ಮಂಗಳೂರು(ಜು.15): ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನ ಎಂಡೋಸಲ್ಫಾನ್‌ ಬಾಧಿತ ಸಂತ್ರಸ್ತ ವಿದ್ಯಾರ್ಥಿ ನೂಜಿಬಾಳ್ತಿಲದ ರಾಮ ಮನೋಜ 360 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಇತರರಿಗೆ ಮಾದರಿಯಾಗಿದ್ದಾನೆ.

ವಿಶೇಷ ಚೇತನವಾಗಿರುವ ರಾಮ ಮನೋಜ ರಾಮಕುಂಜದ ಸೇವಾಭಾರತಿಯ ವಿದ್ಯಾಚೇತನ ಶಾಲೆಯ ವಿದ್ಯಾರ್ಥಿ. ಈತ ಬೇರೊಬ್ಬರ ನೆರವಿನಲ್ಲಿ ಉಪ್ಪಿನಂಗಡಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 406 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದ ಈತ ಪಿಯುಸಿಯಲ್ಲೂ ಉತ್ತಮ ಸಾಧನೆ ತೋರಿಸಿ ಇತರರು ಹುಬ್ಬೆರಿಸುವಂತೆ ಮಾಡಿದ್ದಾನೆ. ಕನ್ನಡದಲ್ಲಿ 74, ಇಂಗ್ಲಿಷ್‌ 68, ಇತಿಹಾಸ 42, ಅರ್ಥಶಾಸ್ತ್ರ 50, ಸಮಾಜಶಾಸ್ತ್ರ 50 ಹಾಗೂ ರಾಜ್ಯಶಾಸ್ತ್ರದಲ್ಲಿ 76 ಅಂಕ ಗಳಿಸಿದ್ದಾನೆ.

ತಾಯಿ ಮೃತಪಟ್ಟರೂ SSLC ಮೌಲ್ಯ ಮಾಪನಕ್ಕೆ ಬಂದ ಶಿಕ್ಷಕಿ: ಸಚಿವರ ಪ್ರಶಂಸೆ

ಕಡಬದ ಪಳ್ಳತ್ತಡ್ಕ ನಿವಾಸಿ ಭಾಸ್ಕರ ಗೌಡ ಮತ್ತು ದೇವಕಿ ದಂಪತಿ ಪುತ್ರನಾದ ರಾಮ ಮನೋಜನಿಗೆ ಅಕ್ಕ ಇದ್ದಾರೆ. ಅಲ್ವಸ್ವಲ್ಪ ಕೃಷಿ ಇದ್ದು, ತಂದೆ, ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ರಾಮ ಮನೋಜನಿಗೆ ಮುಂದೆ ಜೀವನೋಪಾಯಕ್ಕಾಗಿ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಅದಮ್ಯಆಕಾಂಕ್ಷೆ ಇದೆ. ಯಾರಾದರೂ ನನಗೆ ಸರ್ಕಾರಿ ಕೆಲಸ ತೆಗೆಸಿಕೊಡಬಹುದು ಎನ್ನುತ್ತಾನೆ.