Asianet Suvarna News Asianet Suvarna News

ಹರಿಹರಪುರ ಮಠದ ಮಹಾ ಕುಂಭಾಭಿಷೇಕ ಸಂಭ್ರಮಕ್ಕೆ ಅದ್ಧೂರಿ ತೆರೆ

* ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಸಂಭ್ರಮಕ್ಕೆ ತೆರೆ
* 14 ದಿನಗಳ ಕಾಲ ಅದ್ದೂರಿಯಾಗಿ ನಡೆದ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು
* ಶ್ರೀ ಆದಿಶಂಕರಾಚಾರ್ಯರು ಸ್ಫಾಪಿಸಿದ ಮಲೆನಾಡಿನ ಶಕ್ತಿ ಪೀಠದಲ್ಲಿ ನಡೆದ ಮಹಾ ಕುಂಭಾಭಿಷೇಕ 
 

end of the Maha Kumbhabhisheka celebration at hariharapura mutt rbj
Author
Bengaluru, First Published Apr 24, 2022, 6:05 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಏ.24) :
ಶ್ರೀ ಆದಿಶಂಕರಾಚಾರ್ಯರು ಸ್ಫಾಪಿಸಿದ ಮಲೆನಾಡಿನ ಶಕ್ತಿ ಪೀಠದಲ್ಲಿ  ಕಳೆದ 14 ದಿನಗಳಿಂದಲೂ ಸಂಭ್ರಮವೂ ಸಂಭ್ರಮ. ಧಾರ್ಮಿಕ ಕಾರ್ಯಕ್ರದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ಕೂ ಶ್ರೀ ಮಠ ಸಾಕ್ಷಿ ಆಗಿತ್ತು. ಇಲ್ಲಿನ ಶ್ರೀ  ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ವೈಭವ್ಯದಿಂದ ಸಂಪನ್ನವಾಯಿತು.

ಮಲೆನಾಡಿನ ತುಂಗಾ ನದಿ ತೀರದಲ್ಲಿ ಹಲವು ಧಾರ್ಮಿಕ ಕೇಂದ್ರಗಳಿವೆ, ಇಲ್ಲಿನ ಧಾರ್ಮಿಕ ಕೇಂದ್ರಗಳು ಜಗತ್ ಪ್ರಸಿದ್ದಿ ಪಡೆದು ಸನಾತನ ಧರ್ಮವನ್ನು ಎಲ್ಲೆಡೆ ಪ್ರಸರಿಸುತ್ತಿದೆ.ಇದರ ಸಾಲಿನಲ್ಲೇ ಬರುವ ಹರಿಹರಪುರದ ಶ್ರೀ ಮಠವೂ ಒಂದು. ಕಳೆದ 12 ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹರಿಹರಪುರದ ಶ್ರಿ ಶಾರದಾ ಲಕ್ಷ್ಮಿನೃಸಿಂಹ ದೇವಾಲಯದ ಪುನರ್ ನಿರ್ಮಾಣದ ಕಾರ್ಯ ಸಂಪನ್ನಗೊಂಡ ಬಳಿಕ ಮಹಾಕಂಭಾಭಿಷೇಕಕ್ಕೆ ಸಾಕ್ಷಿಯಾಯಿತು. ನೂರಕ್ಕೂ ಹೆಚ್ಚು ಪುರೋಹಿತರಿಂದ ಹೋಮ ಹವನಗಳು ನಡೆದ್ರೆ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಗಣ್ಯಾತಿಗಣ್ಯರು ಆಗಮಿಸಿದರು. ಕಳೆದ 14 ದಿನಗಳಿಂದಲೂ ಮಲೆನಾಡಿನಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. 

ಹರಿಹರಪುರ ಮಠದಲ್ಲಿ ಮಹಾ ಕುಂಭಾಭಿಷೇಕ ಸಂಭ್ರಮ

ಇದಕ್ಕೆ ಕಾರಣವಾಗಿರುವುದು ಐತಿಹಾಸಿಕ ಕುಂಭಾಭಿಷೇಕ ಕಾರ್ಯಕ್ರಮ. ಮಹಾಕಂಭಾಭೀಷೇಕದ ನಿಮಿತ್ತ ಶ್ರೀ ಮಠದ ಯಾಗ ಶಾಲೆಯಲ್ಲಿ 14 ದಿನಗಳ ಕಾಲವೂ  ನಿತ್ಯ ಹೋಮ ಹವನಗಳು ನಡೆಯಿತು.14 ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯದಲ್ಲಿ  ನಾಡಿನ ಗಣ್ಯಾತಿಗಣ್ಯರು ಆಗಮಿಸಿ ಗುರುಗಳಿಗೆ ಗುರುವಂದನೆ ಸಲ್ಲಿಸಿದರು.ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ , ಮಾಜಿ ಸಿಎಂ ಯಡಿಯ್ಯೂರಪ್ಪ, ಕೇಂದ್ರ ಸಚಿವೆ  ಶೋಭಾ ಕರಂದ್ಲಾಜೆ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ,ಗೋಪಾಲಯ್ಯ  ಆರೋಗ್ಯ ಸಚಿವ ಸುಧಾಕರ್ , ಶಿಕ್ಷಣ ಸಚಿವ ಬಿ ಸಿ ನಾಗೇಶ್ , ಬಿಜೆಪಿ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ , ಸಂಸದ ತೇಜಸ್ವಿ ಸೂರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್,ಶಾಸಕರಾದ ರವಿ ಸುಬ್ರಹ್ಮಣ್ಯ  ರಾಮದಾಸ್ , ಖಾತ್ಯ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಕನ್ನಡ ಸಾಹಿತ್ತ ಪರಿಷತ್ ನ ಅಧ್ಯಕ್ಷ ಮಹೇಶ್ ಜೋಷಿ , ಅಶೋಕ್ ಹಾರನಹಳ್ಳಿ ಸೇರಿದಂತೆ ಹಲವು ಗಣ್ಯರು ಶ್ರೀ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಧಾರ್ಮಿಕ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಾಕ್ಷಿ
end of the Maha Kumbhabhisheka celebration at hariharapura mutt rbj

ಏಪ್ರೀಲ್ 10ರಿಂದ 24ರ ವರೆಗೂ ಮಠದಲ್ಲಿ ಧಾರ್ಮಿಕ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಲೋಕಕಲ್ಯಾಣ ಕಾರ್ಯಕ್ರಮದಲ್ಲಿ  ಭಕ್ತರ ಶದ್ಧಾ ಭಕ್ತಿ, ಸಡಗರ,ಸಂಭ್ರಮ ಎಲ್ಲೆ ಮೀರಿತು .ಹೌದು ಕಳೆದ 12 ವರ್ಷಗಳ ಹಿಂದೆ ಶಾರದಾ ಪರಮೇಶ್ವರಿ , ಲಕ್ಷ್ಮಿ ನರಸಿಂಹ, ಆಂಜನೇಯ ದೇವಾಲಯ ಪುನರ್ ನಿರ್ಮಾಣದ ಕಾರ್ಯ ಸಂಪನ್ನವಾಗಿತ್ತು. ದೇವಸ್ಥಾನಗಳ ಪುನರ್ ಪ್ರತಿಷ್ಠಾನದ ಅಂಗವಾಗಿ ಹರಿಹರಪುರ ಶ್ರೀ ಮಠದಲ್ಲಿ  ಮಹಾಕುಂಭಾಭಿಷೇಕವು ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನರಸಿಂಹ ಪೀಠದಲ್ಲಿ ವೈಭವದಿಂದ ನಡೆಯಿತು. 

ಹರಿಹರಪುರ ಮಠದ ಶ್ರೀ  ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ  ಕುಂಭಾಭಿಷೇಕದ ಅಂಗವಾಗಿ  ಧಾರ್ಮಿಕ ಕಾರ್ಯಕ್ರಮವೂ ಅಷ್ಟೇ ಸಂಪ್ರಾಯಬದ್ದವಾಗಿ ನಡೆಯುತು..ನಿತ್ಯ ನಡೆದ  ಹೋಮ ಹವನಗಳಲ್ಲಿ ನೂರಕ್ಕೂ ಹೆಚ್ಚು ಪುರೋಹಿತರು ಯಾಗ ಶಾಲೆಯಲ್ಲಿ ಹೋಮ ಹವನವನ್ನು ನಡೆಸಿದರು. ಮಠದಲ್ಲಿ ಯಾಗ ಶಾಲೆಯಲ್ಲಿ  ಏಪ್ರೀಲ್ 10 ರಂದು ಗಣಹೋಮದೊಂದಿಗೆ ಆರಂಭವಾಯಿತು. ನವಗ್ರಹ ಹೋಮ, ಆಧಿವಾಸ ಹೋಮ, ಪ್ರತಿಷ್ಠಾಂಗ ಹೋಮ, ಮಹಾಕುಂಭಾಭಿಷಕ ಮಹೋತ್ಸಕ್ಕೆ ಮಹಾಸಂಕಲ್ಪ, ನವಗ್ರಹ ಮಹಾಯಾಗ, ಲಲಿತಾ , ಗಾಯತ್ರೀ ಮಹಾಯಾಗ , ಕೋಟಿ ತುಳಿಸಿ ಆರ್ಚನೆ, ಲಕ್ಷ ಮೋದಕ ಗಣಪತಿ ಮಹಾಯಾಗ, ಕೋಟಿ ಕುಂಕುಮಾರ್ಚನೆ, ಅಂಜನೇಯ ಮಹಾಯಾಗ,ಧನ್ವಂತರೀ ಮಹಾಯೋಗ, ಸಹಸ್ರ ಚಂಡಿಕಾಮಹಾಯೋಗ ರುದ್ರಹೋಮದ ಜೊತೆಗೆ ಕೊನೆ ದಿನ ಇಂದು ಮಹಾರಥೋತ್ಸವ, ತುಂಗಾನದಿಯಲ್ಲಿ ದೀಪೋತ್ಸವದೊಂದಿಗೆ ತೆಪ್ಪೋತ್ಸವ ನಡೆಯಿತು. 

ರಥೋತ್ಸವದ ಹಿನ್ನೆಲೆಯಲ್ಲಿ ಮಹಿಳೆಯರಿಂದ ಭಜನೆ, ಕೋಲಾಟ, ಟ್ಯಾಬ್ಲೋ ಪ್ರದರ್ಶನವಿತ್ತು. ಹರಿಹರಪುರದ ರಾಜಬೀದಿಯಲ್ಲಿ ಅದ್ದೂರಿ ಆಗಿ ರಥೋತ್ಸವ ನಡೆಯಿತು. ಇಂದು ಸಂಜೆಯ ತೆಪ್ಪೋತ್ಸವ ಹಾಗೂ ದಿಪೋತ್ಸವನ್ನ ನೋಡಲು ಭಕ್ತರ ದಂಡೇ ಹರಿದು ಬಂದಿತ್ತು..ಬೆಳಿಗ್ಗೆ ಯಾಗ ಶಾಲೆಯಲ್ಲಿ ಹೋಮ ಹವನ ನಡೆದ್ರೆ ಸಂಜೆ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಿತು. ನಾದಸ್ವರ, ಹಾಡುಗಾರಿಕೆ, ಭಕ್ತಿ ಸಂಗೀತ, ಹರಿಹರಪುರ ಸ್ಥಳ ಮಹಿಮೆಯ ನೃತ್ಯ ರೂಪಕ , ವಾದ್ಯನಾದ ವೈಭವ, ಕೊನೆ ದಿನ ಯಕ್ಷಗಾನ ನಡೆಯಿತು. 

"

ಹರಹರಪುರ ಹೆಸರು ಬಂದಿರುವ ಹಿನ್ನಲೆಯೇ ಒಂದು ರೋಚಕ 
ತುಂಗಾ ನದಿಯ ತೀರದಲ್ಲಿರುವ ದಿವ್ಯಕ್ಷೇತ್ರ ಹರಿಹರಪುರವು ಸ್ಕಾಂದ ಪುರಾಣದ ಸಹ್ಯಾದ್ರಿ - ತುಂಗಭದ್ರಾ ಕಾಂಡದ ಪ್ರಕಾರ ದಕ್ಷಬ್ರಹ್ಮನು ಯಾಗವನ್ನು ಮಾಡಿರುವ ಪುಣ್ಯಭೂಮಿ. ಪರಮಶಿವನು ಯಜ್ಞಕುಂಡದಿಂದ ಪ್ರಕಟಗೊಂಡ ಪುಣ್ಯಸ್ಥಳ ಎನ್ನವ ಪ್ರತೀತಿ. ಈ ಪೌರಾಣಿಕ ಘಟನೆಗೆ ಸಾಕ್ಷಿಯಾಗಿ ಇಂದಿಗೂ ಇಲ್ಲಿ ಸ್ವಯಂಭೂ ದಕ್ಷಹರ ಸೋಮೇಶ್ವರ ಸ್ವಾಮಿಯನ್ನು ಆರಾಧಿಸಿಕೊಂಡು ಬರಲಾಗುತ್ತಿದೆ.ಇದೇ ಜಾಗದಲ್ಲಿ ಅಗಸ್ತ್ಯ ಮಹರ್ಷಿಗಳು ತಪಸ್ಸನ್ನು ಮಾಡಿದ್ದರು ಎನ್ನುವ ಐತಿಹ್ಯವನ್ನು ಹೊಂದಿದೆ.  ತಪಸ್ಸು ಮಾಡುವ ವೇಳೆಯಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಪ್ರತ್ಯಕ್ಷ ದರ್ಶನವನ್ನು ಹೊಂದಿದ್ದರು ಎನ್ನುವ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಅಗಸ್ತ್ಯ ಮಹರ್ಷಿಗಳು ಅರ್ಚನೆ ಮಾಡಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸಾಲಿಗ್ರಾಮ ಮತ್ತು ಮೂರ್ತಿಗಳಿಗೆ ಇಂದಿಗೂ ಮಠದಲ್ಲಿ ಪೂಜೆ ನಡೆಯುತ್ತಿದೆ. 

ಅಗಸ್ತ್ಯ ಮಹಿರ್ಷಿಗಳ ನಂತರದ ಕಾಲದಲ್ಲಿ ಜಗದ್ಗುರು ಆದಿಶಂಕರ ಭಗವತ್ಪಾದರು ಈ ಪುಣ್ಯಸ್ಥಳದಲ್ಲಿ  ಶ್ರೀಚಕ್ರ ಯಂತ್ರೋದ್ಧಾರವನ್ನು  ಮಾಡಿದ್ದರು.  ಶ್ರೀ ಶಾರದಾ ಪರಮೇಶ್ವರೀ ದೇವಿಯನ್ನು ಪ್ರತಿಷ್ಠಾಪಿಸಿ , ಈ ಧರ್ಮಪೀಠದ  ಮೊದಲ ಪೀಠಾಧಿಪತಿಗಳಾದ ಶ್ರೀಕೃಷ್ಣ ಯೋಗೀಂದ್ರರಿಗೆ ಮಂತ್ರದೀಕ್ಷೆಯನ್ನು  ಅನುಗ್ರಹಿಸಿ ಇಲ್ಲಿಯ ಪೀಠ ಪರಂಪರೆಯನ್ನು ಆರಂಭಿಸಿದ್ರು. ಮಲೆನಾಡಿನ ಹರಿಹರಪುರ ಎನ್ನುವ ಹೆಸರು ಬಂದಿರುವುದಕ್ಕೆ ಒಂದು ಕಾರಣವಿದೆ. ಇಲ್ಲಿನ ಪಟ್ಟಣವೂ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಇತ್ತು. ತುಂಗಾನದಿ ತೀರದಲ್ಲಿ ಇರುವ ಈ ಪಟ್ಟಣಕ್ಕೆ ರಾಜರ ಹೆಸರನ್ನೇ ಇಡಲಾಗಿದೆ. 

ಕ್ರಿಸ್ತಶಕ 1392ರಲ್ಲಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಾದ ಎರಡನೆಯ ಹರಿಹರರಾಯರು ಇಲ್ಲಿ ಅಗ್ರಹಾರವನ್ನು ಕಟ್ಟಿಸಿ , ಶ್ರೀಮಠಕ್ಕೆ ಅನೇಕ ಗ್ರಾಮಗಳನ್ನು ಕಾಣಿಕೆಯಾಗಿ ಸಮರ್ಪಣೆ ಮಾಡಿದರು. ಈ ದಕ್ಷಾಶ್ರಮಕ್ಕೆ ಹರಿಹರಪುರ ಎಂದು ನಾಮಕರಣವನ್ನು ಕೂಡ ಮಾಡಿದ್ದರು.ಅಂದಿನಿಂದಲೂ ಇದು ಹರಹರಪುರ ಎಂದು ಹೆಸರುವಾಸಿ ಆಯಿತು. ಹೀಗೆ ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ ಮತ್ತು ಶ್ರೇಷ್ಠವಾದ ಗುರು ಪರಂಪರೆಯನ್ನು ಹೊಂದಿರುವ ಈ ಧರ್ಮಪೀಠವು ಅನಾದಿಕಾಲದಿಂದಲೂ ಯಾವುದೇ ಭೇದಭಾವವಿಲ್ಲದೆ  ಆಯಾಯ ದೇಶ , ಕಾಲ , ಪರಿಸ್ಥಿತಿಗೆ ತಕ್ಕಂತೆ ಜನರಿಗೆ ಸನ್ಮಾರ್ಗವನ್ನು ಬೋಧಿಸುತ್ತಾ ಹತ್ತು - ಹಲವು ರೀತಿಯಲ್ಲಿ ಸಮಾಜ ಸೇವೆಯನ್ನು ಮಠ ಮಾಡುತ್ತಿದೆ.ಸಣ್ಣ ಪಟ್ಟಣದಲ್ಲಿ ಇರುವ ಹರಹರಪುರಮಠವೂ ಒಂದು ಬೃಹತ್ ಕಾರದಲ್ಲಿ ಬೆಳೆದು ನಿಂತಿದೆ. ಶಾರಾದೆಯ ಮೂಲ ಸ್ಥಾನವಾಗಿರುವ ಹರಹರಪುರ ಮಠವೂ ಸನಾತನ ಧರ್ಮವನ್ನು ಅನುಷ್ಠಾನವನ್ನು ಮಾಡುತ್ತಿದೆ.ಈ  ಧರ್ಮಪೀಠದ 25ನೇ ಪೀಠಾಧಿಪತಿಗಳಾಗಿರುವ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಇಚ್ಚೇಯಂತೆ ಮಠವೂ ಇಂದು ವೃದ್ದಿಯಾಗಿದೆ.ದಕ್ಷಿಣ ಭಾರತದಲ್ಲೇ ಎಲ್ಲೂ ಇಲ್ಲದಂತಹ ದೇವಾಲಯಗಳ ನಿರ್ಮಾಣದ ಕಾರ್ಯವನ್ನು ಮಾಡಿದ್ದಾರೆ. 

ಭಕ್ತರ ಪಾದಗಳನ್ನು ತೊಳೆದು ಸ್ವಾಗತ ಕೋರಿದ ಸ್ವಯಂಸೇವಕರು 
ಮಹಾಕುಂಭಾಭಿಷೇಕದ ನಿಮಿತ್ತ ಮಲೆನಾಡಿನ ಹತ್ತು ತಾಲೂಕಿನ ಎಲ್ಲಾ ಸಮುದಾಯದ ಸುಮಾರು ಎರಡು ಲಕ್ಷ ಮನೆಗಳಿಗೆ ಅಕ್ಷತೆಯೊಂದಿಗೆ ಆಹ್ವಾನ ಪತ್ರಿಕೆಯನ್ನು ಸ್ವಯಂಸೇವಕರು ಖುದ್ದಾಗಿ ಕೊಟ್ಟು ಈ ಮಹಾಕುಂಭಾಭಿಷೇಕ ಮಹೋತ್ಸವಕ್ಕೆ ಆತ್ಮೀಯವಾಗಿ ಆಮಂತ್ರಿಸಿರುವುದು ಮತ್ತೊಂದು ವಿಶೇಷವಾಗಿದೆ. ಈ ಐತಿಹಾಸಿಕ ಮಹಾಕುಂಭಾಭಿಷೇಕ ಮಹೋತ್ಸವೂ ಹಲವು ವಿಶೇಷಗಳನ್ನು ಹೊಂದಿರುವ ಧಾರ್ಮಿಕ ಕಾರ್ಯಕ್ರಮವಾಗಿತ್ತು. ಮಹಾಕುಂಭಾಭಿಷೇಕಕ್ಕೆ ಶ್ರೀಗಳ ಇಚ್ಚೇಯಂತೆ ಯಾವುದೇ ಜಾತಿ ಭೇದಭಾವವನ್ನು ಮಾಡಿದೇ ಮಲೆನಾಡಿನ 10 ತಾಲ್ಲೂಕ್ ಯಾದ ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಕಳಸ ,ಮೂಡಿಗೆರೆ,ತೀರ್ಥಹಳ್ಳಿ,ಸಾಗರದ ಜನರಿಗೆ ಮಂತ್ರಅಕ್ಷತೆಯೊಂದಿಗೆ ಆಹ್ವಾನ ನೀಡಲಾಗಿತ್ತು. ಧರ್ಮಪೀಠಕ್ಕೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ಇಚ್ಚೇಯಂತೆ 30 ಲಕ್ಷ ಜನರಿಗೆ ಶಿವದಕ್ಷೆಯನ್ನು ನೀಡಿದ್ದಾರೆ.

 ಮಠದಲ್ಲಿ ಯಾವುದೇ ಬೇದಭಾವನ್ನು ಶ್ರೀಗಳು ಮಾಡುತ್ತಿಲ್ಲ, ಸನಾತನ ಧರ್ಮವನ್ನು ಪ್ರಸರಿಸಲು ಶ್ರೀ ಮಠ ನಿರಂತರ ಸೇವೆಯನ್ನು ಮಾಡುತ್ತಿದೆ. ಶ್ರೀಗಳ ಇಚ್ಚೇಯಂತೆ ದೇವಾಲಯ ಪುನರ್ ನಿರ್ಮಾಣದ ಕಾರ್ಯ ಮುಗಿದ ತಕ್ಷಣ ಮಹಾಕುಂಭಾಭಿಷೇಕ್ಕೆ ಚಾಲನೆ ನೀಡಿದ್ರು. ಹರಿಹರಪುರ ಮಠದ ಮಾರ್ಗ ಸೇರಿದಂತೆ ಇಡೀ ಪಟ್ಟಣವನ್ನು ಅಲಂಕೃತಗೊಳಿಸಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಮಠದ ಪ್ರವೇಶದ್ವಾರದಲ್ಲಿ ಸ್ವಯಂಸೇವಕರು ಭಕ್ತರ ಪಾದಗಳನ್ನು ತೊಳೆದು ಸ್ವಾಗತಮಾಡುತ್ತಿದ್ದು ವಿಶೇಷವಾಗಿತ್ತು.ಇನ್ನು ಹರಿಹರಪುರ ಮಹಾ ಕುಂಭಾಭಿಷೇಕಕ್ಕೆ ಹೊನ್ನವಾರದಿಂದ  ಆನೆಯು ಆಗಮಿಸಿದ್ದು ಆನೆಗೆ ಶ್ರೀಗಳು ಹಣ್ಣು ಆಹಾರ, ಸ್ನೇಹಪೂರ್ವಕ ಆತಿಥ್ಯವನ್ನು ಪ್ರತಿನಿತ್ಯವೂ ನೀಡುತ್ತಿದ್ದು ವಿಶೇಷವಾಗಿತ್ತು.

 ಹರಿಹರಪುರದಲ್ಲಿ ಪ್ರವಾಸಿಗರು ಹಾಗೂ ನಾಗರೀಕರಿಂದ ಆತಿಥ್ಯ ಸ್ವೀಕರಿಸುತ್ತಿರುವ ಗಜರಾಜ ,ಅಶ್ವ , ಒಂಟೆಗಳು ಎಲ್ಲರ ಕೇಂದ್ರಬಿಂದಾಗಿತ್ತು. ಐತಿಹಾಸಿಕ ಮಹಾಕುಂಭಾಭಿಷೇಕದ ಕಾರ್ಯಕ್ರಮವೂ  ಹೊರನಾಡಿನ ಅನ್ನಪೂಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಷಿ ಅಧ್ಯಕ್ಷತೆಯಲ್ಲಿ ನಡೆಯಿತು. ಒಟ್ಟಾರೆ 14 ದಿನ ಕಾಲ ನಡೆದ  ಕಾರ್ಯಕ್ರದಲ್ಲಿ ಶ್ರೀ ಗಳ ಆರ್ಶೀವಾದ, ಅನ್ನದಾನ , ಧಾರ್ಮಿಕ ಸಭೆಯಲ್ಲಿ  ಲಕ್ಷಾಂತರ ಭಕ್ತರು ಪಾಲ್ಗೊಂಡ್ರು. ಭವ್ಯವಾದ ದೇವಸ್ಥಾನವನ್ನು ನೋಡಿದ ಭಕ್ತರು ಪುಳಕಿತರಾದ್ರು.

Follow Us:
Download App:
  • android
  • ios