ಬೆಂಗಳೂರು(ಫೆ.18): ಮುಂಬರುವ ಬಿಬಿಎಂಪಿ, ವಿಧಾನಸಭೆ ಉಪ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಜನ್‌ ಡಾಕ್ಯೂಮೆಂಟ್‌ ರೂಪಿಸಿ ಮತದಾರರ ಮುಂದಿಡಲು ಕಾಂಗ್ರೆಸ್‌ ಪಕ್ಷ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಪಕ್ಷದ ನಾಯಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಸರಣಿ ಸಭೆ ನಡೆಸಿದ್ದಾರೆ.

ಬುಧವಾರ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಈಶ್ವರ್‌ ಖಂಡ್ರೆ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್‌, ರಾಮಲಿಂಗಾರೆಡ್ಡಿ, ಎ.ಕೃಷ್ಣಪ್ಪ, ಶಾಸಕರಾದ ಎನ್‌.ಎ.ಹ್ಯಾರಿಸ್‌, ಮಾಜಿ ಶಾಸಕರಾದ ಪ್ರಿಯಾ ಕೃಷ್ಣ, ಆರ್‌.ವಿ.ದೇವರಾಜ್‌ ಸೇರಿದಂತೆ ಹಲವರೊಂದಿಗೆ ಮುಖಾಮುಖಿ ಚರ್ಚೆ ನಡೆಸಿದರು. ಗುರುವಾರವೂ ನಾಯಕರೊಂದಿಗೆ ಸರಣಿ ಸಭೆ ಮುಂದುವರೆಯಲಿದೆ.

ಎರಡು ದಿನಗಳ ಈ ಸಭೆಗಳ ನಂತರ ನಾಯಕರು ನೀಡಿದ ಎಲ್ಲಾ ಮಾಹಿತಿ ಕ್ರೂಢೀಕರಿಸಿ ಚುನಾವಣಾ ರಣತಂತ್ರ ಹಾಗೂ ವಿಜನ್‌ ಡಾಕ್ಯುಮೆಂಟ್‌ ಸಿದ್ಧವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸಭೆಯ ಬಳಿಕ ಮಾತನಾಡಿದ ಸುರ್ಜೇವಾಲಾ, ಬುಧವಾರ ಹಾಗೂ ಗುರುವಾರ ಪ್ರಮುಖ ನಾಯಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಬಿಬಿಎಂಪಿ ಚುನಾವಣೆ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು, ಉಪ ಚುನಾವಣೆ ಬಗ್ಗೆ ಜನಪ್ರತಿನಿಧಿ ಹಾಗೂ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇನೆ. ಎಲ್ಲಾ ಅಭಿಪ್ರಾಯಗಳನ್ನೂ ಕ್ರೂಢೀಕರಿಸಿ ಗ್ರಾಮೀಣ ಭಾಗ ಹಾಗೂ ಬೆಂಗಳೂರು ನಗರಕ್ಕೆ ಪ್ರತ್ಯೇಕ ದೂರದೃಷ್ಟಿಯೊಳಗೊಂಡ ಯೋಜನೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್‌ ಲೀಡರ್ ಭೇಟಿ: ಆಪರೇಷನ್ ಹಸ್ತ ಬಹಿರಂಗಪಡಿಸಿದ ಜೆಡಿಎಸ್ ನಾಯಕ

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಒಬ್ಬೊಬ್ಬರನ್ನೇ ನೇರವಾಗಿ ಮಾತನಾಡಿಸುತ್ತಿದ್ದಾರೆ. ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಗುರುವಾರವೂ ಚರ್ಚೆ ನಡೆಸಲಿದ್ದಾರೆ ಎಂದರು.

ಬಿಜೆಪಿಯಿಂದ ಬರಲು ಸಾಲು ನಿಂತಿದ್ದಾರೆ: 

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕಾಂಗ್ರೆಸ್‌ನಿಂದ ಯಾರೂ ಬಿಜೆಪಿಗೆ ಹೋಗಲ್ಲ. ಅಲ್ಲಿಂದ ಬರುವವರೆ ಸಾಲಿನಲ್ಲಿ ಕಾಯುತ್ತಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇವೆ. ಬಿಜೆಪಿಯಲ್ಲಿರುವವರೇ ಭ್ರಮನಿರಸನಗೊಂಡಿದ್ದಾರೆ. ಇಲ್ಲಿಂದ ಹೋದವರಷ್ಟೇ ಅಲ್ಲ ಅಲ್ಲಿರುವವರೂ ಬರಲು ಸಿದ್ಧರಿದ್ದಾರೆ ಎಂದು ಹೇಳಿದರು.

ಪಾರ್ಕಿಂಗ್‌ ನೀತಿ ಬಗ್ಗೆ ಪ್ರಚಾರ?

ಸಭೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೇಗೆ ಹೋರಾಟ ನಡೆಸಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಪಾರ್ಕಿಂಗ್‌ ನೀತಿ ಸೇರಿದಂತೆ ಯಾವ್ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಪ್ರಚಾರ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಇನ್ನು ಮುಂದಿನ ತಿಂಗಳು ಜಿಲ್ಲಾವಾರು ಸಭೆ ನಡೆಸಿ ಜಿಲ್ಲಾ ಮಟ್ಟದ ನಾಯಕರೊಂದಿಗೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಬಳಿಕ ರಾಜ್ಯದಲ್ಲಿ ಪ್ರವಾಸ ಮಾಡಿ ಮುಖಂಡರ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.