ಮೈಸೂರು(ಅ.01): ಪ್ರತಿ ವರ್ಷವೂ ದಸರಾದಲ್ಲಿ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಎಷ್ಟೇ ಪೂರ್ವಭಾವಿ ಸಭೆ ನಡೆಸಿ, ಏನೆಲ್ಲ ಸಿದ್ಧತೆ ಮಾಡಿಕೊಂಡರೂ ಉದ್ಘಾಟನೆ ವೇಳೆಗೆ ಯಾವುದೂ ಪರಿಪೂರ್ಣವಾಗಿರುವುದಿಲ್ಲ.

ದಸರಾ ವಸ್ತು ಪ್ರದರ್ಶನ, ಮಹಿಳಾ ದಸರಾ, ರಸ್ತೆ ಕಾಮಗಾರಿ, ಪ್ರಚಾರ ಹೀಗೆ ಎಲ್ಲದರಲ್ಲೂ ನ್ಯೂನತೆ ಇದ್ದೇ ಇರುತ್ತದೆ. ಅಂತೆಯೇ ಈ ಬಾರಿಯೂ ಮಹಿಳಾ ಮತ್ತು ಮಕ್ಕಳ ದಸರಾ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ಸಿದ್ಧಪಡಿಸಿರುವ ಮಳಿಗೆಗಳ ಪೈಕಿ ಬಹುಪಾಲು ಭರ್ತಿಯಾಗಿಲ್ಲ. ಸೆ. 30 ರಿಂದ ಅ. 4 ರವರೆಗೆ ನಡೆಯುವ ಈ ಮಹಿಳಾ ದಸರಾದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸದಾ ಸ್ಮರಣೀಯ ದಸರಾ ಸಿರಿ ಪರಂಪರೆಯನ್ನು ನೆನೆದ ಸಿಎಂ ಯಡಿಯೂರಪ್ಪ

ಮಕ್ಕಳಿಂದ ಡೊಳ್ಳು ಕುಣಿತ, ರಸಪ್ರಶ್ನೆ, ರಂಗೋಲಿ ಬಿಡಿಸುವ ಸ್ಪರ್ಧೆ, ಇಡ್ಲಿ ತಿನ್ನುವ ಸ್ಪರ್ಧೆ, ಅಡುಗೆ ಮಾಡುವ ಸ್ಪರ್ಧೆ, ರಸಮಂಜರಿ, ಭರತನಾಟ್ಯ, ಸರ್ಕಾರದ ಯೋಜನೆಗಳ ಕುರಿತು ಅರಿವು, ಜಾನಪದ ಸಿರಿ, ಜಾನಪದ ಗೀತೆಗೆ ಸಮೂಹ ನೃತ್ಯ, ಸಾಂಪ್ರದಾಯ ಉಡುಗೆಯೊಂದಿಗೆ ಫ್ಯಾಷನ್‌ ಶೋ, ಆದರ್ಶ ದಂಪತಿ, ಗಿರಿಜಾ ಕಲ್ಯಾಣ ನಾಟಕ, ನೃತ್ಯರೂಪಕ, ಗುಂಪುಗಾಯನ, ಗಾಂಧಿ ಜಯಂತಿ ಸಂಬಂಧ ಮಕ್ಕಳಿಂದ ಕಾರ್ಯಕ್ರಮ, ಬೇಬಿ ಜ್ಞಾನಳಿಂದ ಗಾಯನ ಮತ್ತು ನೃತ್ಯ, ನಮ್ಮ ಕನಸು ಕಿರು ನಾಟಕ, ಮಾತನಾಡುವ ಬೊಂಬೆ ಕಾರ್ಯಕ್ರಮ, ವಿಶೇಷ ಚೇತನ ಮಕ್ಕಳಿಗೆ ಪ್ರತಿಭಾ ಪ್ರದರ್ಶನ, ಹಿರಿಯ ನಾಗರೀಕರಿಂದ ವಿವಿಧ ಸ್ಪರ್ಧೆ, ಸಂಗೀತ ಸಂಜೆ, ಹಾಸ್ಯೋತ್ಸವ, ಮಿಮಿಕ್ರಿ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಯಲಿದೆ.

ನಾಲ್ಕು ದಿನ ಮಾತ್ರ ಬಾಕಿ:

ಆದರೆ ದುರಾದೃಷ್ಟವಶಾತ್‌ ಮಹಿಳಾ ದಸರಾ ಅಂಗವಾಗಿ ನಿರ್ಮಿಸಿರುವ ಸುಮಾರು 30ಕ್ಕೂ ಹೆಚ್ಚು ಮಳಿಗೆಳ ಪೈಕಿ 20 ರಿಂದ 25 ಮಳಿಗೆ ಖಾಲಿ ಇದೆ. ಉದ್ಘಾಟನೆ ಪೂರ್ಣಗೊಳ್ಳುವವರೆಗೆ ಮೊದಲ ದಿನ ಮುಗಿದೇ ಹೋಯಿತು. ಇನ್ನು ಉಳಿಯುವುದು ಕೇವಲ ನಾಲ್ಕು ದಿನ ಮಾತ್ರ ಅಷ್ಟರೊಳಗೆ ಮಳಿಗೆ ಭರ್ತಿಯಾಗಬೇಕು.

ದಸರಾದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ

ಆದರೆ ಸೋಮವಾರದ ಪರಿಸ್ಥಿತಿ ನೋಡಿದರೆ ಮಹಿಳಾ ದಸರಾ ಮುಗಿದರೂ ಅನೇಕ ಮಳಿಗೆ ಖಾಲಿಯಾಗಿಯೇ ಉಳಿಯುತ್ತವೆ ಎನ್ನಿಸುತ್ತದೆ. ಏಕೆಂದರೆ ಇಲಾಖೆ ಅಧಿಕಾರಿಗಳು ಬಹುಶಃ ಲೆಕ್ಕಕ್ಕೆ ಮಾತ್ರವಷ್ಟೇ ಮಳಿಗೆಗಳನ್ನು ನಿರ್ಮಿಸಿ ಹಾಗೆಯೇ ಬಿಟ್ಟಿದ್ದಾರೆ. ಅನೇಕರಿಗೆ ಮಳಿಗೆಗಳು ಅಲಾಟ್‌ ಆಗಿರಲಾರದು. ದಸರಾಗೆ ಸುಮಾರು ಒಂದು ತಿಂಗಳ ಮುಂಚೆಯೇ ಸಿದ್ಧತೆ ಮಾಡಿಕೊಂಡರೂ ಕರಕುಶಲ ಕರ್ಮಿಗಳಿಗೆ, ಮಹಿಳೆಯರು ತಯಾರಿಸಿದ ಉತ್ಪನ್ನಗಳು, ತಿಂಡಿ ತಿನಿಸು ಹೀಗೆ ಯಾವುದಾದರೊಂದು ಮಹಿಳಾ ಸಂಘಕ್ಕೆ ಮಳಿಗೆ ನೀಡಿದರೆ ತುಂಬಿದಂತೆಯೂ ಆಗುತ್ತದೆ ಮತ್ತು ಅವರಿಗೆ ನೆರವಾಗುತ್ತದೆ. ಆದರೆ ಎಡ ಭಾಗದ ಬಹುಪಾಲು ಮಳಿಗೆ ತುಂಬಿರುತ್ತದೆ. ಬಲ ಭಾಗದ ಮಳಿಗೆಗಳು ಖಾಲಿ ಬಿದ್ದಿರುತ್ತವೆ.

ಇದು ಪ್ರತಿ ವರ್ಷ ಪುನರಾವರ್ತನೆ ಆಗುತ್ತಿದೆ. ಇದೇ ಪರಿಸ್ಥಿತಿ ದಸರಾ ವಸ್ತು ಪ್ರದರ್ಶನದಲ್ಲಿಯೂ ಇದೆ. ಮಹಿಳಾ ದಸರಾ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಮಹಿಳೆಯರು ಆಗಮಿಸಿದ್ದರೂ, ಮಳಿಗೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಕೆಲವು ಸ್ಪರ್ಧೆಗಳು ನಡೆಯುತ್ತಿರುವುದನ್ನು ಹೊರತುಪಡಿಸಿದರೆ ಮಹಿಳಾ ದಸರಾದಲ್ಲಿ ವಿಶೇಷವಾಗಿ ಏನೂ ಕಾಣಿಸುವುದಿಲ್ಲ.

ಪಿಂಗಾಣಿ ಮತ್ತು ಮಣ್ಣಿನಿಂದ ತಯಾರಿಸಿದ ಕೆಲವು ಅಲಂಕಾರಿಕ ವಸ್ತು, ಕೈಮಗ್ಗದ ಉತ್ಪನ್ನ ಮತ್ತು ಆಯುರ್ವೇದ ಔಷಧಿಯನ್ನು ಬಿಟ್ಟರೆ ಇನ್ನು ಅನೇಕಾರು ಮಳಿಗೆಳು ಕಾರ್ಯಾರಂಭ ಮಾಡಬೇಕಿದೆ.

-ಮಹೇಂದ್ರ ದೇವನೂರು