Ramanagara: ಬಮೂಲ್ ಆಡಳಿತಾವಧಿ ಅಂತ್ಯ; ರಾಜಕೀಯ ಚಟುವಟಿಕೆ ಚುರುಕು
ಹೈನುಗಾರರ ಜೀವನಾಡಿ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್ ) ಆಡಳಿತ ಮಂಡಳಿಯ ಅಧಿಕಾರದ ಅವಧಿ ಮೇ 12ರಂದು ಮುಕ್ತಾಯಗೊಂಡಿದ್ದು, ಜೂನ್ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿರುವ ಕಾರಣ ರಾಜಕೀಯ ಚಟುವಟಿಕೆ ಚುರುಕು ಪಡೆದುಕೊಂಡಿದೆ.
ರಾಮನಗರ (ಮೇ 16): ಹೈನುಗಾರರ ಜೀವನಾಡಿ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್ ) ಆಡಳಿತ ಮಂಡಳಿಯ ಅಧಿಕಾರದ ಅವಧಿ ಮೇ 12ರಂದು ಮುಕ್ತಾಯಗೊಂಡಿದ್ದು, ಜೂನ್ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿರುವ ಕಾರಣ ರಾಜಕೀಯ ಚಟುವಟಿಕೆ ಚುರುಕು ಪಡೆದುಕೊಂಡಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಹಕಾರ ಇಲಾಖೆ ಬಮೂಲ್ ಆಡಳಿತ ಮಂಡಳಿಯ ಅಧಿಕಾರದ ಅವಧಿಯನ್ನು ಜೂನ್ 6ರವರೆಗೆ ವಿಸ್ತರಣೆ ಮಾಡಿದ್ದು, ಆನಂತರಷ್ಟೇ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆ ಹಾಗೂ ಬೆಂಗಳೂರು ಪದವೀಧರರ ಕ್ಷೇತ್ರ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನ ಹಿಂದೆಯೇ ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಲಿದೆ. ಈಗಾಗಲೇ ಹಾಲಿ ನಿರ್ದೇಶಕರು, ಪರಾಜಿತರ ಜೊತೆಗೆ ಹೊಸ ಮುಖಗಳೂ ಸ್ಪರ್ಧಿಸಲು ತಯಾರಿ ಪ್ರಾರಂಭಿಸಿದ್ದಾರೆ.
ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ವಿರೋಧಿಸುವ ಶಕ್ತಿ ಡಿಕೆಶಿಗಿದೆ: ಮಾಜಿ ಶಾಸಕ ಎ.ಮಂಜುನಾಥ್
ನಿರ್ದೇಶಕ ಸ್ಥಾನಗಳು ಎಷ್ಟು?: ರಾಮನಗರ ಜಿಲ್ಲೆಯ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ, ಕುದೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಆನೇಕಲ್ , ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ಉತ್ತರ ಮತ್ತು ಪೂರ್ವ ಸೇರಿದಂತೆ ಒಟ್ಟು 13 ನಿರ್ದೇಶಕ ಸ್ಥಾನಗಳಿವೆ. 2019ರ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಎಚ್.ಪಿ.ರಾಜಕುಮಾರ್ ಮತ್ತು ಆನೇಕಲ್ ಕ್ಷೇತ್ರದಿಂದ ಬಿ.ಜೆ.ಆಂಜಿನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದಂತೆ ಚನ್ನಪಟ್ಟಣ ಕ್ಷೇತ್ರದಿಂದ ಜಯಮುತ್ತು, ರಾಮನಗರದಿಂದ ಪಿ.ನಾಗರಾಜು, ಮಾಗಡಿ ಕ್ಷೇತ್ರದಿಂದ ನರಸಿಂಹಮೂರ್ತಿ, ಕುದೂರು ಕ್ಷೇತ್ರದಿಂದ ರಾಜಣ್ಣ, ದೇವನಹಳ್ಳಿ ಕ್ಷೇತ್ರದಿಂದ ಬಿ.ಶ್ರೀನಿವಾಸ್ , ಹೊಸಕೋಟೆ ಕ್ಷೇತ್ರ ಸಿ.ಮಂಜುನಾಥ್, ನೆಲಮಂಗಲ ಕ್ಷೇತ್ರ ಜಿ.ಆರ್.ಭಾಸ್ಕರ್ , ದೊಡ್ಡಬಳ್ಳಾಪುರ ಕ್ಷೇತ್ರ ಆನಂದ್ ಕುಮಾರ್ , ಆನೇಕಲ್ ಕ್ಷೇತ್ರ ಆಂಜಿನಪ್ಪ , ಬೆಂಗಳೂರು ದಕ್ಷಿಣ ಕ್ಷೇತ್ರ ಹರೀಶ್ ಕುಮಾರ್ , ಬೆಂಗಳೂರು ಉತ್ತರ ಕ್ಷೇತ್ರ ಕೇಶವಮೂರ್ತಿ ಹಾಗೂ ಬೆಂಗಳೂರು ಪೂರ್ವ ಕ್ಷೇತ್ರದಿಂದ ಎಂ.ಮಂಜುನಾಥ್ ಆಯ್ಕೆಯಾಗಿದ್ದರು.
ಬಮೂಲ್ ನಲ್ಲೂ ಮೈತ್ರಿ ಸಾಧ್ಯತೆ: ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದ ಕಾರಣ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೀಗ ಲೋಕಸಭೆ ಮತ್ತು ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸಿರುವ ಕಾರಣ ಬಮೂಲ್ ನಿರ್ದೇಶಕರ ಚುನಾವಣೆಯಲ್ಲಿಯೂ ಮೈತ್ರಿ ಧರ್ಮಪಾಲನೆಯಾಗುವ ಸಾಧ್ಯತೆಗಳಿವೆ. ಗೆಲುವು ಸಾಧಿಸಬಹುದಾದ ನಿರ್ದೇಶಕ ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಆ ಮೂಲಕ ಅಧಿಕ ನಿರ್ದೇಶಕ ಸ್ಥಾನಗಳನ್ನು ಗೆದ್ದು ಬಮೂಲ್ ಅನ್ನು ವಶಕ್ಕೆ ಪಡೆಯುವ ಲೆಕ್ಕಾಚಾರಗಳು ಉಭಯ ಪಕ್ಷಗಳಲ್ಲಿ ಶುರುವಾಗಿವೆ.
ಸಹಕಾರ ಇಲಾಖೆಯ ಆದೇಶದಲ್ಲಿ ಏನಿದೆ ?: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಸಹಕಾರ ಇಲಾಖೆಯನ್ನು ಒಳಗೊಂಡಂತೆ ಇತರೆ ಇಲಾಖೆಗಳ ಅಧಿಕಾರಿ - ಸಿಬ್ಬಂದಿಯನ್ನು ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಸಹಕಾರ ಸಂಘಗಳ ಚುನಾವಣೆಯನ್ನು ಸಮರ್ಪಕವಾಗಿ ಜರುಗಿಸಲು ಅಗತ್ಯವಾದ ಅಧಿಕಾರಿ-ಸಿಬ್ಬಂದಿಯನ್ನು ನಿಯೋಜಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಮಾರ್ಚ್ ನಿಂದ ಮೇ ತಿಂಗಳ ಅಂತ್ಯದವರೆಗೆ ಆಡಳಿತ ಮಂಡಳಿಯ ಅವಧಿ ಮುಕ್ತಾಯವಾಗಿ, ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆದು, ನಿಗದಿತ ಅವಧಿಯಲ್ಲಿ ಆಡಳಿತ ಮಂಡಳಿ ರಚನೆ ಆಗದೆ ಹೋಗಿದ್ದರೆ, ಅಂತಹ ಎಲ್ಲಾ ಸಹಕಾರ ಸಂಘಗಳಿಗೂ ಕೂಡ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಪ್ರಕರಣ 28ಎ (5)ರಡಿ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಬೇಕಾಗುತ್ತದೆ.
ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಡಿಕೆಶಿ ಮಾಸ್ಟರ್‌ಮೈಂಡ್: ಸಿ.ಪಿ.ಯೋಗೇಶ್ವರ್
ಆದರೆ, ಸಹಕಾರ ಇಲಾಖೆಯನ್ನು ಒಳಗೊಂಡಂತೆ ಇತರೆ ಇಲಾಖೆಯ ಬಹುತೇಕ ಎಲ್ಲಾ ಅಧಿಕಾರಿ - ಸಿಬ್ಬಂದಿ ಸಾರ್ವತ್ರಿಕ ಚುನಾವಣೆಯಲ್ಲಿ ನಿರತರಾಗಿರುವುದರಿಂದ ಆಡಳಿತಾಧಿಕಾರಿಗಳನ್ನು ನೇಮಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಮಾರ್ಚ್ ನಿಂದ ಜೂನ್ ತಿಂಗಳ ಅಂತ್ಯದವರೆಗೆ ಆಡಳಿತ ಮಂಡಳಿಯ ಅವಧಿ ಮುಗಿಯುವ ಹಾಗೂ ಚುನಾವಣೆ ದಿನಾಂಕಗಳನ್ನು ನಿಗದಿ ಪಡಿಸಿ, ಸಾಮಾನ್ಯ ಚುನಾವಣೆ ಪ್ರಕ್ರಿಯೆ ಹಾಗೂ ಆಕಸ್ಮಿಕವಾಗಿ ತೆರವಾದ ಸ್ಥಾನಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿರುವ ಎಲ್ಲ ಸಹಕಾರ ಸಂಘಗಳಿಗೆ ವಿನಾಯಿತಿ ನೀಡಿ, ಆಡಳಿತ ಮಂಡಳಿಯ ಚುನಾವಣೆಗಳನ್ನು ಮುಂದೂಡಿ, ಹಾಲಿ ಇರುವ ಆಡಳಿತ ಮಂಡಳಿಯನ್ನು ಹಾಗೂ ಪದಾಧಿಕಾರಿಗಳನ್ನು ಮುಂದುವರೆಸುವ ಸಂಬಂಧ ನಿಬಂಧಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿ ಸಹಕಾರ ಸಂಘ - ಬ್ಯಾಂಕುಗಳ ಆಡಳಿತ ಮಂಡಳಿ ಚುನಾವಣೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಿ ಹಾಲಿ ಇರುವ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳ ಅವಧಿಯನ್ನು ಮುಂದುವರೆಸಿ ಸಹಕಾರ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎ.ಸಿ.ದಿವಾಕರ್ ಆದೇಶ ಹೊರಡಿಸಿದ್ದಾರೆ.