ತ್ಯಾಜ್ಯ ನೀರನ್ನು ಸಂಸ್ಕರಿಸದೆ ನದಿಗೆ ಬಿಡುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಸ್ಥಳೀಯ ಆಡಳಿತಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ.

ಸುಬ್ರಹ್ಮಣ್ಯ (ಮೇ.26): ತ್ಯಾಜ್ಯ ನೀರನ್ನು ಸಂಸ್ಕರಿಸದೆ ನದಿಗೆ ಬಿಡುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಸ್ಥಳೀಯ ಆಡಳಿತಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ. ಅವರು ಶ್ರೀಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

Add Asianetnews Kannada as a Preferred SourcegooglePreferred

ಕುಮಾರಧಾರಾ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲಿನ ನದಿಗಳಿಗೆ ತ್ಯಾಜ್ಯ ನೀರು ಹರಿಸಲಾಗುತ್ತಿರುವ ಕುರಿತು ಹಲವು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಪರಿಸರ ಇಲಾಖೆಗೆ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಎಲ್ಲ ತ್ಯಾಜ್ಯ ಉತ್ಪಾದನಾ ಸಂಸ್ಥೆಗಳು ಕಡ್ಡಾಯವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿರಬೇಕು ಎಂದು ಸಚಿವರು ಸೂಚಿಸಿದರು.

ಸಂಪುಟ ವಿಸ್ತರಣೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಊಹಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು. ಮುಂಬರುವ ರಾಜ್ಯಸಭೆ ಚುನಾವಣೆಯ ಕುರಿತಂತೆ ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ ಎಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಭಿವೃದ್ಧಿ ಹಾಗೂ ಅರಣ್ಯ ಸಂಬಂಧಿತ ವಿಚಾರಗಳ ಪ್ರಗತಿ ಪರಿಶೀಲನೆಗಾಗಿ ಭೇಟಿ ನೀಡಿರುವುದಾಗಿ ತಿಳಿಸಿದರು.

ಡೀಮ್ಡ್ ಫಾರೆಸ್ಟ್ ಗೊಂದಲಕ್ಕೆ ಶೀಘ್ರ ಪರಿಹಾರ

ರಾಜ್ಯದಲ್ಲಿ ಸುಮಾರು 11,900 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶ ಇರುವುದಾಗಿ ಹೇಳಿದ ಸಚಿವರು, 2022ರಲ್ಲಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸುಮಾರು 3.30 ಲಕ್ಷ ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಉಲ್ಲೇಖಿಸಿರುವುದರಿಂದ ಗೊಂದಲ ಉಂಟಾಗಿದೆ ಎಂದರು. ಈ ಪ್ರದೇಶಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆ, ಕಂದಾಯ ಮತ್ತು ಖಾಸಗಿ ಭೂಮಿಗಳೂ ಸೇರಿಕೊಂಡಿದ್ದು, ಜನವಸತಿ ಪ್ರದೇಶದ ಜನರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಗೊಂದಲವನ್ನು ಶೀಘ್ರ ಪರಿಹರಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು ತಿಳಿಸಿದರು.

ಜನವಸತಿ ಪ್ರದೇಶಗಳು ಅರಣ್ಯ ಭೂಮಿಯೊಳಗೆ ಬಂದಿದ್ದರೆ, ಅಷ್ಟೇ ಪ್ರಮಾಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಯುತ್ತಿದ್ದು, ಈಗಾಗಲೇ 60 ಶೇಕಡಾ ಕಾರ್ಯ ಪೂರ್ಣಗೊಂಡಿದೆ. ಉಳಿದ 40 ಶೇಕಡಾ ಸರ್ವೆಯನ್ನು ಎರಡು ತಿಂಗಳೊಳಗೆ ಮುಗಿಸುವ ಗುರಿ ಹೊಂದಲಾಗಿದೆ ಎಂದರು. ಕಂದಾಯ ಇಲಾಖೆಯ ಸರ್ವೇಯರ್‌ಗಳ ಪ್ರತಿಭಟನೆಯಿಂದ ಸರ್ವೆ ಕಾರ್ಯಕ್ಕೆ ಅಡಚಣೆ ಉಂಟಾಗಿದ್ದು, ಈ ಕಾರ್ಯವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಹೆಚ್ಚುವರಿ ಸರ್ವೇಯರ್‌ಗಳನ್ನು ನೇಮಕ ಮಾಡುವಂತೆ ಸಚಿವ ಸಂಪುಟ ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ

ಜನವಸತಿ ಪ್ರದೇಶಗಳಲ್ಲಿ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದರು. ವನ್ಯಜೀವಿಗಳ ಚಲನವಲನ ಪತ್ತೆಹಚ್ಚಲು ಡ್ರೋನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದ್ದು, ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತ ಆನೆಗಳು ನುಗ್ಗದಂತೆ ಆನೆಕಂದಕ ನಿರ್ಮಾಣ ಹಾಗೂ ಸೋಲಾರ್ ಬೇಲಿ ಅಳವಡಿಸುವ ಕಾರ್ಯ ನಡೆಯಲಿದೆ ಎಂದರು. ಚಿರತೆ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಬೋನುಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಮಾನವ ಜೀವ ರಕ್ಷಣೆ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದರು.

ಕುಕ್ಕೆ ಕ್ಷೇತ್ರ ಪ್ಲಾಸ್ಟಿಕ್ ಮುಕ್ತಕ್ಕೆ ಕ್ರಮ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಕ್ಷೇತ್ರಕ್ಕೆ ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ವೇಳೆ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎರಡು ಹಂತದ ತಪಾಸಣೆ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.

ಅರಣ್ಯ ಒತ್ತುವರಿ ತೆರವು

2015ರ ನಂತರ ನಡೆದ ಅರಣ್ಯ ಒತ್ತುವರಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಆದರೆ ಸಣ್ಣ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ಸುಮಾರು 5,000 ಎಕರೆ ಅರಣ್ಯ ಭೂಮಿಯನ್ನು ಇಲಾಖೆ ವಾಪಸು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ರಸ್ತೆ ಅಭಿವೃದ್ಧಿಗೆ ಇಲಾಖೆ ಅನುಮತಿ ಕಡ್ಡಾಯ

ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ ಸೇರಿದಂತೆ ಅರಣ್ಯ ಪ್ರದೇಶದೊಳಗಿನ ರಸ್ತೆ ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಎಂದು ಸಚಿವರು ತಿಳಿಸಿದರು. ಅರಣ್ಯ ಭೂಮಿ ಬಳಸಬೇಕಾದಲ್ಲಿ ಸಮ ಪ್ರಮಾಣದ ಪರ್ಯಾಯ ಭೂಮಿಯನ್ನು ಇಲಾಖೆಗೆ ನೀಡಬೇಕು. ಜೊತೆಗೆ ವೆಚ್ಚ ಭರಿಸಿ ಕೇಂದ್ರ ಅರಣ್ಯ ಸಚಿವಾಲಯದ ಅನುಮತಿಯನ್ನೂ ಪಡೆಯಬೇಕು ಎಂದು ಹೇಳಿದರು.

ಕುಮಾರಪರ್ವತ ಚಾರಣ ನಿಯಮ ಪರಿಷ್ಕರಣೆ

ಕುಮಾರಪರ್ವತ ಚಾರಣಕ್ಕೆ ನಿಗದಿಪಡಿಸಿರುವ ಸಮಯದ ನಿಯಮಗಳಲ್ಲಿ ಬದಲಾವಣೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಚಾರಣ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲು ಎಸ್‌ಒಪಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಚಾರಣದ ಸಂಪೂರ್ಣ ಉಸ್ತುವಾರಿ ವ್ಯವಸ್ಥಿತಗೊಳಿಸಲಾಗುವುದು ಎಂದರು.