ಸಮಾಜಕ್ಕೆ ಜ್ಞಾನದ ಮೂಲಕ ಬೆಳಕು ಪಸರಿಸಿ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ
ಬೆಳಕು ಜ್ಞಾನದ ಸಂಕೇತ, ದೀಪಕ್ಕೆ ಅಗಾಧವಾದ ಶಕ್ತಿಯಿದೆ. ಸಮಾಜಕ್ಕೆ ಜ್ಞಾನದ ಮೂಲಕ ಬೆಳಕು ಪಸರಿಸಿ ಧಾರ್ಮಿಕ ಭಾವನೆಗಳ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತೆದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ : ಬೆಳಕು ಜ್ಞಾನದ ಸಂಕೇತ, ದೀಪಕ್ಕೆ ಅಗಾಧವಾದ ಶಕ್ತಿಯಿದೆ. ಸಮಾಜಕ್ಕೆ ಜ್ಞಾನದ ಮೂಲಕ ಬೆಳಕು ಪಸರಿಸಿ ಧಾರ್ಮಿಕ ಭಾವನೆಗಳ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತೆದೆ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸುಪ್ರಸಿದ್ಧ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದಲ್ಲಿ ದೇವಾಲಯದ ಟ್ರಸ್ಟ್ ಏರ್ಪಡಿಸಿದ್ದ ಕಾರ್ತೀಕ ಮಾಸದ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿಪಲ್ಲಕ್ಕಿ ಉತ್ಸವ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹೊರಗಿನ ಕತ್ತಲೆ ಕಳೆಯಲು ದೀಪಬೇಕು, ಅಜ್ಞಾನವೆಂಬ ಕತ್ತಲೆ ಕಳೆಯಲು ಗುರುಬೇಕು. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆ ಎಂದು ತಿಳಿಸಿದ ಅವರು, ಕಾರ್ತೀಕ ಮಾಸದ ಲಕ್ಷದೀಪೋತ್ಸವ ಪರಮಾತ್ಮನಿಗೆ ಅತಿ ಪ್ರಿಯವಾದ ಸೇವೆ. ಭಕ್ತರ ಜ್ಞಾನದ ಹಸಿವನ್ನು ನೀಗಿಸಿ ಸುಜ್ಞಾನ ಜ್ಯೋತಿಯನ್ನು ಬೆಳಗಿಸಿ ಪಾವನಗೊಳಿಸುವ ಧಾರ್ಮಿಕ ಪ್ರಜ್ಞೆಯ ಬಗ್ಗೆ ಜಾಗೃತಿ ಗೊಳಿಸುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕಾತೀಕ ದೀಪೋತ್ಸವ ಜ್ಞಾನದ ಸಂಕೇತವಾಗಿದ್ದು, ಮನಸ್ಸಿಗೆ ಬೆಳಕಿನ ಆಶಾಭಾವ ಮೂಡಿಸುತ್ತದೆ. ಉತ್ತಮ ಆಚಾರ ವಿಚಾರ ರೂಢಿಸಿಕೊಂಡು ಮಾನವೀಯ ಮೌಲ್ಯ ಬೆಳಿಸಿಕೊಳ್ಳಬೇಕು. ಶ್ರೀ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ, ಧಾರ್ಮಿಕ ಉತ್ಸವಗಳು ಸಾಂಸ್ಕೃತಿ ಮೆರುಗು ಪಡೆಯುವುದರೊಂದಿಗೆ ಗ್ರಾಮೀಣ ಜನತೆಯಲ್ಲಿ ದೈವ ಭಕ್ತಿ ಮೂಡಿಸುತ್ತಿದೆ ಎಂದರು.
ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಜಿ. ವಾಸುದೇವ ಮಾತನಾಡಿ, ಮಹಾಲಕ್ಷ್ಮಿ ದೇವಾಲಯದಲ್ಲಿ ಕಳೆದ 29 ವರ್ಷಗಳಿಂದ ಕಾರ್ತೀಕ ದೀಪೋತ್ಸವ, ಬೆಳ್ಳಿರಥೋತ್ಸವ ಹಾಗೂ ಮುತ್ತಿನಪಲ್ಲಕ್ಕಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಗೊರನವಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದ್ದು, ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಮಧ್ಯಾಹ್ನ ಪ್ರಸಾದ ವಿತರಣಾ ವ್ಯವಸ್ಥೆ ಮಾಡಬೇಕಾಗಿರುವುದರಿಂದ 12 ಕೋಟಿ ವೆಚ್ಚದಲ್ಲಿ ದೊಡ್ಡ ಸುಸರ್ಜಿತ ಬೋಜನ ಶಾಲೆಯನ್ನು ದೇವಾಲಯದ ಟ್ರಸ್ಟ್ ಮೂಲಕ ನಿರ್ಮಿಸಿ ಉಪಯೋಗಿಸುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಆರ್. ಮುರಳೀಕೃಷ್ಣ, ಖಜಾಂಚಿ ಆರ್. ಜಗದೀಶ್, ಧರ್ಮದರ್ಶಿಗಳಾದ ಡಾ. ಲಕ್ಷ್ಮಿಕಾಂತ ಟಿ.ಎಸ್., ಟಿ.ಆರ್. ನಟರಾಜು, ಎಸ್. ಶ್ರೀಪ್ರಸಾದ್, ರವಿರಾಜೇ ಅರಸ್, ಜಿ.ಎಲ್. ಮಂಜುನಾಥ್, ಓಂಕಾರ್, ಚಿಕ್ಕನರಸಯ್ಯ, ವಿ. ಬಾಲಕೃಷ್ಣ, ನರಸರಾಜು, ಲಕ್ಷ್ಮಿನರಸಯ್ಯ, ಎನ್.ಜಿ. ನಾಗರಾಜು, ದೇವಾಲಯದ ಟ್ರಸ್ಟ್‌ನ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ, ಲಕ್ಷ್ಮಣ್, ಮುಖ್ಯಶಿಕ್ಷಕ ಸೋಮಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.