ಜಗದೀಶ ವಿರಕ್ತಮಠ 

ಬೆಳಗಾವಿ(ಜ.16): ಸರ್ಕಾರಿ ಆಸ್ತಿಯನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದರ ಜತೆಗೆ ಸಂರಕ್ಷಣೆ ಮಾಡುವಂತೆ ಸರ್ಕಾರ ಹಾಗೂ ಹಲವು ನ್ಯಾಯಾಲಯಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿವೆ. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಸರ್ಕಾರಿ ಜಮೀನು ಕಂಡವರ ಪಾಲಾಗುತ್ತಿದೆ. 

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಹೋಬಳಿ ಸುಲ್ತಾನಪುರ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 70 ರಿಂದ 80 ಎಕರೆ ಸರ್ಕಾರಿ ಗೋಮಾಳ (ಗಾಯರಾಣ) ಭೂಮಿಯನ್ನು ಉಳ್ಳವರು ಒತ್ತುವರಿ ಮಾಡಿ, ರಾಜಾರೋಷವಾಗಿ ಉಪಯೋಗಿಸುತ್ತಿದ್ದಾರೆ. ಗೋಮಾಳವನ್ನು ಯಾವುದೇ ಕಾರಣಕ್ಕೂ ಒತ್ತುವರಿ ಆಗದಂತೆ ಆಯಾ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಸಂರಕ್ಷಣೆ ಮಾಡಿಕೊಳ್ಳುವಂತೆ ಸರ್ಕಾರ ಹಾಗೂ ನ್ಯಾಯಾಲಯಗಳು ಮೇಲಿಂದ ಮೇಲೆ ಅಧಿಕಾರಿಗಳಿಗೆ ಆದೇಶಿಸುತ್ತಲೇ ಇವೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳ ಗೋಮಾಳ ಭೂಮಿ ಕಬಳಿಕೆಗೆ ನೀಡಿರುವ ಸಹಕಾರ ಹಾಗೂ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಜಮೀನು ದಿನದಿಂದ ದಿನಕ್ಕೆ ಒತ್ತುವರಿ ಆಗುವುದರ ಜತೆಗೆ ಕಂಡವರ ಪಾಲಾಗುತ್ತಿವೆ ಎಂದು ಸಾರ್ವಜನಿಕರು ಅಧಿಕಾರಿಗಳ ಬೇಜವಾಬ್ದಾರಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅತಿಕ್ರಮಣ ಜಮೀನು: 

ಸುಲ್ತಾನಪುರ ಗ್ರಾಮದ ಪೂರ್ವ ಭಾಗದಲ್ಲಿರುವ ರಿಸ.ನಂ 6 ರಲ್ಲಿ 8 ಎಕರೆ 07 ಗುಂಟೆ, ರಿಸ.ನಂ 21- 16ಎಕರೆ 24 ಗುಂಟೆ, ರಿಸ.ನಂ 71- 25 ಎಕರೆ 30 ಗುಂಟೆ, ರಿಸ.ನಂ 74/1- 2 ಎಕರೆ 21 ಗುಂಟೆ, ರಿಸ.ನಂ 75/1- 1 ಎಕರೆ 13 ಗುಂಟೆ, ರಿಸ.ನಂ 26/1- 3 ಎಕರೆ 23 ಗುಂಟೆ, ರಿಸ.ನಂ 81/1- 5 ಎಕರೆ 14 ಗುಂಟೆ, ರಿಸ.ನಂ 82/2-12 ಎಕರೆ 24 ಗುಂಟೆ, ರಿಸ.ನಂ 84/ ಅ- 12 ಎಕರೆ 26 ಗುಂಟೆ, ರಿಸ.ನಂ 86- 7 ಎಕರೆ 31 ಗುಂಟೆ, ರಿಸ.ನಂ 143-30 ಎಕರೆ 09 ಗುಂಟೆ ಹಾಗೂ ರಿಸ.ನಂ 144 ರಲ್ಲಿ 27 ಎಕರೆ 07 ಗುಂಟೆ ಹೀಗೆ ಒಟ್ಟು 150 ಎಕರೆ 29 ಗುಂಟೆ ಸರ್ಕಾರಿ ಜಮೀನಿದ್ದು, ಈ ಪೈಕಿ ಕೆಲವೊಂದಿಷ್ಟು ಜಮೀನನ್ನು ಸರ್ಕಾರಿ ಯೋಜನೆಗಳಿಗೆ ನೀಡಲಾಗಿದೆ. ಅಲ್ಲದೇ ಸುಮಾರು 70 ರಿಂದ 80 ಎಕರೆ ಜಮೀನನ್ನು ಕಳೆದ ಹಲವು ವರ್ಷಗಳಿಂದ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿದ್ದರೆ, ಇನ್ನೂ ಕೆಲವರು ಜಮೀನಿನಲ್ಲಿರುವ ಮಣ್ಣ (ಗೊರಚು)ನ್ನು ಮಾರಾಟ ಮಾಡುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಭಾವಿಗಳು ಒತ್ತುವರಿ ಮಾಡಿರುವ ಸರ್ವೆ ನಂಬರ್ ಜಮೀನನ್ನು ಸರ್ವೆ ಮಾಡುವಂತೆ ಗ್ರಾಮಸ್ಥರು ಹಾಗೂ ಹಲವು ಹೋರಾಟಗಾರರು ರಾಯಬಾಗ ತಹಸೀಲ್ದಾರಗೆ ಹಾಗೂ ಭೂ ಮಾಪನ ವಿಭಾಗದ ತಹಸೀಲ್ದಾರಗೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳದೇ ಕೈಚೆಲ್ಲಿ ಕುಳಿತಿರುವುದರಿಂದ ರಾಯಬಾಗ ತಾಲೂಕು ಆಡಳಿತದ ಮೇಲೆ ಅನುಮಾನ ಪಡುವುದರ ಜತೆಗೆ ಅಧಿಕಾರಿಗಳ ಉದ್ಧಟತನ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ.

ಅಧಿಕಾರಿಗಳ ಮೇಲೆ ಜನರ ಅನುಮಾನ? 

ಖಾಸಗಿ ಜಮೀನನ್ನು ಪರಭಾರೆ ಮಾಡಬೇಕಾದಲ್ಲಿ ಹತ್ತು ಹಲವು ನಿಯಮಗಳಿವೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದಿಂದಲೇ ಸರ್ಕಾರದ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿರುವುದು ಮಾತ್ರ ವಿಪರ್ಯಾಸ. 
ಸಾಮಾನ್ಯ ವ್ಯಕ್ತಿಗಳು ಲಕ್ಷಾಂತರ ರುಪಾಯಿ ಕೊಟ್ಟು ಖರೀದಿಸಿದ ಜಮೀನನ್ನು ಅವರ ಹೆಸರಿಗೆ ಮಾಡಿಕೊಡಲು ಹಲವಾರು ನಿಯಮಗಳನ್ನು ಹೇಳುವ ಅಧಿಕಾರಿಗಳು ಸರ್ಕಾರ ಜಮೀನನ್ನೇ ಇದೀಗ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಕಾರ್ಯಕ್ಕೂ ಮುಂದಾಗಿದ್ದಾರೆ. ಸರ್ಕಾರದಿಂದ ಒಂದು ರು. ಪರಿಹಾರ ಪಡೆಯಲು ತಿಂಗಳುಗಟ್ಟಲೆ ಕಚೇರಿಯಿಂದ ಕಚೇರಿಗೆ ರೈತರು ಅಲೆದಾಡುವ ಸಂದರ್ಭದಲ್ಲಿ, ಸರ್ಕಾರ ಜಮೀನನ್ನು ಪ್ರಭಾವಿಗಳು ಹಲವು ವರ್ಷಗಳಿಂದ ಒತ್ತುವರಿ ಮಾಡಿ ಕೃಷಿ ಚಟುವಟಿಕೆ ಹಾಗೂ ಮಣ್ಣು ಮಾರಾಟ ಮಾಡುತ್ತಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಲ್ಲಿನ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

* ಸರ್ಕಾರಿ ಜಮೀನು ಒತ್ತುವರಿಯಾಗದಂತೆ ಕೋರ್ಟ್ ಆದೇಶವಿದ್ದರೂ ಪಾಲಿಸದ ಅಧಿಕಾರಿಗಳು 
* ಸಂಬಂಧಿತ ಇಲಾಖೆಯ ಕೆಲ ಅಧಿಕಾರಿಗಳ ಸಹಕಾರದಿಂದ ಅತಿಕ್ರಮಣ. (ಚಿತ್ರ: ಸಾಂದರ್ಭಿಕ ಚಿತ್ರ)