಟದ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿ.6ರಂದು ಬೆಂಗಳೂರಿನಲ್ಲಿ ಕ್ರೀಡಾ ಇಲಾಖೆಯ ಮಹತ್ವದ ಬೋರ್ಡ್‌ ಮೀಟಿಂಗ್‌ ಸಭೆ ನಡೆಯಲಿದೆ. ಈ ಸಭೆಯಲ್ಲಿ ವೆಲೊಡ್ರೋಮ್‌ ಕುರಿತಂತೆ ಸಮಗ್ರ ವರದಿ ತರಿಸಿಕೊಂಡು, ಸೈಕ್ಲಿಂಗ್‌ ತಜ್ಞರ ಜೊತೆ ಚರ್ಚಿಸಿ, ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸೈಕ್ಲಿಂಗ್‌ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೆ, ಜಿಲ್ಲೆಗೆ ಅವಶ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ವಿಜಯಪುರ ಜಿಲ್ಲೆಯ ಜನತೆ ಹಾಗೂ ಸೈಕ್ಲಿಸ್ಟ್‌ಗಳ ಹಲವು ವರ್ಷಗಳ ವೆಲೊಡ್ರೋಮ್‌ ಕನಸು ನನಸು ಮಾಡಲು ಬದ್ಧ ಎಂದರು.

ಎಲ್ಲ ಕ್ರೀಡೆಗಳಲ್ಲಿಯೇ ಸೈಕ್ಲಿಂಗ್‌ ಸಾಹಸ ಕ್ರೀಡೆಯಾಗಿದೆ. ಹಲವರು ಸೈಕಲ್‌ ಮೇಲೆಯೇ ರಾಜ್ಯ, ರಾಷ್ಟ್ರ ಪ್ರವಾಸ ಕೈಗೊಂಡಿದ್ದು ಕೇಳಿದ್ದೇನೆ. ಆರೋಗ್ಯದ ದೃಷ್ಟಿಯಿಂದಲೂ ಸೈಕ್ಲಿಂಗ್‌ ಅತ್ಯುತ್ತಮವಾದುದು. ಭಾರತೀಯ ಸಂಸ್ಕೃತಿ ಬೆಳೆಸುವ ಜತೆಗೆ ದೇಶವನ್ನು ಒಂದುಗೂಡಿಸುವ ಶಕ್ತಿ ಸೈಕ್ಲಿಂಗ್‌ ಕ್ರೀಡೆಗೆ ಇದೆ ಎಂದರು.

ನೂತನ ಮೈದಾನಕ್ಕೆ 10 ಕೋಟಿ ಬೇಡಿಕೆ:

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಅವಿಭಜಿತ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳು ಸೈಕ್ಲಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ವೆಲೊಡ್ರೋಮ್‌ ಕನಸು ನನಸು ಮಾಡಬೇಕು. ಕ್ರೀಡಾ ಹಬ್‌ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್‌ ಫೂಲ್‌, ಸಿಂಥೆಟಿಕ್‌ ಮೈದಾನ ಸೇರಿದಂತೆ ಹಲವಾರು ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ವಿಜಯಪುರದಲ್ಲಿ ಇನ್ನೊಂದು ಮೈದಾನದ ಅವಶ್ಯಕತೆಯಿದ್ದು, ಬಿಎಲ್‌ಡಿಇ ಸಂಸ್ಥೆ ಎದುರಿನ 8 ಎಕರೆ ಜಾಗದಲ್ಲಿ ಮೈದಾನ ನಿರ್ಮಿಸಲು 10 ಕೋಟಿ ಅನುದಾನ ಕಲ್ಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ವಿಜಯಪುರ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೇಶನ್‌ ಅಧ್ಯಕ್ಷ ರಾಜು ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಪಂ ಸಿಇಒ ಗೋವಿಂದ ರೆಡ್ಡಿ, ಸಂಸ್ಥೆಯ ಎಸ್‌.ಎಂ. ಗೋರೆ, ಸಿ.ಎಂ. ಕುರಣಿ ಮುಂತಾದವರು ಇದ್ದರು.